ಜೂ ಎನ್​ಟಿಆರ್ ಕುರಿತ ಪ್ರಶ್ನೆಗೆ ‘ಐ ಡೋಂಟ್ ಕೇರ್’ ಎಂದ ಬಾಲಕೃಷ್ಣ: ಎನ್​ಟಿಆರ್ ಕುಟುಂಬ ಮುನಿಸು ತಾರಕಕ್ಕೆ

Jr NTR v/s Balakrishna: ಜೂ ಎನ್​ಟಿಆರ್ ಕುರಿತು ಕೇಳಲಾದ ಪ್ರಶ್ನೆಗೆ ಶಾಕಿಂಗ್ ಉತ್ತರವನ್ನು ಬಾಲಕೃಷ್ಣ ನೀಡಿದ್ದಾರೆ. ನಂದಮೂರಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ.

ಜೂ ಎನ್​ಟಿಆರ್ ಕುರಿತ ಪ್ರಶ್ನೆಗೆ 'ಐ ಡೋಂಟ್ ಕೇರ್' ಎಂದ ಬಾಲಕೃಷ್ಣ: ಎನ್​ಟಿಆರ್ ಕುಟುಂಬ ಮುನಿಸು ತಾರಕಕ್ಕೆ
ಬಾಲಕೃಷ್ಣ-ಜೂ ಎನ್​ಟಿಆರ್
Follow us
ಮಂಜುನಾಥ ಸಿ.
|

Updated on: Oct 05, 2023 | 7:49 PM

ಅವಿಭಜಿತ ಆಂಧ್ರ ಪ್ರದೇಶದ (Andhra Pradesh) ಸಿನಿಮಾ ಹಾಗೂ ರಾಜಕೀಯ ಎರಡರ ಮೇಲೂ ನಂದಮೂರಿ ಕುಟುಂಬದ ಪ್ರಭಾವ ಬಲು ಗಾಢವಾದುದು. ಸೀನಿಯರ್ ಎನ್​ಟಿಆರ್ ತೆಲುಗು ಚಿತ್ರರಂಗದ ದಂತಕತೆ ಎನಿಸಿಕೊಂಡವರು, ಜೊತೆಗೆ ಕಾಂಗ್ರೆಸ್ ಅನ್ನು ಎದುರು ಹಾಕಿಕೊಂಡು ಸ್ವಂತ ಪಕ್ಷ ಕಟ್ಟಿ ಅಧಿಕಾರಕ್ಕೇರಿ ಸಿಎಂ ಆದವರು. ಅವರ ಕುಟುಂಬ ಸದಸ್ಯರು ಇಂದಿಗೂ ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಇದೀಗ ಆ ಕುಟುಂಬದಲ್ಲಿ ದೊಡ್ಡ ಬಿರುಕು ಮೂಡಿದೆ.

ಪ್ರಸ್ತುತ ತೆಲುಗು ಚಿತ್ರರಂಗದ ದೊಡ್ಡ ಸ್ಟಾರ್ ನಟ ಜೂ ಎನ್​ಟಿಆರ್ ಹಾಗೂ ಬಾಲಕೃಷ್ಣ ನಡುವೆ ದೊಡ್ಡ ಬಿರುಕು ಮೂಡಿದೆ. ನಂದಮೂರಿ ಕುಟುಂಬದ ಈಗಿನ ಪ್ರಮುಖರಾಗಿರುವ ಬಾಲಕೃಷ್ಣ ಹಾಗೂ ಆ ಕುಟುಂಬ ಒಡೆತನದ ಪಕ್ಷ ಎನಿಸಿಕೊಂಡಿರುವ ಟಿಡಿಪಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಜೂ ಎನ್​ಟಿಆರ್ ಅನ್ನು ಕುಟುಂಬದಿಂದ ಹಾಗೂ ಪಕ್ಷದಿಂದ ದೂರ ಇರಿಸಿದ್ದಾರೆ ಎನ್ನಲಾಗಿದ್ದು, ಬಾಲಕೃಷ್ಣ, ಚಂದ್ರಬಾಬು ನಾಯ್ಡು ಹಾಗೂ ಜೂ ಎನ್​ಟಿಆರ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಲವು ದಿನಗಳಿಂದಲೂ ಜೈಲಿನಲ್ಲಿದ್ದಾರೆ. ಆದರೆ ಈ ಬಗ್ಗೆ ಜೂ ಎನ್​ಟಿಆರ್ ಯಾವುದೇ ಸಾಮಾಜಿಕ ಜಾಲತಾಣ ಪೋಸ್ಟ್ ಆಗಲಿ, ಬಹಿರಂಗ ಹೇಳಿಕೆಯನ್ನಾಗಲಿ ನೀಡಿಲ್ಲ. ಬದಲಿಗೆ ಕುಟುಂಬದೊಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದರು. ಇದು ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಇದನ್ನೂ ಓದಿ:ಜೂ ಎನ್​ಟಿಆರ್ ನಟನೆಯ ದೇವರ ಸಿನಿಮಾದಿಂದ ಭರ್ಜರಿ ಅಪ್​ಡೇಟ್: ಅಭಿಮಾನಿಗಳು ಹ್ಯಾಪಿ

ಚಂದ್ರಬಾಬು ನಾಯ್ಡು ಗೈರಿನಲ್ಲಿ ಕಳೆದ ಕೆಲವು ದಿನಗಳಿಂದ ಪಕ್ಷವನ್ನು ಮುನ್ನಡೆಸುತ್ತಿರುವ ನಂದಮೂರಿ ಬಾಲಕೃಷ್ಣ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಜೂ ಎನ್​ಟಿಆರ್ ಬಗ್ಗೆ ಆಸಕ್ತಿಕರ ಕಮೆಂಟ್ ಮಾಡಿದ್ದಾರೆ. ಜೂ ಎನ್​ಟಿಆರ್ ಏಕೆ ಚಂದ್ರಬಾಬು ನಾಯ್ಡು ಬಂಧನದ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಸಿನಿಮಾ ಶೈಲಿಯಲ್ಲಿ, ‘ಐ ಡೋಂಟ್ ಕೇರ್’ ಎಂದಿದ್ದಾರೆ. ಮುಂದುವರೆದು, ‘ಬ್ರೋ ಐ ಡೋಂಟ್ ಕೇರ್’ ಇದು ನನ್ನ ಮುಂದಿನ ಸಿನಿಮಾದ ಹೆಸರು, ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದ ಹೊರಗೂ ಸಹ ‘ಐ ಡೋಂಟ್ ಕೇರ್’ ಎಂದಿದ್ದಾರೆ.

ಅಸಲಿಗೆ ಚಂದ್ರಬಾಬು ನಾಯ್ಡು ಅವರೇ ಜೂ ಎನ್​ಟಿಆರ್ ಅನ್ನು ಪಕ್ಷದಿಂದ ದೂರ ಇರಿಸಿದ್ದಾರೆ ಎನ್ನಲಾಗುತ್ತಿದೆ. ಟಿಡಿಪಿ ಪಕ್ಷ ಹಾಗೂ ನಂದಮೂರಿ ಕುಟುಂಬದ ವತಿಯಿಂದ ಎನ್​ಟಿಆರ್ ಜನ್ಮ ಶತಮಾನೋತ್ಸವ ಆಚರಣೆ ಮಾಡಿದಾಗ ಜೂ ಎನ್​ಟಿಆರ್ ಅವರಿಗೆ ಆಹ್ವಾನ ಇರಲಿಲ್ಲ. ಕಾರ್ಯಕ್ರಮದ ನಡೆದಾಗಲೂ ಜೂ ಎನ್​ಟಿಆರ್ ಪೋಸ್ಟರ್ ಅನ್ನು ಎಲ್ಲಿಯೂ ಹಾಕಿಸಿರಲಿಲ್ಲ, ಜೂ ಎನ್​ಟಿಆರ್ ಪೋಸ್ಟರ್ ಅನ್ನು ಕಾರ್ಯಕ್ರಮಕ್ಕೆ ತಂದ ಅಭಿಮಾನಿಗಳನ್ನು ಸಹ ಹೊರಗಟ್ಟಲಾಗಿತ್ತು. ಇದು ಜೂ ಎನ್​ಟಿಆರ್ ಅನ್ನು ಹಾಗೂ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಜೂ ಎನ್​ಟಿಆರ್ ಚಂದ್ರಬಾಬು ನಾಯ್ಡು ಹಾಗೂ ಅವರ ಬಲಗೈ ಭಂಟನಂತಿರುವ ಬಾಲಕೃಷ್ಣ ಅವರ ಬಗ್ಗೆ ಅಸಮಾಧಾನ ಮೂಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನೇನು ಕೆಲವೇ ತಿಂಗಳಲ್ಲಿ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳು ಆರಂಭವಾಗಲಿವೆ. ಆ ಸಂದರ್ಭದಲ್ಲಿಯಾದರೂ ಜೂ ಎನ್​ಟಿಆರ್ ಅವರು ಟಿಡಿಪಿ ಪರವಾಗಿ ಪ್ರಚಾರಕ್ಕೆ ಇಳಿಯುತ್ತಾರೆಯೋ ಅಥವಾ ಸಂಪೂರ್ಣವಾಗಿ ಟಿಡಿಪಿ ಹಾಗೂ ನಂದಮೂರಿ ಕುಟುಂಬದಿಂದ ದೂರಾಗುತ್ತಾರೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ