ತೆಲುಗು ಚಿತ್ರರಂಗದಲ್ಲಿ ನಟ ನಾಗ ಶೌರ್ಯ (Naga Shaurya) ಅವರು ಹೀರೋ ಆಗಿ ಮಿಂಚುತ್ತಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅವರು 2023ರಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ವಿಶೇಷ ಏನೆಂದರೆ ಅವರು ರಿಯಲ್ ಲೈಫ್ನಲ್ಲಿಯೂ ಹೀರೋ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇಂದು (ಫೆ.28) ನಡೆದ ಒಂದು ಘಟನೆ. ನಡು ಬೀದಿಯಲ್ಲಿ ಯುವತಿಯೊಬ್ಬಳ ಮೇಲೆ ಪುಂಡನೊಬ್ಬ ಕೈ ಮಾಡಿದ್ದಾನೆ. ಅದನ್ನು ನೋಡಿದ ನಾಗ ಶೌರ್ಯ ಅವರು ಕೂಡಲೇ ಆ ಹುಡುಗಿಯ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲದೇ, ಹಲ್ಲೆ (Assault) ಮಾಡಿದ ಹುಡುಗನಿಗೆ ಚಳಿ ಬಿಡಿಸಿದ್ದಾರೆ. ಈ ವಿಡಿಯೋ (Naga Shaurya Viral Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾಗ ಶೌರ್ಯ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ರಸ್ತೆಯಲ್ಲಿ ಇಬ್ಬರು ಜಗಳ ಮಾಡುತ್ತಿರುವುದು ಅವರ ಗಮನಕ್ಕೆ ಬಂತು. ಯುವತಿಯ ಮೇಲೆ ಹುಡುಗನೊಬ್ಬ ಕೈ ಮಾಡಿದ್ದಾನೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಗ ಶೌರ್ಯ ಅವರು ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಯುವತಿಯನ್ನು ರಕ್ಷಿಸಿದ ಬಳಿಕ ಆಕೆಯ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಹೀಗೆ ಕಿತ್ತಾಡಿಕೊಂಡಿರುವುದು ಯಾರೋ ಅಪರಿಚಿತರಲ್ಲ. ಅವರಿಬ್ಬರು ಪ್ರೇಮಿಗಳು. ಆಕೆಗೆ ಯಾಕೆ ಹೊಡೆದೆ ಎಂದು ನಾಗ ಶೌರ್ಯ ಕೇಳಿದ್ದಕ್ಕೆ, ‘ಅವಳು ನನ್ನ ಲವರ್’ ಎಂದು ಯುವಕ ಎಗರಾಡಿದ್ದಾನೆ. ‘ಲವರ್ ಆದ ಮಾತ್ರಕ್ಕೆ ನಡು ರಸ್ತೆಯಲ್ಲಿ ಹುಡುಗಿಯ ಮೇಲೆ ಕೈ ಮಾಡುತ್ತೀಯಾ?’ ಎಂದು ನಾಗ ಶೌರ್ಯ ಗರಂ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅನುಷಾ ಶೆಟ್ಟಿ-ನಾಗ ಶೌರ್ಯ ಮದುವೆ; ವೈರಲ್ ಆಯ್ತು ವಿವಾಹದ ವಿಡಿಯೋ
ನಾಗ ಶೌರ್ಯ ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ‘ಆಕೆಯ ಕ್ಷಮೆ ಕೇಳು’ ಎಂದು ಯುವಕನ ಕೈ ಹಿಡಿದು ತಾಕೀತು ಮಾಡಿದ್ದಾರೆ. ಸುತ್ತಲೂ ಸೇರಿದ್ದ ಜನರು ಕೂಡ ಆ ಹುಡುಗನ ವಿರುದ್ಧ ಗರಂ ಆಗಿದ್ದಾರೆ. ಬಳಿಕ ವಿಧಿ ಇಲ್ಲದೇ ಕ್ಷಮೆ ಕೇಳಿ ಆತ ಜಾಗ ಖಾಲಿ ಮಾಡಿದ್ದಾನೆ. ತನ್ನ ಪಾಗಲ್ ಪ್ರೇಮಿಯನ್ನು ಕರೆದುಕೊಂಡು ಆ ಯುವತಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.
#nagashaurya reel lone kadu real life lo kuda hero anipinchukunaru sir ??? pic.twitter.com/R3J8sObOq6
— ks Raju (@ksRaju58119364) February 28, 2023
ರಸ್ತೆಯಲ್ಲಿ ಯಾರಿಗಾದರೂ ತೊಂದರೆ ಆಗುತ್ತಿದ್ದರೆ ‘ನಮಗ್ಯಾಕೆ ಊರ ಉಸಾಬರಿ’ ಎಂದು ಮುಂದೆ ಸಾಗುವವರೇ ಹೆಚ್ಚು. ಆದರೆ ನಾಗ ಶೌರ್ಯ ಅವರು ಆ ಗುಂಪಿಗೆ ಸೇರಿದವರಲ್ಲ. ಹುಡುಗಿಯ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯವನ್ನು ತಪ್ಪಿಸಲು ಅವರು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Tue, 28 February 23