ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್​​ನಲ್ಲಿ ‘ಮಹಾವತಾರ ನರಸಿಂಹ’ ಆನಿಮೇಟೆಡ್ ಸಿನಿಮಾ

ಪುರಾಣದ ಕಥೆ ಹೊಂದಿರುವ ‘ಮಹಾವತಾರ ನರಸಿಂಹ’ ಸಿನಿಮಾ 98ನೇ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಈ ಸಿನಿಮಾ ಈಗ ಆಸ್ಕರ್ ಮೇಲೆ ಕಣ್ಣಿಟ್ಟಿದೆ. ಅಂತಿಮ ಹಂತದ ನಾಮಿನೇಷನ್​​ಗೆ ಆಯ್ಕೆ ಆಗುತ್ತಾ ಇಲ್ಲವಾ ಎಂಬುದು 2026ರ ಜನವರಿ 22ರಂದು ತಿಳಿಯಲಿದೆ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್​​ನಲ್ಲಿ ‘ಮಹಾವತಾರ ನರಸಿಂಹ’ ಆನಿಮೇಟೆಡ್ ಸಿನಿಮಾ
Mahavatar Narsimha

Updated on: Nov 23, 2025 | 10:17 AM

2025ರ ಯಶಸ್ವಿ ಸಿನಿಮಾಗಳಲ್ಲಿ ‘ಮಹಾವತಾರ ನರಸಿಂಹ’ (Mahavatar Narsimha) ಕೂಡ ಇದೆ. ಈ ಆನಿಮೇಟೆಡ್ ಸಿನಿಮಾಗೆ ಜನರು ಭರ್ಜರಿ ಮೆಚ್ಚುಗೆ ಸೂಚಿಸಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗೆ 300 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಿದೆ. ಈ ಚಿತ್ರ ಈಗ ಮತ್ತೊಂದು ಕಾರಣಕ್ಕೆ ಸುದ್ದಿ ಆಗುತ್ತಿದೆ. 2026ರ ಆಸ್ಕರ್ ಪ್ರಶಸ್ತಿ (Oscars 2026) ಕಣದಲ್ಲಿ ಈ ಸಿನಿಮಾ ಸ್ಪರ್ಧಿಸುತ್ತಿದೆ. ಆನಿಮೇಟೆಡ್ ವಿಭಾಗದಲ್ಲಿ ಪೈಪೋಟಿ ನೀಡಲು ‘ಮಹಾವತಾರ ನರಸಿಂಹ’ ಸಿನಿಮಾ ಅರ್ಹತೆ ಪಡೆದಿದೆ. ಈ ಸಿನಿಮಾದ ಮೂಲಕ ಭಾರತಕ್ಕೆ ಮತ್ತೊಂದು ಆಸ್ಕರ್ ಪ್ರಶಸ್ತಿ (98th Academy Awards) ಸಿಗುತ್ತಾ ಎಂಬ ಕುತೂಹಲ ಸಿನಿಪ್ರಿಯರಿಗೆ ಇದೆ.

‘ಮಹಾವತಾರ ನರಸಿಂಹ’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಪುರಾಣದ ಕಥೆಯನ್ನು ಹೊಂದಿರುವ ಈ ಸಿನಿಮಾ ಜುಲೈ 25ರಂದು ಬಿಡುಗಡೆ ಆಯಿತು. ಅಶ್ವಿನ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನರಸಿಂಹ ಪುರಾಣ, ವಿಷ್ಣು ಪುರಾಣ, ಶ್ರೀಮದ್ ಭಗವತ ಪುರಾಣ ಆಧರಿಸಿ ‘ಮಹಾವತಾರ ನರಸಿಂಹ’ ಸಿನಿಮಾ ಸಿದ್ಧವಾಗಿದೆ.

ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಬಿಡುಗಡೆ ಮಾಡಲಾಯಿತು. ಭಾರತದಲ್ಲಿ ಆನಿಮೇಟೆಡ್ ಸಿನಿಮಾಗಳಿಗೂ ಬಹುದೊಡ್ಡ ಮಾರುಕಟ್ಟೆ ಇದೆ ಎಂಬುದನ್ನು ಸಾಬೀತು ಮಾಡಿದ ಚಿತ್ರ ಇದು. ವಿಶ್ವಾದ್ಯಂತ ಈ ಸಿನಿಮಾ 326 ಕೋಟಿ ರೂಪಾಯಿ ಗಳಿಕೆ ಮಾಡಿತು. ಈಗ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಪೈಪೋಟಿ ನೀಡಲು ಅರ್ಹತೆ ಪಡೆಯುವ ಮೂಲಕ ಸದ್ದು ಮಾಡುತ್ತಿದೆ.

2026ರ ಆಸ್ಕರ್ ಪ್ರಶಸ್ತಿಗೆ ಅಂತಿಮ ಹಂತದ ನಾಮಿನೇಷನ್​ಗೆ ಆಯ್ಕೆ ಆಗಲು 35 ಆನಿಮೇಟೆಡ್ ಸಿನಿಮಾಗಳು ಪೈಪೋಟಿ ನೀಡುತ್ತಿವೆ. ಒಂದು ವೇಳೆ ‘ಮಹಾವತಾರ ನರಸಿಂಹ’ ಸಿನಿಮಾ ನಾಮಿನೇಟ್ ಆದರೆ, ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಭಾರತದ ಮೊದಲ ಆನಿಮೇಟೆಡ್ ಸಿನಿಮಾ ಎಂಬ ಕೀರ್ತಿಗೆ ಪಾತ್ರವಾಗಲಿದೆ. ಆ ಕಾರಣದಿಂದ ಅಂತಿಮ ಹಂತದ ನಾಮಿನೇಷನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನೂ ಓದಿ: 98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆ

ಈ ಬಾರಿ ಯಾರಿಗೆಲ್ಲ ಆಸ್ಕರ್ ಪ್ರಶಸ್ತಿ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ. 2026ರ ಜನವರಿ 22ರಂದು 98ನೇ ಅಕಾಡೆಮಿ ಅವಾರ್ಡ್ಸ್​​ಗೆ ನಾಮಿನೇಷನ್ ಪಟ್ಟಿ ಘೋಷಣೆ ಆಗಲಿದೆ. 2026ರ ಮಾರ್ಚ್ 15ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಭಾರತದಿಂದ ಈಗಾಗಲೇ ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್‌ಬೌಂಡ್’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿದೆ. ‘ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ’ ವಿಭಾಗಕ್ಕೆ ಭಾರತದಿಂದ ಹಿಂದಿ ಭಾಷೆಯ ಈ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.