ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್
Fahadh Faasil: ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾದ ಫಹಾದ್ ಫಾಸಿಲ್ ಕೆಲವು ಅದ್ಭುತ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅವರ ನಟನೆಗೆ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಹವಾ ಎಷ್ಟಿದೆಯೆಂದರೆ ಹಾಲಿವುಡ್ನ ಖ್ಯಾತ ನಿರ್ದೇಶಕ ಕರೆ ಮಾಡಿ ಸಿನಿಮಾನಲ್ಲಿ ಅವಕಾಶ ನೀಡಿದ್ದಾರೆ. ಆದರೆ ಫಹಾದ್ ಫಾಸಿಲ್ ಹಾಲಿವುಡ್ ನಿರ್ದೇಶಕನಿಗೆ ನೋ ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ ಫಹಾದ್ ಫಾಸಿಲ್.

ಫಹಾದ್ ಫಾಸಿಲ್ (Fahadh Faasil), ಪ್ರಸ್ತುತ ಭಾರತೀಯ ಚಿತ್ರರಂಗದ ಬೆರಳಿಣೆಕೆಯ ಪ್ರತಿಭಾವಂತ ಸ್ಟಾರ್ ನಟರುಗಳಲ್ಲಿ ಒಬ್ಬರು. ಫಹಾದ್ ಫಾಸಿಲ್ಗೆ ಸವಾಲಾಗುವ ಪಾತ್ರಗಳೇ ಇಲ್ಲ. ಹೀರೋ, ವಿಲನ್, ಕಮಿಡಿಯನ್ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗ ಹುಟ್ಟಿಕೊಂಡಿರುವಂತೆಯೇ ಫಹಾದ್ ಫಾಸಿಲ್ಗೂ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಪ್ರತ್ಯೇಕ ಅಭಿಮಾನಿ ವರ್ಗವೇ ಹುಟ್ಟಿಕೊಂಡಿದೆ. ಫಹಾದ್ ಫಾಸಿಲ್ ಖ್ಯಾತಿ ಯಾವ ಲೆವೆಲ್ಗೆ ಹಬ್ಬಿದೆಯೆಂದರೆ ಆಸ್ಕರ್ ವಿಜೇತ ಸಿನಿಮಾ ನಿರ್ದೇಶಕರೊಬ್ಬರು ಫಹಾದ್ ಅನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದಾರೆ ಆದರೆ ಅದಕ್ಕೆ ನೋ ಎಂದಿದ್ದಾರೆ ಫಹಾದ್ ಫಾಸಿಲ್.
‘ಟೈಟಾನಿಕ್’ ಹೀರೋ ಲಿಯೊನಾರ್ಡೊ ಡಿ ಕ್ಯಾಫ್ರಿಯೋಗೆ ಮೊದಲ ಆಸ್ಕರ್ ತಂದುಕೊಟ್ಟ ‘ದಿ ರೆವೆನೆಂಟ್’ ಸಿನಿಮಾ ನಿರ್ದೇಶನ ಮಾಡಿರುವ ಹಾಲಿವುಡ್ನ ಲೆಜೆಂಡರಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ಹೊಸ ಸಿನಿಮಾ ಒಂದರ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಪಾತ್ರವೊಂದರಲ್ಲಿ ನಟಿಸಲು ಫಹಾದ್ ಫಾಸಿಲ್ ಅವರನ್ನು ಕೇಳಿದ್ದಾರೆ. ಆದರೆ ಫಹಾದ್ ಫಾಸಿಲ್ ಅವರಿಗೆ ನೋ ಹೇಳಿದ್ದಾರೆ.
‘ಬರ್ಡ್ ಮ್ಯಾನ್’, ‘ದಿ ರೆವನೆಂಟ್’ ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ನಿರ್ದೇಶನ ಮಾಡಿದ್ದು, ಅವರು ಇದೀಗ ಬ್ಲಾಕ್ ಕಾಮಿಡಿ ಜಾನರ್ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಒಂದು ನಿಗದಿತ ಪಾತ್ರದಲ್ಲಿ ನಟಿಸಲು ಸ್ವತಃ ನಿರ್ದೇಶಕ ಆಲೆಕ್ಸಾಂಡ್ರೊ ಗೊಂಜಾಲಿಸ್ ಇನ್ಹಾರಿತೊ ಫಹಾದ್ ಅವರನ್ನು ಕೇಳಿದರಂತೆ. ವಿಡಿಯೋ ಕಾಲ್ನಲ್ಲಿ ಪಾತ್ರದ ಬಗ್ಗೆ ಚರ್ಚೆ ಸಹ ಆಯ್ತಂತೆ. ಆದರೆ ಎಲ್ಲ ಮಾತುಕತೆಗಳ ಬಳಿಕ ಫಹಾದ್ ನೋ ಹೇಳಿದರಂತೆ.
ಇದನ್ನೂ ಓದಿ:ಫಹಾದ್ ಫಾಸಿಲ್ ಬಳಸುವುದು ಕೀಪ್ಯಾಡ್ ಫೋನು, ಆದರೆ ಬೆಲೆ ಎಷ್ಟು ಗೊತ್ತೆ?
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಫಹಾದ್ ಫಾಸಿಲ್, ‘ವಿಡಿಯೋ ಕಾಲ್ನಲ್ಲಿ ನಾವು ಮಾತನಾಡಿದೆವು. ಆದರೆ ಆ ಸಿನಿಮಾನಲ್ಲಿ ನಟಿಸಲು ನನ್ನ ಮಾತನಾಡುವ ರೀತಿ (ಆಕ್ಸೆಂಟ್) ಸಮಸ್ಯೆ ಆಯ್ತು. ಅದನ್ನು ಸರಿಮಾಡಲು ತರಬೇತಿಗಾಗಿ ನಾನು ನಾಲ್ಕು ತಿಂಗಳು ಅಮೆರಿಕದ ನ್ಯೂಯಾರ್ಕ್ನಲ್ಲಿ ಕಳೆಯಬೇಕು ಎಂದರು. ಆದರೆ ಆ ಅವಧಿಗೆ ನನಗೆ ಯಾವುದೇ ಸಂಭಾವನೆ ಸಹ ಕೊಡುವುದಿಲ್ಲ ಎಂದರು. ಹೀಗಾಗಿ ನಾನು ಆ ಸಿನಿಮಾದಲ್ಲಿ ನಟಿಸಲಿಲ್ಲ’ ಎಂದಿದ್ದಾರೆ ಫಹಾದ್ ಫಾಸಿಲ್.
ಅಲ್ಲದೆ, ಅಷ್ಟು ರಿಸ್ಕ್ ಹಾಕಿ ಸಿನಿಮಾನಲ್ಲಿ ನಟಿಸುವಂಥಹಾ ಫೈರ್ ಇರುವ ಪಾತ್ರ ಎಂದು ನನಗೆ ಅದು ಅನಿಸಲಿಲ್ಲ ಹಾಗಾಗಿ ನಾನು ರಿಸ್ಕ್ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ ಫಹಾದ್ ಫಾಸಿಲ್. ಅಂದಹಾಗೆ ಫಹಾದ್ ಬೇಡ ಎಂದಿರುವ ಹಾಲಿವುಡ್ ಸಿನಿಮಾದ ನಾಯಕ ವಿಶ್ವವಿಖ್ಯಾತ ನಟ ಟಾಮ್ ಕ್ರೂಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:57 pm, Sun, 17 August 25




