
ತೆಲುಗು ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavithra Lokesh) ನಡುವಿನ ಸಂಬಂಧ ಕಳೆದ ವರ್ಷ ಬಹುವಾಗಿ ಸುದ್ದಿಯಾಗಿತ್ತು. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡದೆ ಪವಿತ್ರಾ ಲೋಕೇಶ್ ಜೊತೆ ಸಹಜೀವನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಮ್ಯಾ ರಘುಪತಿ, ನರೇಶ್ ಹಾಗೂ ಪವಿತ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ನರೇಶ್ ಹಾಗೂ ರಮ್ಯಾ ನಡುವಿನ ಮದುವೆ ನ್ಯಾಯಾಲಯದ ಮೆಟ್ಟಿಲೇರಿ ಎಲ್ಲ ಇತ್ಯರ್ಥವಾದಂತಿದೆ.
ಇದೀಗ ನರೇಶ್ರ ಪುತ್ರ ನವೀನ್ ನರೇಶ್, ಸಂದರ್ಶನವೊಂದರಲ್ಲಿ, ಪವಿತ್ರಾ ಲೋಕೇಶ್ ಜೊತೆ ತಮ್ಮ ತಂದೆಯ ನಾಲ್ಕನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ”ಅವರಿಬ್ಬರ ಮದುವೆಯ ಬಗ್ಗೆ ನನಗೆ ಯಾವುದೇ ದೂರಾಗಲಿ, ಸಮಸ್ಯೆಯಾಗಲಿ ಇಲ್ಲ. ನನಗೆ ಹೀಗೆ ಬದುಕು ಎಂದು ಅಪ್ಪ ಎಂದೂ ಹೇಳಿಲ್ಲ, ಹಾಗಾಗಿ ನಾನೇಕೆ ಅಪ್ಪನಿಗೆ ಹೇಳಲಿ. ಜೀವನದಲ್ಲಿ ಚೆನ್ನಾಗಿರು, ನಿನಗೆ ಇಷ್ಟವಾದುದು ಮಾಡು, ಹ್ಯಾಪಿಯಾಗಿರು ಅಷ್ಟೆ ಎನ್ನುತ್ತೇನೆ. ಅಪ್ಪ ಈ ವಯಸ್ಸಲ್ಲಿ ಮದುವೆ ಆಗಿರುವುದು ತಪ್ಪೇನು ಅಲ್ಲ, ಖುಷಿಯಾಗಿರಬೇಕು ಅಷ್ಟೆ ಅದೇ ಮುಖ್ಯ, ಇಳಿ ವಯಸ್ಸಲ್ಲಿ ಮದುವೆ ಆದವರು ಅವರು ಒಬ್ಬರೇ ಏನಲ್ಲ. ಎಲ್ಲರೂ ಅಷ್ಟೆ ಅವರ ಜೀವನದಲ್ಲಿ ಖುಷಿಯಾಗಿರಬೇಕು, ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ” ಎಂದಿದ್ದಾರೆ.
ಪವಿತ್ರಾ ಲೋಕೇಶ್ ಜೊತೆ ನಿಮ್ಮ ಬಾಂಧವ್ಯ ಹೇಗಿದೆ? ಎಂಬ ಪ್ರಶ್ನೆಗೆ, ”ಅವರನ್ನು ಬಹಳ ವರ್ಷಗಳಿಂದ ನಟಿಯಾಗಿ ನೋಡಿದ್ದೇನೆ. ಅವರು ಬಹಳ ಒಳ್ಳೆಯ ವ್ಯಕ್ತಿ. ಬಹಳ ಸ್ವೀಟ್ ಪರ್ಸನ್. ಮಾನವೀಯತೆ ಇರುವ ವ್ಯಕ್ತಿ. ನಾವು ಆಗಾಗ್ಗೆ ಮಾತನಾಡುತ್ತಲೇ ಇರುತ್ತೇವೆ. ನನಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿರುತ್ತಾರೆ. ಒಳ್ಳೆಯ ವ್ಯಕ್ತಿಗಳನ್ನು ಸ್ವಾಗತಿಸಲು ನಾನು ಸದಾ ಸಿದ್ಧ” ಎಂದಿದ್ದಾರೆ ನವೀನ್ ನರೇಶ್.
ಇದನ್ನೂ ಓದಿ:‘ನನ್ನ ಖುಷಿಯಿಂದ ನೋಡಿಕೊಂಡ್ರೆ ಸಾಕು ಎಂದಿದ್ದೆ’; ನರೇಶ್ ಕೇಳಿದ್ದ ಮೊದಲ ಪ್ರಶ್ನೆಗೆ ಪವಿತ್ರಾ ಲೋಕೇಶ್ ಉತ್ತರ
ನರೇಶ್ ಹಾಗೂ ಪವಿತ್ರಾ ಮದುವೆ ಬಗ್ಗೆ ಎದ್ದ ವಿವಾದಗಳ ಬಗ್ಗೆ, ಟ್ರೋಲಿಂಗ್ ಬಗ್ಗೆ ಮಾತನಾಡಿದ ನವೀನ್, ”ಸಾರ್ವಜನಿಕ ಜೀವನದಲ್ಲಿ ಅದೆಲ್ಲ ಸಾಮಾನ್ಯ. ಟ್ರೋಲ್ ಸಂದೇಶಗಳನ್ನು ನಾನೇ ಅಪ್ಪನಿಗೆ ಫಾರ್ವರ್ಡ್ ಮಾಡ್ತೀನಿ, ಜನ 100 ಮಾತಾಡ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು. ಅವರ ‘ಮಳ್ಳಿ ಪೆಳ್ಳಿ’ ಸಿನಿಮಾವನ್ನು ಬಿಡುಗಡೆಗೆ ಮೊದಲೇ ನೋಡಿದೆ. ಒಳ್ಳೆಯ ಪ್ರಯತ್ನ ಅದು. ಕೆಲವು ಸೀನ್ಗಳು ಚೆನ್ನಾಗಿವೆ” ಎಂದಿದ್ದಾರೆ.
ಅಪ್ಪ ಭಿನ್ನ ವ್ಯಕ್ತಿದವರು, ನೇರ ನಡೆಯವರು, ಅವರಂತೆ ನನಗೆ ಇರಲು ಸಾಧ್ಯವಿಲ್ಲ, ಸ್ವಲ್ಪ ಮುಜುಗರ ಸ್ವಭಾವದವನು ನಾನು. ಅಪ್ಪನಂತೆ ನನಗೆ ಏಕೆ ಇರಲು ಸಾಧ್ಯವಿಲ್ಲ ಎನಿಸುತ್ತದೆ. ನನಗೆ ಅವರು ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದಾರೆ. ನಾನು ನಿನಗೆ ಮದುವೆ ಮಾಡುವುದಿಲ್ಲ, ನೀನೇ ಆಗು, ನಾನು ಬರುತ್ತೇನೆ ಅಷ್ಟೆ ಎಂದಿದ್ದಾರೆ. ನಮ್ಮಿಬ್ಬರ ಐಡಿಯಾಲಜಿ ತುಸು ಬೇರೆ ಬೇರೆ ಆಗಿದೆ. ಆದರೆ ಇಬ್ಬರ ನಡುವೆ ಬಾಂಧವ್ಯ ಬಹಳ ಚೆನ್ನಾಗಿದೆ” ಎಂದಿದ್ದಾರೆ.
ನವೀನ್ ನರೇಶ್ ಒಂದೆರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರಾದರೂ ಯಶಸ್ಸು ಸಿಗಲಿಲ್ಲ. ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದು, ಇನ್ನು ಮುಂದೆ ನಿರ್ದೇಶವನ್ನೇ ಮುಂದುವರೆಸುವ ಉಮೇದು ಹೊಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ