
ವಿಜಯ್ ದೇವರಕೊಂಡ ನಟಿಸಿರುವ, ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31) ಬಿಡುಗಡೆ ಆಗಿದೆ. ‘ಈ ಸಿನಿಮಾಕ್ಕೆ ವೃತ್ತಿ ಜೀವನದಲ್ಲೇ ಅತ್ಯಂತ ಶ್ರಮ ಹಾಕಿದ್ದೇನೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದರು. ಅದು ಸಿನಿಮಾದ ಪ್ರತಿ ದೃಶ್ಯದಲ್ಲೂ ಕಾಣುತ್ತದೆ. ವಿಜಯ್ ದೇವರಕೊಂಡ ಮಾತ್ರವೇ ಅಲ್ಲ ಸಿನಿಮಾದ ಎಲ್ಲ ಪ್ರಮುಖ ತಂತ್ರಜ್ಞರೂ ಸಹ ತಮ್ಮ ಪಾಲಿನ ಬೆಸ್ಟ್ ಅನ್ನು ಕೊಟ್ಟಿರುವುದು ಪ್ರತಿ ದೃಶ್ಯದಲ್ಲೂ ಸ್ಪಷ್ಟವಾಗಿ ಕಾಣುತ್ತದೆ. ಸ್ಪೈ ಥ್ರಿಲ್ಲರ್ ಆಗಿದ್ದರೂ ಸಹ ಸಿನಿಮಾದಲ್ಲಿ ಸಹೋದರರ ಸೆಂಟಿಮೆಂಟ್ ಅನ್ನು ಹದವಾಗಿ ಬೆರೆಸಿ ಒಂದೊಳ್ಳೆ ಕಮರ್ಶಿಯಲ್ ಸಿನಿಮಾವನ್ನು ನಿರ್ದೇಶಕ ಗೌತಮ್ ತಿನ್ನನೂರಿ ‘ಕಿಂಗ್ಡಮ್’ ಸಿನಿಮಾ ಮೂಲಕ ನೀಡಿದ್ದಾರೆ.
ಸಿನಿಮಾದ ನಾಯಕ ಸೂರಿ ಸಾಮಾನ್ಯ ಕಾನ್ಸ್ಟೇಬಲ್, ಅವನ ಗುರಿ ಒಂದೇ ಅಪ್ಪನನ್ನು ಕೊಂದು (?) ಮನೆ ಬಿಟ್ಟು ಓಡಿ ಹೋಗಿರುವ ಅಣ್ಣನನ್ನು ವಾಪಸ್ ಮನೆಗೆ ಕರೆದುಕೊಂಡು ಬರಬೇಕು. ಆದರೆ ಅವರ ಅಣ್ಣ ಬಿಡುಗಡೆಯೇ ಇಲ್ಲದ ಪಾತಕಿಗಳ ಲೋಕದಲ್ಲಿ ಸಿಲುಕಿಕೊಂಡಿದ್ದಾನೆ. ಅಲ್ಲಿ ಅವನನ್ನೇ ನಂಬಿರುವ ದೊಡ್ಡ ಜನಸಮೂಹವೆ ಇದೆ. ಅವರೆಲ್ಲ ತಮ್ಮನ್ನು ರಕ್ಷಿಸಲು ಬರುವ ರಾಜನಿಗಾಗಿ ಕಾಯುತ್ತಿದ್ದಾರೆ. ಇಂಥಹಾ ಸಮಯದಲ್ಲಿ ನಾಯಕನಿಗೆ ಗೂಢಚಾರಿಯಾಗಿ ಆ ಪಾತಕ ಲೋಕಕ್ಕೆ ಹೋಗುವ ಅವಕಾಶ ದೊರೆಯುತ್ತದೆ. ಅಣ್ಣನನ್ನು ಬಿಡಿಸುವ ಅವಕಾಶ ದೊರೆಯುತ್ತದೆ.
ಆದರೆ ಅದು ಅಷ್ಟು ಸುಲಭವಿಲ್ಲ. ಇಲ್ಲಿ ಕೈಯ್ಯಲ್ಲಿ ಕತ್ತಿ, ಬಂದೂಕು ಹಿಡಿದು ಕ್ರೂರ ಮೃಗಳಂತೆ ಜನರನ್ನು ಕೊಲ್ಲುವ ಪಾತಕಿಗಳ ಜೊತೆಗೆ ಕಾನೂನಿನ ಚೌಕಟ್ಟಿನಡಿ ಅಧಿಕಾರ ಬಳಸಿ ಮನುಷ್ಯರೊಂದಿಗೆ ಚದುರಂಗ ಆಡುವ ಕಿರಾತಕರೂ ಇದ್ದಾರೆ. ಅಣ್ಣನನ್ನು ಚಕ್ರವ್ಯೂಹದಿಂದ ಬಿಡಿಸಲು ಹೋಗುವ ನಾಯಕ ಇನ್ನೂಂದು ಚಕ್ರವ್ಯೂಹದಲ್ಲಿ ಸಿಲುಕಿಕೊಳ್ಳುತ್ತಾನೆ. ಅಲ್ಲಿಂದ ಅವನು ಬಿಡಿಸಿಕೊಳ್ಳುತ್ತಾನಾ? ಅಣ್ಣನನ್ನು ಪಾರು ಮಾಡುತ್ತಾನಾ? ಶೋಷಿತ ಸಮುದಾಯದ ರಾಜನಾಗುತ್ತಾನಾ ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.
ಇದು ಸಾಮಾನ್ಯ ಕಮರ್ಶಿಯಲ್ ಸಿನಿಮಾ ಅಲ್ಲ ಎಂಬುದನ್ನು ನಿರ್ದೇಶಕ ಮೊದಲಲ್ಲೇ ತಿಳಿಸಿಬಿಡುತ್ತಾರೆ. ಇಲ್ಲಿ ಅಬ್ಬರದ ಹೀರೋ ಎಂಟ್ರಿ ಆಗುವುದಿಲ್ಲ, ಜ್ಯೂನಿಯರ್ ಆರ್ಟಿಸ್ಟುಗಳನ್ನು ಗುಡ್ಡೆ ಹಾಕಿಕೊಂಡು ಆಡುವ ಡ್ಯಾನ್ಸುಗಳಿಲ್ಲ. ಕ್ಲೀಷೆ ಜೋಕುಗಳನ್ನು ಮಾಡಲು ಕಾಮಿಡಿ ಪಾತ್ರಗಳಿಲ್ಲ. ನಡು ತೋರಿಸಿ, ಹೀರೋ ಹಿಂದೆ ಸುತ್ತುವ ನಾಯಕಿ ಇಲ್ಲ. ಯುಗಳ ಗೀತೆಗಳಿಲ್ಲ. ಇದೇ ಕಾರಣಕ್ಕೆ ಸಿನಿಮಾ ಇತರೆ ಕಮರ್ಶಿಯಲ್ ತೆಲುಗು ಮಸಾಲಾ ಸಿನಿಮಾಗಳಿಂದ ಬಲು ಭಿನ್ನವಾಗಿ ಕಾಣುತ್ತದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ: ಹೇಗಿದೆ ಫಸ್ಟ್ ಹಾಫ್?
ಸಿನಿಮಾದ ಬಹುತೇಕ ಕತೆ ನಡೆಯುವುದು ಶ್ರೀಲಂಕಾನಲ್ಲಿ. ಮೊದಲಾರ್ಧದಲ್ಲಿ ಬರುವ ಬೋಟ್ ಚೇಸ್, ಚಿನ್ನ ಕದಿಯುವ ದೃಶ್ಯಗಳು ಥ್ರಿಲ್ ನೀಡುತ್ತವೆ. ಸಿನಿಮಾದ ಚಿತ್ರೀಕರಣ ಮಾಡಿರುವ ರೀತಿ, ಲೊಕೇಶನ್ಗಳು ಸಹ ಚೆನ್ನಾಗಿವೆ. ಚಿತ್ರತಂಡ ಹಾಕಿರುವ ಶ್ರಮ ಎದ್ದು ಕಾಣುತ್ತದೆ. ಮೊದಲಾರ್ಧದಲ್ಲಂತೂ ಸಿನಿಮಾದ ಕತೆ ಪ್ರತಿ ಕೆಲ ನಿಮಿಷಗಳಿಗೆ ಭಿನ್ನ ತಿರುವು ತೆಗೆದುಕೊಂಡು ಮುಂದೇನೂ ಎಂದು ಸೀಟಿನ ತುದಿಗೆ ಕೂರುವಂತೆ ಮಾಡುತ್ತದೆ. ದ್ವಿತೀಯಾರ್ಧದಲ್ಲಿ ಎಲ್ಲ ಪಾತ್ರಗಳ ಮುಖವಾಡ ಕಳಚಿ ಬಿದ್ದು ಒಳಿತು-ಕೆಡುಕಿನ ನಡುವೆ ಯುದ್ಧ ನಡೆಯುತ್ತದೆ. ದ್ವಿತೀಯಾರ್ಧದಲ್ಲಿ ಆಕ್ಷನ್ ಮತ್ತು ಭಾವುಕ ಸನ್ನಿವೇಶದಲ್ಲಿ ವಿಜಯ್ ನಟನೆ ಗಮನ ಸೆಳೆಯುತ್ತದೆ.
ಸಿನಿಮಾನಲ್ಲಿ ಎಲ್ಲ ಪ್ರಮುಖ ಪಾತ್ರಧಾರಿಗಳ ನಟನೆ ಅದ್ಭುತವಾಗಿದೆ. ವಿಜಯ್ ದೇವರಕೊಂಡ, ಸತ್ಯದೇವ್, ವಿಲನ್ ಪಾತ್ರದಲ್ಲಿ ನಟಿಸಿರುವ ವಿಪಿ ವೆಂಕಿಟೇಶ್, ನಾಯಕಿ ಭಾಗ್ಯಶ್ರೀ ಬೋರ್ಸೆ ಎಲ್ಲರ ನಟನೆಯೂ ಚೆನ್ನಾಗಿದೆ. ವಿಜಯ್, ತಮ್ಮ ಲವರ್ಬಾಯ್ ಲುಕ್ ಬಿಟ್ಟು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪ್ರಮುಖ ಅಂಶವೆಂದರೆ ಸಿನಿಮಾಟೊಗ್ರಫಿ ಮತ್ತು ಹಿನ್ನೆಲೆ ಸಂಗೀತ. ಎರಡೂ ಸಹ ಸಿನಿಮಾಕ್ಕೆ ಬಹುದೊಡ್ಡ ಕಾಣ್ಕೆ ನೀಡಿವೆ. ಅನಿರುದ್ಧ್ ಸಂಗೀತ ಪ್ರತಿ ದೃಶ್ಯಕ್ಕೂ ಹೆಚ್ಚಿನ ಪರಿಣಾಮ ಒದಗಿಸಿದೆ. ದ್ವಿತೀಯಾರ್ಧದಲ್ಲಿ ಕತೆ ತುಸು ಗ್ರಿಪ್ ಕಳೆದುಕೊಂಡಂತೆ ಭಾಸವಾದರೂ ಸಹ, ಸಿನಿಮಾ ಪ್ರೇಕ್ಷಕನ ಮೇಲೆ ಬೀರುವ ಒಟ್ಟಾರೆ ಪರಿಣಾಮವ್ನೇನೂ ಕಡಿಮೆ ಮಾಡುವುದಿಲ್ಲ. ಒಟ್ಟಾರೆಯಾಗಿ, ವಿಜಯ್ ದೇವರಕೊಂಡಗೆ ಕೊನೆಗೂ ಜಯವನ್ನು ಈ ಸಿನಿಮಾ ತಂದುಕೊಡುವ ಭರವಸೆ ಮೂಡಿಸಿದೆ ‘ಕಿಂಗ್ಡಮ್’. ಅಂದಹಾಗೆ ಸಿನಿಮಾದ ಎರಡನೇ ಭಾಗ ಸಹ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Thu, 31 July 25