
ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ‘ಅಖಂಡ 2’ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಈ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ನಿರ್ಮಾಪಕರು ಈ ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದಾರೆ. ಸೆಪ್ಟೆಂಬರ್ 25ರಂದು ಸಿನಿಮಾ ತೆರೆಕಾಣಲಿದೆ ಎಂದು ಖಚಿತಪಡಿಸಿದ್ದಾರೆ. ‘ಅಖಂಡ 2’ ಸಿನಿಮಾದ ಟೀಸರ್ (Akhanda 2 Teaser) ಬಿಡುಗಡೆ ಮಾಡಲಾಗಿದೆ. ಈ ಟೀಸರ್ನಲ್ಲಿ ಬಾಲಯ್ಯ (Balayya) ಅವರ ಮಾಸ್ ಅವತಾರ ಕಾಣಿಸಿದೆ. ಅಭಿಮಾನಿಗಳು ಊಹೆ ಮಾಡುವುದಕ್ಕಿಂತಲೂ ಹೆಚ್ಚು ಮಾಸ್ ಆಗಿ ನಂದಮೂರಿ ಬಾಲಕೃಷ್ಣ ಅವರು ಕಾಣಿಸಿಕೊಂಡಿದ್ದಾರೆ.
ಜೂನ್ 10ರಂದು ನಂದಮೂರಿ ಬಾಲಕೃಷ್ಣ ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ‘ಅಖಂಡ 2’ ಸಿನಿಮಾದ ಟೀಸರ್ ಅನಾವರಣ ಮಾಡಲಾಗಿದೆ. ಈ ಚಿತ್ರಕ್ಕೆ ಬಯೊಪಾಟಿ ಶ್ರೀನು ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳಿಗೆ ಏನು ಬೇಕು ಎಂಬುದನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.
‘ಅಖಂಡ 2’ ಸಿನಿಮಾದಲ್ಲಿ ಬಾಲಯ್ಯ ಅವರು ಸಾಧು ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಬರೀ ತಪಸ್ಸು ಮಾಡುತ್ತಾ ಸುಮ್ಮನೆ ಕುಳಿತುಕೊಳ್ಳಲ್ಲ. ದುಷ್ಟರನ್ನು ಸಂಹಾರ ಮಾಡುತ್ತಾರೆ. ಹಿಮಾಲಯದಲ್ಲಿ ಗನ್ ಹಿಡಿದು ಬಂದ ವಿಲನ್ಗಳನ್ನು ತ್ರಿಶೂಲದಿಂದಲೇ ಬಾಲಯ್ಯ ಮಣಿಸುತ್ತಾರೆ! ಬಾಲಯ್ಯ ಸಿನಿಮಾ ಎಂದರೆ ಮಾಸ್ ಡೈಲಾಗ್ ಇರಲೇಬೇಕು. ಅದು ಕೂಡ ಈ ಟೀಸರ್ನಲ್ಲಿ ಹೈಲೈಟ್ ಆಗಿದೆ.
ಈ ಸಿನಿಮಾದಲ್ಲಿ ಪಕ್ಕಾ ಕಮರ್ಷಿಯಲ್ ಅಂಶಗಳು ಇವೆ ಎಂಬುದು ಟೀಸರ್ ನೋಡಿದರೆ ಸ್ಪಷ್ಟವಾಗುತ್ತಿದೆ. ಈ ಸಿನಿಮಾಗೆ ಥಮನ್ ಅವರು ಸಂಗೀತ ನೀಡಿದ್ದಾರೆ. ಮಾಸ್ ಅಭಿಮಾನಿಗಳನ್ನು ಸೆಳೆಯಲು ಅವರು ಪ್ರಯತ್ನಿಸಿದ್ದಾರೆ. ಟೀಸರ್ ಬಿಡುಗಡೆ ಆದ ಬಳಿಕ ‘ಅಖಂಡ 2’ ಸಿನಿಮಾ ಮೇಲಿನ ಹೈಪ್ ಹೆಚ್ಚಾಗಿದೆ. ಬಾಲಯ್ಯ ಜನ್ಮದಿನಕ್ಕೆ ಉಡುಗೊರೆ ರೂಪದಲ್ಲಿ ಈ ಟೀಸರ್ ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ: ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಕೂಡ ಸೆಪ್ಟೆಂಬರ್ 25ರಂದು ಬಿಡುಗಡೆ ಆಗಲಿದೆ. ಆ ಸಿನಿಮಾ ಜೊತೆ ಕ್ಲ್ಯಾಶ್ ತಪ್ಪಿಸಲು ‘ಅಖಂಡ 2’ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಆ ಊಹೆ ನಿಜವಾಗಿಲ್ಲ. ‘ಅಖಂಡ 2’ ಕೂಡ ಸೆಪ್ಟೆಂಬರ್ 25ರಂದೇ ರಿಲೀಸ್ ಆಗಲಿದೆ. ಆ ಮೂಲಕ ಬಾಕ್ಸ್ ಆಫೀಸ್ನಲ್ಲಿ ಪೈಪೋಟಿ ನೀಡಲು ಸಜ್ಜಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.