ಓ ಸಾಕಿ ಸಾಕಿ.., ದಿಲ್ ಬರ್ ದಿಲ್ ಬರ್.. ಮುಂತಾದ ಸೂಪರ್ ಹಿಟ್ ಗೀತೆಗಳಲ್ಲಿ ಐಟಂ ಡಾನ್ಸ್ ಮಾಡಿ ಫೇಮಸ್ ಆಗಿರುವ ನಟಿ ನೋರಾ ಫತೇಹಿ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅವರು ಕುಣಿದರೆ ಹಾಡು ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಎಲ್ಲ ನಿರ್ಮಾಪಕ/ನಿರ್ದೇಶಕರಿಗೆ ಗೊತ್ತಾಗಿದೆ. ಆದರೆ ಆರಂಭದಲ್ಲಿ ಕನಸು ಕಟ್ಟಿಕೊಂಡು ಬಾಲಿವುಡ್ಗೆ ಕಾಲಿಟ್ಟಾಗ ನೋರಾ ಫತೇಹಿ ಅನುಭವಿಸಿದ್ದು ಬರೀ ಅವಮಾನ! ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ತುಂಬ ಕೀಳಾಗಿ ನೋಡಲಾಗುತ್ತಿತ್ತು ಎಂಬ ಸತ್ಯವನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
ನೋರಾ ಮೂಲತಃ ಕೆನಡಾದವರು. ಆದರೆ ಬಾಲಿವುಡ್ ಸಿನಿಮಾಗಳನ್ನು ನೋಡಿ ಬೆಳೆದವರು. ಹಾಗಾಗಿ ಹಿಂದಿ ಚಿತ್ರರಂಗದ ಬಗ್ಗೆ ಅವರಿಗೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ತಾವೂ ಬಾಲಿವುಡ್ನಲ್ಲಿ ನಟಿಸಬೇಕು, ಶಾರುಖ್ ಖಾನ್ರನ್ನು ಭೇಟಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡು ನೋರಾ ಭಾರತಕ್ಕೆ ಕಾಲಿಟ್ಟರು. ಆದರೆ ಮುಂಬೈಗೆ ಬಂದಾಗ ಅವರಿಗೆ ತೀವ್ರ ಅವಮಾನ ಆಗಿತ್ತು ಎಂಬುದು ಶಾಕಿಂಗ್ ಸಂಗತಿ. ಹಿಂದಿ ಕಲಿಯಬೇಕು ಎಂಬ ಉದ್ದೇಶದಿಂದ ನೋರಾ ಹಲವು-ರಾತ್ರಿ ಕಷ್ಟಪಡುತ್ತಿದ್ದರು. ಹಾಗಿದ್ದರೂ ಶೂಟಿಂಗ್ ಸೆಟ್ನಲ್ಲಿ ಅವರನ್ನು ಎಲ್ಲರೂ ಕೀಳಾಗಿ ಕಾಣುತ್ತಿದ್ದರು.
‘ನಾನು ಹಿಂದಿಯಲ್ಲಿ ಡೈಲಾಗ್ ಹೇಳಲು ಆರಂಭಿಸುತ್ತಿದ್ದಂತೆಯೇ ಅಲ್ಲಿದ್ದ ಎಲ್ಲರೂ ನಗುತ್ತಿದ್ದರು. ನನ್ನ ಕಣ್ಣೆದುರಿಗೇ ನನ್ನನ್ನು ಗೇಲಿ ಮಾಡುತ್ತಿದ್ದರು. ಅದರಿಂದ ನನಗೆ ತುಂಬ ಅವಮಾನ ಆಗುತ್ತಿತ್ತು. ನನಗೆ ಅಳು ತಡೆಯಲು ಸಾಧ್ಯವಾಗಲಿಲ್ಲ. ಆಗ ನನ್ನ ಬಳಿ ಕಾರು ಕೂಡ ಇರಲಿಲ್ಲ. ಶೂಟಿಂಗ್ ಸೆಟ್ನಿಂದ ಹೊರಬಂದು ಆಟೋದಲ್ಲಿ ಕುಳಿತು ಜೋರಾಗಿ ಅಳಲು ಆರಂಭಿಸಿದ್ದೆ. ನನ್ನ ಹಿಂದಿ ಟೀಚರ್ಗೆ ಫೋನ್ ಮಾಡಿ ನೋವು ತೋಡಿಕೊಂಡೆ’ ಎಂದು ಆ ದಿನಗಳನ್ನು ನೋರಾ ಫತೇಹಿ ಮೆಲುಕು ಹಾಕಿದ್ದಾರೆ.
8-9 ಹುಡುಗಿಯರ ಜೊತೆಗೆ ಒಂದೇ ರೂಮ್ನಲ್ಲಿ ನೋರಾ ಫತೇಹಿ ಉಳಿದುಕೊಳ್ಳಬೇಕಿತ್ತು. ಆ ಹುಡುಗಿಯರೆಲ್ಲ ತುಂಬ ನಿರ್ದಯವಾಗಿ ನಡೆದುಕೊಳ್ಳುತ್ತಿದ್ದರು. ನೋರಾ ಅವರ ಪಾಸ್ಪೋರ್ಟ್ ಅನ್ನೂ ಹುಡುಗಿಯರು ಕದ್ದು ಬಿಟ್ಟಿದ್ದರು! ಅಂಥ ಸಂಕಷ್ಟಗಳನ್ನೆಲ್ಲ ಎದುರಿಸಿದ ನೋರಾ ಈಗ ಆ ದಿನಗಳನ್ನು ನೆನಪಿಸಿಕೊಂಡು ಮತ್ತೆ ಕಣ್ಣೀರು ಹಾಕಿದ್ದಾರೆ. ಆ ಸಂದರ್ಶನದ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಕಿಯಾರಾ ಗೆ ಯಾರನ್ನು ಕಂಡರೆ ಅಸೂಯೆ?