ಭಾರತದ ಟಾಪ್ ಕಮಿಡಿಯನ್ (Top Comedian) ಎನಿಸಿಕೊಂಡಿರುವ ಕಪಿಲ್ ಶರ್ಮಾ (Kapil Sharma), ಕಳೆದ 11 ವರ್ಷಗಳಿಂದಲೂ ತಮ್ಮ ಹೆಸರಿನಲ್ಲಿ ಕಾಮಿಡಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಹಲವು ಬಾರಿ ಈ ಶೋ ಭಾರತದ ಟಾಪ್ ಹಿಂದಿ ಶೋ ಎಂಬ ಖ್ಯಾತಿ ಗಳಿಸಿಕೊಂಡಿದೆ. ಕೋಟ್ಯಂತರ ವೀಕ್ಷಕರು ಕಪಿಲ್ರ ಕಾಮಿಡಿ ಶೋ ನೋಡುತ್ತಲೇ ಬಂದಿದ್ದಾರೆ. ಇದೀಗ ಕಪಿಲ್ ಶರ್ಮಾ ಶೋ, ಟಿವಿ ಇಂದ ನೆಟ್ಫ್ಲಿಕ್ಸ್ಗೆ ವರ್ಗಗೊಂಡಿದೆ. 11 ವರ್ಷಗಳಿಂದಲೂ ಜನರನ್ನು ನಗಿಸುತ್ತಾ ಬರುತ್ತಿರುವ ಈ ಶೋ ಬಗ್ಗೆ ಇದೀಗ ಮತ್ತೊಬ್ಬ ಕಮಿಡಿಯನ್ ಅಪಸ್ವರವೆತ್ತಿದ್ದಾರೆ. ‘ಅಸಹ್ಯಕರ, ಚೀಪ್’ ಎಂದು ಕಮೆಂಟ್ ಮಾಡಿದ್ದಾರೆ.
ಕಪಿಲ್ ಶರ್ಮಾ ಜೊತೆಗೆ ಕೆಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಕಮಿಡಿಯನ್ ಸುನಿಲ್ ಪಾಲ್ ಇದೀಗ ಕಪಿಲ್ ಶರ್ಮಾ ಶೋ ವಿರುದ್ಧ ಟೀಕೆ ಮಾಡಿದ್ದಾರೆ. ಟೈಮ್ಸ್ ನೌ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಪಾಲ್, ‘ಕಪಿಲ್ರ ಕಾಮಿಡಿ ಶೋನ ಕೆಲವು ಭಾಗಗಳು ಅತ್ಯಂತ ಅಸಹ್ಯವಾಗಿವೆ. ಅದರಲ್ಲೂ ಕಮಿಡಿಯನ್ ಸುನಿಲ್ ಗ್ರೋವರ್ ಮಹಿಳೆಯರ ವೇಷ ತೊಟ್ಟು ಮಾಡುವ ಕಾಮಿಡಿ ಅಸ್ಯಕರ, ಚೀಪ್ ಎನಿಸುತ್ತದೆ. ಆ ವ್ಯಕ್ತಿ ಮಹಿಳೆಯರಂತೆ ವೇಷ ಧರಿಸಿ ಶೋನಲ್ಲಿ ಕೆಟ್ಟ-ಕೆಟ್ಟ ಮಾತುಗಳನ್ನಾಡುತ್ತಾನೆ’ ಎಂದಿದ್ದಾರೆ.
ಸುನಿಲ್ ಗ್ರೋವರ್, ಮಹಿಳೆಯರ ವೇಷ ಧರಿಸಿ ಕೆಟ್ಟದಾಗಿ ನಡೆದುಕೊಂಡು ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾನೆ. ಮಹಿಳೆಯರಿಗೆ ಗೌರವ ಕೊಡಬೇಕೆಂಬ ಸಂಸ್ಕಾರ ಶೋಗೆ ಇಲ್ಲ. ಮಹಿಳೆಯರು ಇರುವುದೇ ಕೆಟ್ಟದಾಗಿ ತೋರಿಸಲು, ಕಾಮಿಡಿ ಮಾಡಲು ಎಂಬ ಧೋರಣೆ ಅವರಲ್ಲಿದೆ. ಕಪಿಲ್ ಶರ್ಮಾ ಶೋ ಮುಖ್ಯವಾಹಿನಿಯ ಕಾಮಿಡಿ ಮಾಡಬೇಕೆ ವಿನಃ ಈ ರೀತಿಯ ಚೀಪ್ ಟ್ರಿಕ್ಗಳನ್ನು ಮಾಡಬಾರದು ಎಂದಿದ್ದಾರೆ ಸುನಿಲ್ ಪಾಲ್.
ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿದ್ದಾರೆ ಖ್ಯಾತ ಕಾಮಿಡಿಯನ್ಸ್; ಇವರ ಆಸ್ತಿ ಎಷ್ಟು ಕೋಟಿ ರೂಪಾಯಿ?
‘ನೆಟ್ಫ್ಲಿಕ್ಸ್, ತನ್ನ ಅಸಹ್ಯಕರ ಹಾಗೂ ವಯಸ್ಕರ ಶೋಗಳಿಗೆ ಜನಪ್ರಿಯ. ಹಾಗಾಗಿ ಅದಕ್ಕೆ ತಕ್ಕಂತೆ ಇವರೂ ಸಹ ಶೋ ನಡೆಸುತ್ತಿದ್ದಾರೆ. ಕಪಿಲ್ ಶರ್ಮಾ ಶೋಗೆ 40 ಮಂದಿ ರೈಟರ್ಗಳಿದ್ದಾರೆ ಹಾಗಿದ್ದರೂ ಸಹ ಅವರಿಗೆ ಒಳ್ಳೆಯ ಹೊಸ ರೀತಿಯ ಜೋಕ್ ಬರೆಯಲಾಗುತ್ತಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಜನ ಕಪಿಲ್ ಹಾಗೂ ಸುನಿಲ್ ಗ್ರೋವರ್ ಮತ್ತೆ ಒಂದಾಗಲೆಂದು ಕಾಯುತ್ತಿದ್ದರು ಎಂದಿದ್ದಾರೆ ಅದೆಲ್ಲ ಸುಳ್ಳು. ನಾನು ಸುನಿಲ್ನನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ಕಮಿಡಿಯನ್ ಜಸ್ಪ್ರೀತ್ ಭಾಟಿಯ ಸೂಟ್ಕೇಸ್ ಅನ್ನು ಹಿಡಿದುಕೊಂಡು ಓಡಾಡುತ್ತಿದ್ದ. ಆಗ ಆತನಿಗೆ ಶೋಗಳಿಗೆ ಎಂಟ್ರಿ ಸಹ ಕೊಡಲಾಗುತ್ತಿರಲಿಲ್ಲ. ನಾನು ಆಗಲೇ ದೊಡ್ಡ ದೊಡ್ಡ ಶೋ ಮಾಡುತ್ತಿದ್ದೆ. ಜನ ಸುನಿಲ್ ಗ್ರೋವರ್ಗಾಗಿ ಕಾಯುವುದಿಲ್ಲ ಕಾಯುವುದು ಕಪಿಲ್ ಶರ್ಮಾಗಾಗಿ’ ಎಂದಿದ್ದಾರೆ.
‘ಕಪಿಲ್ ಶರ್ಮಾ ಕೆಲವು ವಿಷಯಗಳನ್ನು ಅರ್ಥ ಮಾಡಿಕೊಂಡು ಶೋ ನಡೆಸಬೇಕು. ಜನರಿಗೆ ಏನು ಬೇಕು ಎಂದು ಗರುತಿಸಿ ಅದನ್ನು ನೀಡಬೇಕು. ಈಗ ಶೋನಲ್ಲಿ ಪಂಜಾಬಿ ಹೆಚ್ಚಿಗಿದೆ. ವಲ್ಗಾರಿಟಿ ಸಹ ಹೆಚ್ಚಾಗಿದೆ. ಕಪಿಲ್, ನೆಟ್ಫ್ಲಿಕ್ಸ್ ಬಿಟ್ಟು ಮತ್ತೆ ಟಿವಿಗೆ ಬರಬೇಕು. ನೆಟ್ಫ್ಲಿಕ್ಸ್ನಲ್ಲಿ ಕಪಿಲ್ ಶರ್ಮಾ ಶೋ ಬಂದ್ ಆಗುತ್ತದೆ ಎನ್ನುತ್ತಿದ್ದಾರೆ ಹಾಗೇನಾದರೂ ಆದರೆ ಅದು ಒಳ್ಳೆಯದೇ’ ಎಂದಿದ್ದಾರೆ ಸುನಿಲ್ ಪಾಲ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ