ಸಿನಿಮಾ ಸೋಲು, ವಿವಾದದ ನಡುವೆಯೂ ಕಮಲ್ ಹಾಸನ್ಗೆ ಸಿಕ್ತು ಆಸ್ಕರ್ ಗೌರವ
ಒಂದೆಡೆ ಕನ್ನಡ ಭಾಷೆಗೆ ಸಂಬಂಧಿಸಿದ ವಿವಾದ ಆಯಿತು. ಇನ್ನೊಂದೆಡೆ ‘ಥಗ್ ಲೈಫ್’ ಸಿನಿಮಾ ಸೋತಿತು. ಈ ಬೇಸರದ ನಡುವೆಯೂ ನಟ ಕಮಲ್ ಹಾಸನ್ ಅವರಿಗೆ ಖುಷಿ ಆಗುವಂತಹ ಬೆಳವಣಿಗೆ ನಡೆದಿದೆ. ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್’ (ಆಸ್ಕರ್) ಕಡೆಯಿಂದ ಕಮಲ್ ಹಾಸನ್ಗೆ ಆಹ್ವಾನ ಬಂದಿದೆ.

ನಟ ಕಮಲ್ ಹಾಸನ್ (Kamal Haasan) ಅವರು ಇತ್ತೀಚೆಗೆ ಸಿನಿಮಾಗಿಂತಲೂ ಹೆಚ್ಚಾಗಿ ವಿವಾದದ ಮೂಲಕವೇ ಸುದ್ದಿ ಆದರು. ಅವರು ನಟಿಸಿದ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸಿದ್ಧವಿರುವಾಗ ಅವರು ಕನ್ನಡದ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣ ಆಯಿತು. ಆ ವಿವಾದದ ಕಿಡಿಯಿಂದಾಗಿ ಕರ್ನಾಟಕದಲ್ಲಿ ‘ಥಗ್ ಲೈಫ್’ (Thug Life) ಚಿತ್ರ ಬಿಡುಗಡೆ ಆಗಲೇ ಇಲ್ಲ. ಬೇರೆ ರಾಜ್ಯಗಳಲ್ಲಿ ಸಿನಿಮಾ ತೆರೆಕಂಡರೂ ಹೀನಾಯವಾಗಿ ಸೋತಿತು. ಇಷ್ಟೆಲ್ಲ ಕಹಿ ಅನುಭವದ ಬಳಿಕ ಕಮಲ್ ಹಾಸನ್ ಅವರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಈಗ ಅವರು ಆಸ್ಕರ್ (Oscar) ಗೌರವಕ್ಕೆ ಪಾತ್ರರಾಗಿದ್ದಾರೆ! ಹಾಗಂತ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. ಬದಲಿಗೆ, ಆಸ್ಕರ್ ಸದಸ್ಯತ್ವ ಸಿಕ್ಕಿದೆ.
ಪ್ರತಿ ವರ್ಷ ಆಸ್ಕರ್ ಪ್ರಶಸ್ತಿ ನೀಡಲಾಗುತ್ತದೆ. ಅದಕ್ಕಾಗಿ ಜಾಗತಿಕ ಸಿನಿಮಾದ ಹಲವರು ವೋಟ್ ಮಾಡುತ್ತಾರೆ. ವೋಟ್ ಮಾಡಬೇಕು ಎಂದರೆ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್’ನಲ್ಲಿ ಸದಸ್ಯರಾಗಿರಬೇಕು. ಇದಕ್ಕೆ ಸದಸ್ಯರಾಗುವಂತೆ ಕಮಲ್ ಹಾಸನ್ ಅವರಿಗೆ ಈಗ ಆಹ್ವಾನ ನೀಡಲಾಗಿದೆ. ಅದನ್ನು ಅವರು ಖುಷಿಯಿಂದ ಸ್ವೀಕರಿಸಿದ್ದಾರೆ.
ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ ಸೇರಿಕೊಳ್ಳಲು ನನಗೆ ಹೆಮ್ಮೆ ಆಗುತ್ತಿದೆ. ಈ ಮನ್ನಣೆ ಕೇವಲ ನನ್ನದಲ್ಲ. ಇಡೀ ಭಾರತೀಯ ಸಿನಿಮಾ ಸಮೂಹಕ್ಕೆ ಇದು ಸೇರುತ್ತದೆ. ನನಗೆ ಈ ಸ್ವರೂಪ ನೀಡಿದ ಹಲವಾರು ನಿರ್ದೇಶಕರಿಗೆ ಸಲ್ಲುತ್ತದೆ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
I am honoured to join the Academy of Motion Picture Arts and Sciences.
This recognition is not mine alone, it belongs to the Indian film community and the countless storytellers who shaped me. Indian cinema has so much to offer the world, and I look forward to deepening our… https://t.co/zmw0TYFmPq
— Kamal Haasan (@ikamalhaasan) June 28, 2025
‘ಭಾರತೀಯ ಚಿತ್ರರಂಗವು ಜಗತ್ತಿಗೆ ಇನ್ನೂ ಸಾಕಷ್ಟನ್ನು ನೀಡಬೇಕಿದೆ. ಜಾಗತಿಕ ಸಿನಿಮಾ ಮಂದಿಯ ಜೊತೆ ಇನ್ನಷ್ಟು ತೊಡಗಿಕೊಳ್ಳಲು ನಾನು ಕಾತುರನಾಗಿದ್ದೇನೆ. ನನ್ನ ಜೊತೆ ಅಕಾಡೆಮಿ ಸೇರುತ್ತಿರುವ ಇನ್ನುಳಿದ ಕಲಾವಿದರು ಮತ್ತು ತಂತ್ರಜ್ಞರಿಗೂ ಅಭಿನಂದನೆ ತಿಳಿಸುತ್ತೇನೆ’ ಎಂದು ಕಮಲ್ ಹಾಸನ್ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ, ಕೊನೆ ಆಗುವುದೇ ಪಕ್ಷಪಾತ?
ಕಮಲ್ ಹಾಸನ್ ಅವರಿಗೆ ಆಸ್ಕರ್ ಗೌರವ ಸಿಕ್ಕಿದ್ದಕ್ಕೆ ಅಭಿಮಾನಿಗಳಿಗೆ ತುಂಬ ಖುಷಿಯಾಗಿದೆ. ಕಮೆಂಟ್ಗಳ ಮೂಲಕ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಗಣ್ಯರು ಕೂಡ ಕಮಲ್ ಹಾಸನ್ ಅವರನ್ನು ಅಭಿನಂದಿಸಿದ್ದಾರೆ. ಆಯುಷ್ಮಾನ್ ಖುರಾನಾ, ಡಿಂಪಲ್ ಕಪಾಡಿಯಾ ಮುಂತಾದವರು ಕೂಡ ಅಕಾಡೆಮಿ ಸದಸ್ಯತ್ವಕ್ಕೆ ಆಹ್ವಾನ ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:44 am, Sun, 29 June 25








