
‘ಪುಷ್ಪ 2’ (Pushpa 2) ಸಿನಿಮಾ ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಸುಕುಮಾರ್ ನಿರ್ದೇಶಿಸಿದ್ದ ಈ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆಗಳನ್ನು ಬರೆಯಿತು. ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ‘ಪುಷ್ಪ 2’. ಈ ಸಿನಿಮಾದ ಅಂತ್ಯದಲ್ಲಿ ‘ಪುಷ್ಪ 3’ ಸಹ ಬರುವುದಾಗಿ ಸುಳಿವನ್ನು ಸುಕುಮಾರ್ ನೀಡಿದ್ದರು. ‘ಪುಷ್ಪ 3’ ಸಿನಿಮಾದ ಒನ್ಲೈನರ್ ರೆಡಿ ಇದೆ ಎಂದು ಸಹ ಸುಕುಮಾರ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಈಗ ಸುಕುಮಾರ್ ಹಠಾತ್ತನೆ ‘ಪುಷ್ಪ 3’ ಸಿನಿಮಾ ಪ್ರಾಜೆಕ್ಟ್ ಅನ್ನು ಕೈಬಿಟ್ಟಿದ್ದಾರೆ.
‘ಪುಷ್ಪ’ ಸಿನಿಮಾ ಮುಗಿದ ಬಳಿಕ ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾ ಪ್ರಾರಂಭ ಮಾಡಿದರು. ಅದು ಮುಗಿದ ಕೂಡಲೇ ‘ಪುಷ್ಪ 3’ ಸಿನಿಮಾ ಪ್ರಾರಂಭಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸುಕುಮಾರ್ ಅವರು ಇದೀಗ ಬೇರೆ ನಟನ ಜೊತೆ ಕೈಜೋಡಿಸಲು ಮುಂದಾಗಿದ್ದು ಬೇರೊಂದು ಸಿನಿಮಾಕ್ಕಾಗಿ ಚಿತ್ರಕತೆ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಸ್ವತಃ ನಿರ್ಮಾಪಕರು ಅಧಿಕೃತವಾಗಿ ಮಾತನಾಡಿದ್ದಾರೆ.
ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸುಕುಮಾರ್ ಅವರ ಪ್ರಥಮ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್. ‘ಪೆದ್ದಿ’ ಸಿನಿಮಾ ಮಾರ್ಚ್, 2026 ರಲ್ಲಿ ಬಿಡುಗಡೆ ಆಗಲಿದೆ. ‘ಪೆದ್ದಿ’ ಸಿನಿಮಾದ ಶೂಟಿಂಗ್ ಪೂರ್ತಿ ಆಗುತ್ತಿದ್ದಂತೆ ರಾಮ್ ಚರಣ್, ಸುಕುಮಾರ್ ಜೊತೆಗಿನ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.
ಇದನ್ನೂ ಓದಿ:40ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಅಲ್ಲು ಅರ್ಜುನ್ ಪತ್ನಿ
ಮೈತ್ರಿ ಮೂವಿ ಮೇಕರ್ಸ್ನವರೇ ಸುಕುಮಾರ್-ರಾಮ್ ಚರಣ್ ಸಿನಿಮಾಕ್ಕೂ ಬಂಡವಾಳ ಹೂಡುತ್ತಿದ್ದು, ಈ ಬಗ್ಗೆ ಅವರೇ ಖಾತ್ರಿ ಪಡಿಸಿದ್ದಾರೆ. ಸದ್ಯಕ್ಕೆ ಸುಕುಮಾರ್ ದುಬೈನಲ್ಲಿದ್ದು ರಾಮ್ ಚರಣ್ ಸಿನಿಮಾಕ್ಕೆ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ. ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ ಸುಕುಮಾರ್ ಸಿನಿಮಾ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದು ಮೈತ್ರಿ ಮೂವಿ ಮೇಕರ್ಸ್ನ ನಿರ್ಮಾಪಕರು ತಿಳಿಸಿದ್ದಾರೆ. ಇದೊಂದು ಭಾರಿ ಬಜೆಟ್ ಸಿನಿಮಾ ಆಗಿದ್ದು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣ ಆಗಲಿದೆ.
ಅಸಲಿಗೆ ಸುಕುಮಾರ್ ಹಾಗೂ ರಾಮ್ ಚರಣ್ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ‘ರಂಗಸ್ಥಲಂ’ ಸಿನಿಮಾನಲ್ಲಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾನಲ್ಲಿ ಕಿವುಡನ ಪಾತ್ರದಲ್ಲಿ ಮಿಂಚಿದ್ದರು ರಾಮ್ ಚರಣ್. ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ರಾಮ್ ಚರಣ್ ಮತ್ತು ಸುಕುಮಾರ್ ಅದೇ ಮ್ಯಾಜಿಕ್ ಪುನರಾವರ್ತನೆ ಮಾಡುತ್ತಾರೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ