AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆ

98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾವನ್ನು ಅಧಿಕೃತವಾಗಿ ಕಳಿಸಲಾಗುತ್ತಿದೆ. ಇಂದು (ಸೆಪ್ಟೆಂಬರ್ 19) ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ ಸುದ್ದಿಗೋಷ್ಠಿ ಮೂಲಕ ಈ ವಿಷಯ ತಿಳಿಸಿದೆ. ‘ಹೋಮ್‌ಬೌಂಡ್’ ಸಿನಿಮಾದಲ್ಲಿ ಜಾನ್ವಿ ಕಪೂರ್, ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ ಅವರು ಅಭಿನಯಿಸಿದ್ದಾರೆ.

98ನೇ ಸಾಲಿನ ಆಸ್ಕರ್ ಸ್ಪರ್ಧೆಗೆ ಭಾರತದಿಂದ ‘ಹೋಮ್‌ಬೌಂಡ್’ ಸಿನಿಮಾ ಅಧಿಕೃತ ಆಯ್ಕೆ
Homebound Movie
ಮದನ್​ ಕುಮಾರ್​
|

Updated on: Sep 19, 2025 | 8:02 PM

Share

ನಿರ್ದೇಶಕ ನೀರಜ್ ಘಯ್ವಾನ್ ಅವರ ‘ಹೋಮ್‌ಬೌಂಡ್’ ಸಿನಿಮಾ (Homebound Movie) ಆಸ್ಕರ್ ಸ್ಪರ್ಧೆಗೆ ಆಯ್ಕೆ ಆಗಿದೆ. 2026ರ ಆಸ್ಕರ್ (Oscars) ಪ್ರಶಸ್ತಿಗಳ ಸ್ಪರ್ಧೆಯಲ್ಲಿ ‘ಅತ್ಯುತ್ತಮ ಅಂತಾರಾಷ್ಟ್ರೀಯ ಕಥಾಚಿತ್ರ’ ವಿಭಾಗಕ್ಕೆ ಭಾರತದಿಂದ ಹಿಂದಿ ಭಾಷೆಯ ಈ ಸಿನಿಮಾ ಅಧಿಕೃತವಾಗಿ (India’s official entry for Oscars) ಆಯ್ಕೆ ಆಗಿದೆ. ‘ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ’ ಸುದ್ದಿಗೋಷ್ಠಿ ಮೂಲಕ ಈ ವಿಷಯ ತಿಳಿಸಿದೆ. ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗಿರುವ ‘ಹೋಮ್‌ಬೌಂಡ್’ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ, ಜಾನ್ವಿ ಕಪೂರ್ ಮುಂತಾದವರು ನಟಿಸಿದ್ದಾರೆ.

ತಾವು ನಿರ್ಮಾಣ ಮಾಡಿದ ‘ಹೋಮ್​ಬೌಂಡ್’ ಸಿನಿಮಾ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದ್ದಕ್ಕೆ ಕರಣ್ ಜೋಹರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗೆ ಭಾರತದ ಅಧಿಕೃತ ಎಂಟ್ರಿಯಾಗಿ ಹೋಮ್​ಬೌಂಡ್ ಸಿನಿಮಾವನ್ನು ಆಯ್ಕೆ ಮಾಡಿರುವುದು ನಮಗೆ ತುಂಬಾ ಗೌರವ ತಂದಿದೆ. ನೀರಜ್ ಘಯ್ವಾನ್ ಅವರ ಈ ಸಿನಿಮಾ ಪ್ರಪಂಚದಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆ ಕಂಡುಕೊಳ್ಳುವುದು ಖಚಿತ’ ಎಂದು ಕರಣ್ ಜೋಹರ್ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ದೇಶಕ ನೀರಜ್ ಘಯ್ವಾನ್ ಅವರು ಕೂಡ ಸಂತಸ ಹಂಚಿಕೊಂಡಿದ್ದಾರೆ. ‘ಆಸ್ಕರ್‌ ಸ್ಪರ್ಧೆಗೆ ಭಾರತದಿಂದ ಹೋಮ್‌ಬೌಂಡ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿರುವುದಕ್ಕೆ ನನಗೆ ತುಂಬಾ ಗೌರವ ಎನಿಸುತ್ತಿದೆ. ನಮ್ಮ ಕಥೆಗಳನ್ನು ಜಗತ್ತಿಗೆ ಕೊಂಡೊಯ್ಯುವುದು ಮತ್ತು ಸಿನಿಮಾದ ಅತಿದೊಡ್ಡ ಜಾಗತಿಕ ವೇದಿಕೆಗಳಲ್ಲಿ ಒಂದರಲ್ಲಿ ಭಾರತವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ, ನಿರ್ಮಾಪಕ ಎನ್. ಚಂದ್ರ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. 24 ಸಿನಿಮಾಗಳನ್ನು ವೀಕ್ಷಿಸಿ ಅಂತಿಮವಾಗಿ ‘ಹೋಮ್​ಬೌಂಡ್’ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಜ್ಯೂರಿ ತಂಡದಲ್ಲಿ 14 ಮಂದಿ ಇದ್ದರು. ‘ಪುಷ್ಪ 2’, ‘ದಿ ಬೆಂಗಾಲ್ ಫೈಲ್ಸ್’, ‘ತನ್ವಿ ದಿ ಗ್ರೇಟ್’, ‘ಕೇಸರಿ: ಚಾಪ್ಟರ್ 2’, ‘ಕಣ್ಣಪ್ಪ’, ‘ಕುಬೇರ’, ‘ಫುಲೆ’ ಮುಂತಾದ ಸಿನಿಮಾಗಳ ನಡುವೆ ಪೈಪೋಟಿ ನೀಡಿ ‘ಹೋಮ್​ಬೌಂಡ್’ ಸಿನಿಮಾ ಆಯ್ಕೆ ಆಗಿದೆ.

ಇದನ್ನೂ ಓದಿ: ಸಿನಿಮಾ ಸೋಲು, ವಿವಾದದ ನಡುವೆಯೂ ಕಮಲ್ ಹಾಸನ್​ಗೆ ಸಿಕ್ತು ಆಸ್ಕರ್ ಗೌರವ

ಕಳೆದ ವರ್ಷ ಆಮಿರ್ ಖಾನ್ ನಿರ್ಮಾಣದ, ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾವನ್ನು ಭಾರತದಿಂದ ಆಸ್ಕರ್ ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ಅಂತಿಮ ಸುತ್ತಿಗೆ ಆ ಸಿನಿಮಾ ಆಯ್ಕೆ ಆಗಲಿಲ್ಲ. ಈ ಬಾರಿ ‘ಹೋಮ್​ಬೌಂಡ್’ ಸಿನಿಮಾ ಆಸ್ಕರ್ ಪ್ರಶಸ್ತಿ ಗೆಲುತ್ತಾ ಎಂಬುದನ್ನು ಕಾದು ನೋಡಬೇಕು. ಆಯ್ಕೆ ಆಗಿರುವುದಕ್ಕೆ ಚಿತ್ರತಂಡದವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಸೆಪ್ಟೆಂಬರ್ 26ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.