ನಟಿ ಆಲಿಯಾ ಭಟ್ (Alia Bhatt) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಏಪ್ರಿಲ್ನಲ್ಲಿ ನಟ ರಣಬೀರ್ ಕಪೂರ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಅನೇಕ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿರುವ ಈ ಜನಪ್ರಿಯ ನಟಿ ‘ಕಾಫಿ ವಿತ್ ಕರಣ್ ಸೀಸನ್ 7’ (Koffee with Karan) ಶೋಗೆ ಅತಿಥಿಯಾಗಿ ಬಂದಿದ್ದಾರೆ. ಅವರ ಜೊತೆ ರಣವೀರ್ ಸಿಂಗ್ ಕೂಡ ಸಾತ್ ನೀಡಿದ್ದಾರೆ. ಜುಲೈ 7ರಂದು ಮೊದಲ ಎಪಿಸೋಡ್ ಪ್ರಸಾರ ಆಗಿದೆ. ಇದರಲ್ಲಿ ಅನೇಕ ವಿಚಾರಗಳನ್ನು ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ (Ranveer Singh) ಹಂಚಿಕೊಂಡಿದ್ದಾರೆ. ಕರಣ್ ಜೋಹರ್ ಕೇಳಿದ ಕೆಲವು ನೇರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ.
‘ಗಲ್ಲಿ ಬಾಯ್’ ಸಿನಿಮಾದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ತೆರೆ ಹಂಚಿಕೊಂಡಿದ್ದರು. ಆ ವೇಳೆ ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆದರು. ಈಗ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅವರು ಮತ್ತೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಕರಣ್ ಜೋಹರ್. ಆ ಕಾರಣದಿಂದ ತಮ್ಮ ಸಿನಿಮಾದ ನಾಯಕ-ನಾಯಕಿಯನ್ನೇ ಮೊದಲ ಎಪಿಸೋಡ್ಗೆ ಕರಣ್ ಆಹ್ವಾನಿಸಿದ್ದಾರೆ.
ಸಾಮಾನ್ಯವಾಗಿ ಮದುವೆ ಬಳಿಕ ಬೇರೆ ನಟರ ಜೊತೆ ನಟಿಯರು ಹೆಚ್ಚು ಆಪ್ತವಾಗಿ ಇರುವುದಿಲ್ಲ. ಆದರೆ ಆಲಿಯಾ ಭಟ್ ಹಾಗಲ್ಲ. ರಣಬೀರ್ ಕಪೂರ್ ಜೊತೆ ಮದುವೆ ಆದ ನಂತರವೂ ಅವರು ರಣವೀರ್ ಸಿಂಗ್ ಜೊತೆ ಆತ್ಮೀಯತೆ ಕಾಯ್ದುಕೊಂಡಿದ್ದಾರೆ. ‘ರಣವೀರ್ ಸಿಂಗ್ ಜತೆ ನಾನು ಏನು ಬೇಕಾದರೂ ಮಾತನಾಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಜೊತೆ ಹೇಗೆ ಕೆಲಸ ಮಾಡಬೇಕು ಎಂಬುದು ತಿಳಿಯದ ಕಾರಣ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಆಲಿಯಾ ಕಷ್ಟಪಟ್ಟಿದ್ದರು. ಆಗ ಅವರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದೇ ರಣವೀರ್ ಸಿಂಗ್ ಎಂಬುದು ಕೂಡ ‘ಕಾಫಿ ವಿತ್ ಕರಣ್ ಸೀಸನ್ 7’ ಶೋನ ಮೊದಲ ಎಪಿಸೋಡ್ನಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ
ಸಮಂತಾ ರುತ್ ಪ್ರಭು, ಸಾರಾ ಅಲಿ ಖಾನ್, ಜಾನ್ವಿ ಕಪೂರ್ ಸೇರಿದಂತೆ ಅನೇಕ ನಟ-ನಟಿಯರು ಈ ಶೋಗೆ ಬರುವವರಿದ್ದಾರೆ. ಸೆಲೆಬ್ರಿಟಿಗಳ ಬದುಕಿನ ವೈಯಕ್ತಿಕ ವಿಚಾರಗಳನ್ನು ಕರಣ್ ಜೋಹರ್ ಕೆದಕಲಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಶೋ ಬಗ್ಗೆ ಹೆಚ್ಚು ಆಸಕ್ತಿ ಇದೆ.