ಫಹಾದ್ ಫಾಸಿಲ್ ಬಳಸುವುದು ಕೀಪ್ಯಾಡ್ ಫೋನು, ಆದರೆ ಬೆಲೆ ಎಷ್ಟು ಗೊತ್ತೆ?
Fahad Fazil phone: ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಫಹಾದ್ ಕೀ ಪ್ಯಾಡ್ ಹೊಂದಿರುವ ಬಹಳ ಚಿಕ್ಕದಾದ ಫೋನಿನಲ್ಲಿ ಮಾತನಾಡುತ್ತಿದ್ದರು. ವಿಡಿಯೋ ನೋಡಿದವರು ಫಹಾದ್ ಎಷ್ಟು ಸರಳ ವ್ಯಕ್ತಿ, ಈಗಲೂ ಕೀ ಪ್ಯಾಡ್ ಫೋನು ಬಳಸುತ್ತಿದ್ದಾರೆ ಎಂದುಕೊಂಡರು. ಆದರೆ ಫಹಾದ್ ಅವರ ಫೋನಿನ ಬೆಲೆ ಕೇಳಿ ಅವರು ಕಂಗಾಲಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಫಹಾದ್ ಫಾಸಿಲ್ (Fahad Fazil), ಮಲಯಾಳಂ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೆ ತೆಲುಗು, ತಮಿಳು ಭಾಷೆಗಳಲ್ಲಿಯೂ ಬಲು ಬೇಡಿಕೆಯ ನಟ. ಸ್ಟಾರ್ ನಟ ಆಗಿರುವ ಜೊತೆಗೆ ಅತ್ಯದ್ಭುತ ನಟರೂ ಹೌದು ಫಹಾದ್ ಫಾಸಿಲ್. ಈ ನಟ ಪ್ರತಿ ಸಿನಿಮಾಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇತ್ತೀಚೆಗೆ ಫಹಾದ್ ಫಾಸಿಲ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋನಲ್ಲಿ ಫಹಾದ್ ಯಾರೊಟ್ಟಿಗೋ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಫಹಾದ್ ಬಳಸುತ್ತಿದ್ದ ಫೋನು ಐಫೋನಲ್ಲ ಬದಲಿಗೆ ಆಕಾರದಲ್ಲಿ ಚಿಕ್ಕದಾಗಿದ್ದ ಕೀ ಪ್ಯಾಡ್ ಹೊಂದಿದ್ದ ಫೋನದು.
ಲಕ್ಷ, ಎರಡು ಲಕ್ಷ ಬೆಲೆಯ ಐಫೋನ್, ಫೋಲ್ಡ್ ಫೋನುಗಳ ಜಮಾನಾನಲ್ಲಿ ಫಹಾದ್ ಫಾಸಿಲ್ ಕೀ-ಪ್ಯಾಡ್ ಫೋನು ಬಳಸುತ್ತಿರುವುದನ್ನು ಕಂಡ ಅಭಿಮಾನಿಗಳು ಫಹಾದ್ ಎಷ್ಟು ಸರಳ ಜೀವಿ, ಎಷ್ಟು ಸಿಂಪಲ್ ಆಗಿ ಬದುಕುತ್ತಿದ್ದಾರೆ ಎಂದರು. ಆದರೆ ಫಹಾದ್ ಬಳಸುತ್ತಿರುವ ಫೋನಿನ ಬೆಲೆ ಗೊತ್ತಾದರೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವುದು ಪಕ್ಕಾ. ಏಕೆಂದರೆ ಫಹಾದ್ ಅವರ ಫೋನು ಆಕಾರದಲ್ಲಿ ಚಿಕ್ಕದು ಆದರೆ ಬೆಲೆ ಮಾತ್ರ ಬಹಳ ದುಬಾರಿ.
ಫಹಾದ್ ಫಾಸಿಲ್ ಬಳಸುವುದು ವರ್ತು ಹೆಸರಿನ ಕಂಪೆನಿಯ ಫೋನು. ಈ ಕಂಪೆನಿಯ ಫೋನುಗಳು ಬಲು ದುಬಾರಿ. ನೋಡಲು ಚಿಕ್ಕದಾಗಿ, ಕೀ ಪ್ಯಾಡ್ ಹೊಂದಿರುವ ಫೋನುಗಳು ಇವಾಗಿವೆ ಆದರೆ ಬೆಲೆ ಮಾತ್ರ ಲಕ್ಷಗಳಲ್ಲೇ ಇದೆ. ಫಹಾದ್ ಫಾಸಿಲ್ ಬಳಸುತ್ತಿರುವುದು ವರ್ತು ಅಸೆಂಟ್ ಟಿಐ ಡಿಎಸ್6823 ಮಾಡೆಲ್ನ ಫೋನು. ಈ ಫೋನು ಬಿಡುಗಡೆ ಆದಾಗ ಇದರ ಬೆಲೆ 5.54 ಲಕ್ಷ ರೂಪಾಯಿಗಳಿತ್ತು. ಈಗ ಈ ಫೋನ್ ಮಾರುಕಟ್ಟೆಗೆ ಬರುತ್ತಿಲ್ಲ. ಆದರೆ ಈಗಲೂ ಕೆಲವು ವೆಬ್ಸೈಟ್ಗಳಲ್ಲಿ ಈ ಲಿಮಿಟೆಡ್ ಎಡಿಷನ್ ಫೋನು ಲಭ್ಯವಿದ್ದು, ಈಗಿನ ಬೆಲೆ ಸುಮಾರು 1.80 ಲಕ್ಷ ರೂಪಾಯಿಗಳಿವೆ.
ಫೋನಿನ ವಿಶೇಷತೆ ಏನು?
ಈ ಫೋನಿನ ವಿಶೇಷತೆಯೆಂದರೆ ಈ ಫೋನನ್ನು ಮಾಡಲು ಅಸಲಿ ಟೈಟ್ಯಾನಿಯಂ ಬಳಸಲಾಗಿದೆ. ಜೊತೆಗೆ ದುಬಾರಿ ಕಾರ್ಬನ್ ಫೈಬರ್ ಅನ್ನು ಬಳಸಲಾಗಿದ್ದು, ಅಪರೂಪದ ಸಫೈರ್ ಕ್ರಿಸ್ಟಲ್ ಬಳಸಿ ಇದರ ಸ್ಕ್ರೀನ್ ಅನ್ನು ಮಾಡಲಾಗಿದೆ ಮತ್ತು ಕೈಯಿಂದ ಮಾಡಿದ ಲೆದರ್ ಅನ್ನು ಸಹ ಬಳಸಲಾಗಿದೆ. ಈ ಫೋನಿನಲ್ಲಿ ಹಳೆಯ ನೋಕಿಯಾನಲ್ಲಿ ಇದ್ದ ಆಯ್ಕೆಗಳು ಮಾತ್ರವೇ ಇವೆ. ವೈ-ಫೈ ಜೊತೆಗೆ ಕನೆಕ್ಟ್ ಮಾಡಬಹುದಾದರೂ ಸ್ಕ್ರೀನ್ ಬಹಳ ಚಿಕ್ಕದಾಗಿರುವ ಕಾರಣ ಗೇಮ್ ಇನ್ನಿತರೆಗಳನ್ನೆಲ್ಲ ಆಡಲಾಗದು.
ಇದನ್ನೂ ಓದಿ:ಅಪರೂಪದ ಕಾರು ಖರೀದಿ ಮಾಡಿದ ಫಹಾದ್ ಫಾಸಿಲ್, ಏನಿದರ ವಿಶೇಷತೆ?
ಈ ಫೋನಿನ ಬಹಳ ಪ್ರಮುಖ ಆಯ್ಕೆ ಎಂದರೆ ವರ್ತು ಕಾನ್ಸರ್ಜ್ ಸರ್ವೀಸ್. ವಿಶ್ವದ ಅತ್ಯುತ್ತಮ ಕಾನ್ಸರ್ಜ್ ಸರ್ವೀಸ್ ಗಳಲ್ಲಿ ವರ್ತು ಅವರದ್ದು ಒಂದು. ವರ್ತು ಫೋನು ಖರೀದಿಸಿದ ಎಲ್ಲರಿಗೂ ವರ್ತು ಕಾನ್ಸರ್ಜ್ ಸರ್ವೀಸ್ ಅನ್ನು ಬಳಸಬಹುದಾಗಿರುತ್ತದೆ. ಕಾನ್ಸರ್ಜ್ ಸರ್ವೀಸ್ ಕರೆ ಮಾಡಿ ಯಾವುದೇ ಬೇಡಿಕೆ ಇಟ್ಟರು ಅದನ್ನು ಅವರು ಮಾಡಿಕೊಡುತ್ತಾರೆ. ನೀವು ಹಣ ಪಾವತಿಸಬೇಕು ಅಷ್ಟೆ. ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್, ರಿಯಲ್ ಎಸ್ಟೇಟ್ ಯಾವುದೇ ಸೇವೆಯನ್ನಾದರೂ ನೀವು ಕೇಳಬಹುದು. ಯಾವ ದೇಶದಲ್ಲಾದರೂ ಕೇಳಬಹುದು.
ವರ್ತು ಸಂಸ್ಥೆಯವರು ಚಿನ್ನದ ಫೋನುಗಳು, ವಜ್ರದ ಫೋನುಗಳನ್ನು ಸಹ ಬಿಡುಗಡೆ ಮಾಡುತ್ತಾರೆ. ಅವರ ಫೋನಿನ ಬೆಲೆ 5 ಲಕ್ಷದಿಂದ ಒಂದು ಕೋಟಿ ರೂಪಾಯಿಗಳ ವರೆಗೆ ಇದೆ. ಫೋನು ಖರೀದಿಸುವವರ ಪ್ರೊಫೈಲ್ ಪರೀಕ್ಷೆ ಮಾಡಿಯೇ ಈ ಸಂಸ್ಥೆ ಅವರಿಗೆ ಫೋನು ಮಾರಾಟ ಮಾಡುತ್ತದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ