ರಜನೀಕಾಂತ್-ಕಮಲ್ ಹಾಸನ್ ಇಂದಾಗಿ ಸಂಕಷ್ಟಕ್ಕೆ ಸಿಲುಕಿತು ಜೂ ಎನ್​​ಟಿಆರ್ ಸಿನಿಮಾ

Jr NTR-Rajinikanth-Kamal Haasan: ರಜನೀಕಾಂತ್ ಮತ್ತು ಕಮಲ್ ಹಾಸನ್ ಇತ್ತೀಚೆಗಷ್ಟೆ ಹೊಸ ಸಿನಿಮಾ ಘೋಷಿಸಿದ್ದಾರೆ. ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ರಜನೀಕಾಂತ್ ನಟಿಸಲಿದ್ದಾರೆ. ಆದರೆ ಈ ಸಿನಿಮಾದಿಂದಾಗಿ ಜೂ ಎನ್​ಟಿಆರ್ ಅವರ ಹೊಸ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಅದು ಹೇಗೆ? ಏನಿದು ಕತೆ ಇಲ್ಲಿದೆ ನೋಡಿ ಪೂರ್ಣ ಮಾಹಿತಿ...

ರಜನೀಕಾಂತ್-ಕಮಲ್ ಹಾಸನ್ ಇಂದಾಗಿ ಸಂಕಷ್ಟಕ್ಕೆ ಸಿಲುಕಿತು ಜೂ ಎನ್​​ಟಿಆರ್ ಸಿನಿಮಾ
Jr Ntr Rajini Kamal

Updated on: Nov 21, 2025 | 12:18 PM

ರಜನೀಕಾಂತ್ (Rajinikanth) ಹಾಗೂ ಕಮಲ್ ಹಾಸನ್ ಅವರು ಇತ್ತೀಚೆಗಷ್ಟೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಫಿಲಮ್ಸ್ ಮೂಲಕ ನಿರ್ಮಾಣ ಮಾಡಲಿರುವ ಸಿನಿಮಾನಲ್ಲಿ ರಜನೀಕಾಂತ್ ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾ ಘೋಷಣೆಯಾದ ಒಂದೇ ವಾರದಲ್ಲಿ ಸಿನಿಮಾದ ನಿರ್ದೇಶಕ ಸುಂದರ್ ಸಿ, ಈ ಸಿನಿಮಾದಿಂದ ಹೊರ ನಡೆದಿದ್ದಾರೆ. ಆದರೆ ಇದೀಗ ಹೊಸ ನಿರ್ದೇಶಕನ ಹುಡುಕಲಾಗಿದೆ ಆದರೆ ಇದರಿಂದಾಗಿ ಜೂ ಎನ್​​ಟಿಆರ್ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.

ನಿರ್ದೇಶಕ ಸುಂದರ್ ಸಿ, ರಜನಿ-ಕಮಲ್ ಸಿನಿಮಾದಿಂದ ಹೊರ ನಡೆದ ಬಳಿಕ ಆ ಸಿನಿಮಾವನ್ನು ತಮಿಳಿನ ಯುವ ನಿರ್ದೇಶಕ ನೆಲ್ಸನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ನೆಲ್ಸನ್ ಈಗಾಗಲೇ ರಜನೀಕಾಂತ್ ಜೊತೆಗೆ ‘ಜೈಲರ್’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದಾರೆ. ಈಗ ‘ಜೈಲರ್ 2’ ಸಿನಿಮಾ ಸಹ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ಸಹ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ರೆಡಿಯಾಗಲಿದೆ. ಈಗ ರಜನೀಕಾಂತ್​​ರ ಮತ್ತೊಂದು ಹೊಸ ಸಿನಿಮಾವನ್ನು ನೆಲ್ಸನ್ ಅವರೇ ನಿರ್ದೇಶನ ಮಾಡುವ ಸಾಧ್ಯತೆ ದಟ್ಟವಾಗಿದೆ.

ಆದರೆ ಇದರಿಂದ ಜೂ ಎನ್​​ಟಿಆರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಈ ಸಿನಿಮಾದ ಬಳಿಕ ನೆಲ್ಸನ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲು ಜೂ ಎನ್​ಟಿಆರ್ ಅಣಿಯಾಗಿದ್ದರು. ಆದರೆ ಈಗ ನೆಲ್ಸನ್, ರಜನೀಕಾಂತ್ ನಟನೆಯ ಸಿನಿಮಾ ನಿರ್ದೇಶಿಸಲು ಮುಂದಾಗಿರುವ ಕಾರಣ ಜೂ ಎನ್​​ಟಿಆರ್ ಜೊತೆಗಿನ ಸಿನಿಮಾ ನೆನೆಗುದಿಗೆ ಬಿದ್ದಂತಾಗಿದೆ.

ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್​ಟಿಆರ್​​ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್​ಎಫ್

ಹಾಗೆಂದು ಜೂ ಎನ್​​ಟಿಆರ್​ ಖಾಲಿ ಆಗೇನೂ ಕೂರುವಂತಿಲ್ಲ. ಪ್ರಶಾಂತ್ ನೀಲ್ ಸಿನಿಮಾ ಬಳಿಕ ಅವರ ಕೈಯಲ್ಲಿ ಮೂರು ಸಿನಿಮಾಗಳಿದ್ದವು. ಅದರಲ್ಲಿ ನೆಲ್ಸನ್ ಸಿನಿಮಾ ಸಹ ಒಂದಾಗಿತ್ತು. ಆದರೆ ಈಗ ನೆಲ್ಸನ್ ಸಿನಿಮಾ ತಡವಾಗುತ್ತಿರುವ ಕಾರಣ, ಅವರು ತ್ರಿವಿಕ್ರಮ್​​ ಜೊತೆಗಿನ ಸಿನಿಮಾವನ್ನು ಮೊದಲು ಪ್ರಾರಂಭಿಸುವ ಸಾಧ್ಯತೆ ಇದೆ. ತ್ರಿವಿಕ್​ರಮ್ ಪ್ರಸ್ತುತ ವಿಕ್ಟರಿ ವೆಂಕಟೇಶ್ ನಟನೆಯ ಹಾಸ್ಯಮಿಶ್ರಿತ ಕೌಟುಂಬಿಕ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಶೀಘ್ರವೇ ಮುಗಿಯಲಿದೆ. ಹಾಗಾಗಿ ತ್ರಿವಿಕ್ರಮ್ ಮತ್ತು ಜೂ ಎನ್​​ಟಿಆರ್ ಸಿನಿಮಾ ಬೇಗನೆ ಪ್ರಾರಂಭ ಆಗುವ ಸಾಧ್ಯತೆ ಇದೆ. ಇದರ ಹೊರತಾಗಿ ಜೂ ಎನ್​​ಟಿಆರ್ ಅವರು ‘ದೇವರ 2’ ಸಿನಿಮಾನಲ್ಲಿ ಸಹ ನಟಿಸಬೇಕಿದೆ. ತ್ರಿವಿಕ್ರಮ್ ಅವರೊಟ್ಟಿಗಿನ ಸಿನಿಮಾ ಮುಗಿದ ಬಳಿಕ ‘ದೇವರ 2’ ಸಿನಿಮಾ ಪ್ರಾರಂಭ ಆಗಲಿದೆ. ಅದಾದ ಬಳಿಕ ಯಶ್ ಚೋಪ್ರಾ ಜೊತೆಗೆ ಹಿಂದಿಯಲ್ಲಿ ಒಂದು ಸ್ಟಾಂಡ್ ಅಲೋನ್ ಸಿನಿಮಾ ಸಹ ಜೂ ಎನ್​ಟಿಆರ್ ಮಾಡಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ