ಭಾರತ ಮತ್ತು ಪಾಕಿಸ್ತಾನದ ನಡುವಿನ 1971ರ ನಡುವಿನ ಯುದ್ಧದ ಕತೆಯನ್ನೊಳಗೊಂಡ ಭುಜ್ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಅಜಯ್ ದೇವಗನ್, ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಶರದ ಕೇಲ್ಕರ್, ಪ್ರಣೀತಾ ಸುಭಾಷ್ ಮೊದಲಾದ ದೊಡ್ಡ ತಾರಾಗಣವೇ ಇದೆ. ಭರ್ಜರಿ ಆಕ್ಷನ್ ದೃಶ್ಯಗಳ ಸಣ್ಣ ಸಣ್ಣ ತುಣುಕುಗಳು ಹಾಗೂ ಭಾವಪೂರ್ಣ ಸನ್ನಿವೇಶಗಳ ತುಣುಕುಗಳನ್ನು ಸೇರಿಸಿ ಟೀಸರ್ ಅನ್ನು ಕತ್ತರಿಸಲಾಗಿದೆ. ಚಿತ್ರವು ನೋಡುಗರನ್ನು ಕುರ್ಚಿಯ ಮೇಲೆ ಹಿಡಿದು ಕೂರಿಸುವುದು ಖಂಡಿತ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಹಾಟ್ಸ್ಟಾರ್ ವಿಐಪಿಯಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಟೀಸರ್ ಹಾಟ್ಸ್ಟಾರ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಭಾರತೀಯ ಸ್ಕ್ವಾರ್ಡನ್ ವಾಯು ಸೇನೆಯ ಮುಖ್ಯಸ್ಥರಾಗಿದ್ದ ವಿಜಯ್ ಕಾರ್ಣಿಕ್ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಲಿದೆ. 1971ರಲ್ಲಿ ವಿಜಯ್ ಕಾರ್ಣಿಕ್ ಅವರು ಭುಜ್ ಏರ್ಪೋರ್ಟ್ನ ಉಸ್ತುವಾರಿ ವಹಿಸಿಕೊಂಡಿದ್ದರು. ದೇಶದ ರಕ್ಷಣೆಗಾಗಿ 300 ಜನ ಮಹಿಳೆಯರನ್ನು ಬಳಸಿಕೊಂಡು ಆ ವಿಮಾನ ನಿಲ್ದಾಣವನ್ನು ಹೇಗೆ ಮರು ನಿರ್ಮಿಸಿದರು ಎಂಬುದನ್ನು ಕತೆಯು ಕಟ್ಟಿಕೊಡಲಿದೆ.
1971ರ ಕಾಲ ಘಟ್ಟದ ನಿರ್ಮಾಣ, ಸಾಹಸ ದೃಶ್ಯಗಳು, ಭುಜ್ನ ಜನರು ಮೊದಲಾದವುಗಳನ್ನು ಒಳಗೊಂಡಿರುವ ಈ ಟೀಸರ್ನಲ್ಲಿ ಕೊನೆಗೆ ಅಜಯ್ ದೇವಗನ್ ಎದ್ದು ಬರುತ್ತಾರೆ. ಸೈನಿಕನ ಹಿರಿಮೆ ಸಾರುವ ಸಾಲುಗಳನ್ನು ಪ್ರಚುರಪಡಿಸುವ ಅವರು, ಸೈನಿಕ ಬದುಕಿರುವುದೇ ಪ್ರಾಣ ತ್ಯಾಗಕ್ಕಾಗಿ. ನನ್ನ ಹೆಸರು ಸಿಪಾಯಿ ಎನ್ನುವ ಸಂಭಾಷಣೆಯನ್ನು ಹೇಳುತ್ತಾರೆ. ದೇಶದ ಮುಂದೆ ವ್ಯಕ್ತಿ ವಿಶೇಷಣಗಳು ಗೌಣ, ನಾನು ಸೈನಿಕ ಎಂಬ ಭಾವವೊಂದೇ ಗಟ್ಟಿಯಾಗಿ ನಿಲ್ಲುವುದು ಎಂದು ಹೇಳುವ ಅವರ ಸಂಭಾಷಣೆಯಲ್ಲೇ ಚಿತ್ರ ಯಾವುದನ್ನು ಪ್ರಮುಖವಾಗಿ ಕೇಂದ್ರೀಕರಿಸಲಿದೆ ಎಂಬುದನ್ನೂ ವೀಕ್ಷಕರು ಊಹಿಸಬಹುದು.
ಚಿತ್ರವನ್ನು ಅಭಿಷೇಕ್ ದುಧೈಯಾ ನಿರ್ದೇಶಿಸುತ್ತಿದ್ದು, ಭೂಷಣ್ ಕುಮಾರ್, ಗಿನ್ನಿ ಖನುಜಾ ಸೇರಿದಂತೆ ಏಳು ಜನ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಸೀಮ್ ಬಜಾಜ್ ಅವರ ಛಾಯಾಗ್ರಹಣ ಹಾಗೂ ಅಮರ್ ಮೋಹಿಲೆ ಅವರ ಹಿನ್ನೆಲೆ ಸಂಗೀತವಿದೆ.
ಇದನ್ನೂ ಓದಿ: Kannada Movies: ಯೂಟ್ಯೂಬ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದ ಕನ್ನಡದ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬೇಕೆ?
(Much awaited Bhuj movie teaser released starring Ajay Devgan and Sonakshi Sinha)