ಶ್ರೀಲಂಕಾದ ಮಾಜಿ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರ ಜೀವನದ ಕುರಿತು ಸಿನಿಮಾ ಸಿದ್ಧವಾಗಿದೆ. ಈ ಚಿತ್ರಕ್ಕೆ ‘800’ ಎಂದು ಹೆಸರು ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಮೇಲೆ ಕ್ರಿಕೆಟ್ ಪ್ರೇಮಿಗಳು ಹಾಗೂ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ‘800’ ಚಿತ್ರದ ಟ್ರೇಲರ್ ಬಿಡುಗಡೆಗೆ ಸಮಯ ಕೂಡಿಬಂದಿದೆ. ವಿಶೇಷ ಏನೆಂದರೆ, ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವುದು ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್! ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 5ರಂದು ಮುಂಬೈನಲ್ಲಿ ‘800’ ಸಿನಿಮಾ (800 Movie) ಟ್ರೇಲರ್ ಲಾಂಚ್ ಆಗಲಿದೆ. ಸಚಿನ್ ತೆಂಡೂಲ್ಕರ್ (Sachin Tendulkar) ಮಾತ್ರವಲ್ಲದೇ ಅನೇಕ ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ.
ಕ್ರಿಕೆಟರ್ಗಳ ಜೀವನದ ಕುರಿತು ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಕ್ರಿಕೆಟ್ ಲೋಕದಲ್ಲಿ ಸಾಧನೆ ಮಾಡಿದ ದಿಗ್ಗಜರ ಬದುಕು ಎಲ್ಲರಿಗೂ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಇಂಥ ಸಿನಿಮಾ ಮಾಡಲಾಗುತ್ತದೆ. ಆ ಪೈಕಿ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ‘ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಒಂದು ಉತ್ತಮ ಉದಾಹರಣೆ. ಈಗ ಮುತ್ತಯ್ಯ ಮುರಳೀಧರನ್ ಅವರ ಬದುಕಿನ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘800’ ಸಿನಿಮಾ ಮೂಡಿಬಂದಿದ್ದು, ಅವರ ಅಭಿಮಾನಿಗಳಲ್ಲಿ ಕೌತುಕ ಸೃಷ್ಟಿ ಮಾಡಿದೆ.
ಇದನ್ನೂ ಓದಿ: ಸಚಿನ್ ಅಥವಾ ಸೆಹ್ವಾಗ್, ಯಾರಿಗೆ ಬೌಲಿಂಗ್ ಮಾಡುವುದು ಕಷ್ಟ? ಮುತ್ತಯ್ಯ ಮುರಳೀಧರನ್ ಉತ್ತರ ಹೀಗಿದೆ
ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿ ಅನೇಕ ದಾಖಲೆಗಳಿವೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು, ಅಂದರೆ 800 ವಿಕೆಟ್ಗಳನ್ನು ಪಡೆದ ಏಕೈಕ ಬೌಲರ್ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಆ ಕಾರಣದಿಂದಲೇ ಈ ಸಿನಿಮಾಗೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಏಕದಿನ ಪಂದ್ಯಗಳಲ್ಲಿ ಮುತ್ತಯ್ಯ ಮುರಳೀಧರನ್ ಅವರು 530 ವಿಕೆಟ್ ಪಡೆದಿದ್ದಾರೆ. 1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದಾಗ ಆ ಟೀಮ್ನಲ್ಲಿ ಮುತ್ತಯ್ಯ ಮುರಳೀಧರನ್ ಆಟವಾಡಿದ್ದರು. ಅವರ ಬೌಲಿಂಗ್ ಶೈಲಿಯ ಬಗ್ಗೆ ಹಲವು ಬಾರಿ ಪ್ರಶ್ನೆ ಎದುರಾಗಿತ್ತು. ಆ ಎಲ್ಲ ಅಂಶಗಳು ಈ ಸಿನಿಮಾದಲ್ಲಿ ಪ್ರಸ್ತಾಪ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಎಷ್ಟು ಕೋಟಿ ಒಡೆಯ ಗೊತ್ತಾ?
ಎಂ.ಎಸ್. ಶ್ರೀಪತಿ ಅವರು ‘800’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಗಿಬ್ರಾನ್ ಅವರು ಸಂಗೀತ ನೀಡಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾ ಖ್ಯಾತಿಯ ನಟ ಮಧುರ್ ಮಿತ್ತಲ್ ಅವರು ‘800’ ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಪಾತ್ರವನ್ನು ಮಾಡಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್ ಅವರು ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಅಕ್ಟೋಬರ್ನಲ್ಲಿ ಬಿಡುಗಡೆ ಆಗಲಿದೆ. ಸಚಿನ್ ತೆಂಡೂಲ್ಕರ್ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Mon, 4 September 23