ದೇಶವನ್ನೇ ತಲ್ಲಣ ಗೊಳಿಸಿದ್ದ ಶೀನಾ ಬೋರಾ (Sheena Bora) ಹತ್ಯೆ ಪ್ರಕರಣದ ಬಗ್ಗೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿಯನ್ನು ಪ್ರಧಾನವಾಗಿರಿಸಿಕೊಂಡು ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಿದೆ. ಡಾಕ್ಯುಮೆಂಟರಿ ವಿರುದ್ಧ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಡಾಕ್ಯುಮೆಂಟರಿಯು ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ಡಾಕ್ಯುಮೆಂಟರಿ ಬಿಡುಗಡೆಗೆ ತಡೆ ನೀಡುವಂತೆ ಕೋರಿತ್ತು ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಡಾಕ್ಯುಮೆಂಟರಿಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿದೆ. ಅಲ್ಲದೆ ತನಿಖೆಯ ಮೇಲೆ ಪರಿಣಾಮ ಬೀರುವ ಯಾವುದೇ ಅಂಶಗಳು ಡಾಕ್ಯುಮೆಂಟರಿಯಲ್ಲಿ ಇಲ್ಲವೆಂದು ಅಭಿಪ್ರಾಯ ತಿಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇವತಿ ಮೋಹಿತೆ, ಮಂಜುಶಾ ದೇಶಪಾಂಡೆ, ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದ್ದಾರೆ. ‘ನಾವು ಡಾಕ್ಯುಮೆಂಟರಿ ಸರಣಿಯನ್ನು ವೀಕ್ಷಿಸಿದ್ದು ವಿಚಾರಣೆ ಮೇಲೆ ಪ್ರಭಾವ ಬೀರುವ ಯಾವುದೇ ಅಂಶಗಳು ಡಾಕ್ಯುಮೆಂಟರಿಯಲ್ಲಿ ಇಲ್ಲ ಎನಿಸಿದೆ’ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಾಕ್ಯುಮೆಂಟರಿಗೆ, ‘ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ದಿ ಬರ್ರೀಡ್ ಟ್ಟ್ರುತ್’ ಎಂದು ಹೆಸರಿಡಲಾಗಿದ್ದು, ಈ ಡಾಕ್ಯುಮೆಂಟರಿ ಫೆಬ್ರವರಿ 23ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಲಿತ್ತು, ಆದರೆ ಸಿಬಿಐ ಅರ್ಜಿ ಸಲ್ಲಿಸಿದ್ದ ಕಾರಣ ಬಿಡುಗಡೆ ಆಗಿರಲಿಲ್ಲ. ಇದೀಗ ನ್ಯಾಯಾಲಯದಲ್ಲಿ ಅರ್ಜಿ ತಳ್ಳಿಹಾಕಲ್ಪಟ್ಟಿರುವ ಕಾರಣ, ಡಾಕ್ಯುಮೆಂಟರಿಯು ಫೆಬ್ರವರಿ 29ಕ್ಕೆ ಬಿಡುಗಡೆ ಆಗಿದೆ.
ಇದನ್ನೂ ಓದಿ:ಥ್ರಿಲ್ಲರ್ ಕಾದಂಬರಿಯಂತಾದ ಶೀನಾ ಬೋರಾ ಕೊಲೆ ಕೇಸ್; ಕಾರ್ಯಪ್ರವೃತ್ತರಾದ ಇಂದ್ರಾಣಿ ಪರ ವಕೀಲರು !
‘ಈ ಡಾಕ್ಯುಮೆಂಟರಿಯ ಪ್ರಕರಣದ ಬಗ್ಗೆ ಏಕರೂಪದ ಜನಾಭಿಪ್ರಾಯವನ್ನು ಉಂಟು ಮಾಡುತ್ತದೆ. ಈ ಜನಾಭಿಪ್ರಾಯವು ಪ್ರಕರಣದ ವಿಚಾರಣೆ ಹಾಗೂ ನ್ಯಾಯಾಲಯದ ಕಲಾಪಗಳ ಮೇಲೆ ಪರೋಕ್ಷ ಪರಿಣಾಮ ಬೀರಬಹುದು’ ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ‘ನಾವು ಡಾಕ್ಯುಮೆಂಟರಿಯನ್ನು ಬೇರೆ-ಬೇರೆ ಆಯಾಮಗಳಿಂದ ನೋಡಿದ್ದು, ಡಾಕ್ಯುಮೆಂಟರಿ ಸದರಿ ಪ್ರಕರಣದ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಖಾತ್ರಿಪಡಿಸಿಕೊಂಡಿದ್ದೇವೆ’ ಎಂದು ನ್ಯಾಯಾಲಯ ಹೇಳಿದೆ.
‘ಡಾಕ್ಯುಮೆಂಟರಿಯಲ್ಲಿ ಪ್ರಕರಣದ ಹಲವು ಸಾಕ್ಷಿಗಳು ಸಂದರ್ಶನ ನೀಡಿದ್ದು, ಯಾವ ಸಾಕ್ಷಿ, ನ್ಯಾಯಾಲಯದ ವಿಚಾರಣೆಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿ ಎಂದು ನ್ಯಾಯಾಲಯವು ಸಿಬಿಐ ಪರ ವಕೀಲರನ್ನು ಪ್ರಶ್ನಿಸಿದ್ದು ಮಾತ್ರವೇ ಅಲ್ಲದೆ, ಈ ಪ್ರಕರಣದಲ್ಲಿ ಮಾಧ್ಯಮಗಳ ಹಪ-ಹಪಿ ಹೊಸದೇನೂ ಅಲ್ಲ, ಮೊದಲಿನಿಂದಲೂ ಅದು ನಡೆಯುತ್ತಲೇ ಇದೆ. ಆಗ ಆಗದ ಪರಿಣಾಮ ಈ ಡಾಕ್ಯುಮೆಂಟರಿಯಿಂದ ಆಗುತ್ತದೆ ಎಂದು ಹೇಳಲಾಗದು’ ಎಂದಿದೆ.
ಶೀನಾ ಬೋರಾ ಪ್ರಕರಣ ಇಡೀ ದೇಶದಲ್ಲಿಯೇ ಸದ್ದು ಮಾಡಿದ್ದ ಹೈಪ್ರೊಫೈಲ್ ಪ್ರಕರಣ. ಕಾರ್ಪೊರೇಟ್ ಲೋಕದ ಸೆಲೆಬ್ರಿಟಿ ಇಂದ್ರಾಣಿ ಮುಖರ್ಜಿ ತನ್ನ ‘ಸಹೋದರಿ’ ಶೀನಾ ಬೋರಾ ಅನ್ನು ಹತ್ಯೆ ಮಾಡಿದ ಆರೋಪದ ಮೇಲೆ 2015ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಪ್ರಕರಣದಲ್ಲಿ ಆಕೆಯ ಡ್ರೈವರ್, ಮಾಜಿ ಪತಿಯ ಬಂಧನವೂ ಆಯ್ತು. ಅದಾದ ಬಳಿಕ ದಿನಕ್ಕೊಂದು ಹೊಸ ವಿಷಯಗಳು ಪ್ರಕರಣದ ಬಗ್ಗೆ ಹೊರ ಬರಲು ಆರಂಭವಾದವು. ಕೊನೆಗೆ ಹತ್ಯೆಯಾದ ಶೀನಾ ಬೋರಾ, ಇಂದ್ರಾಣಿಯ ಸಹೋದರಿ ಅಲ್ಲ ಬದಲಿಗೆ ಪುತ್ರಿ ಎಂಬುದು ಬೆಳಕಿಗೆ ಬಂತು. ಅತ್ಯಂತ ರೋಚಕವಾದ ಈ ಪ್ರಕರಣದ ಬಗೆಗಿನ ಡಾಕ್ಯುಮೆಂಟರಿ ಈಗ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ