ಜೆನಿಲಿಯಾ ಡಿಸೋಜಾ (Genelia Deshmukh) ದಶಕದ ಹಿಂದೆ ದಕ್ಷಿಣ ಭಾರತ ಚಿತ್ರರಂಗದ (South Movie Industry) ಟಾಪ್ ನಟಿ. ತೆಲುಗು ಚಿತ್ರರಂಗದಲ್ಲಂತೂ ಒಂದರ ಹಿಂದೊಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಈ ನಟಿ ಕನ್ನಡದಲ್ಲಿ ಶಿವರಾಜ್ ಕುಮಾರ್ (Shiva Rajkumr) ನಟನೆಯ ಸತ್ಯ ಇನ್ ಲವ್ (Sathya In Love) ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕೆಲ ಕಾಲ ಸಿನಿಮಾಗಳಿಂದ ದೂರ ಉಳಿದಿದ್ದ ಜೆನಿಲಿಯಾ ಮತ್ತೆ ನಟಿಸಲು ಆರಂಭಿಸಿದ್ದು, ಇದೀಗ ಜೆನಿಲಿಯಾ ನಟಿಸಿರುವ ಹೊಸ ಸಿನಿಮಾ ಒಂದು ಜಿಯೋ ಸಿನಿಮಾದಲ್ಲಿ ಬಿಡುಗಡೆ ಆಗುತ್ತಿದೆ.
ಭಿನ್ನ ಕೌಟುಂಬಿಕ ಕತೆಯನ್ನು ಒಳಗೊಂಡಿರುವ ‘ಟ್ರಯಲ್ ಪೀರಿಯಡ್’ ಹೆಸರಿನ ಸಿನಿಮಾದಲ್ಲಿ ಜೆನಿಲಿಯಾ ಡಿ ಸೋಜಾ ನಟಿಸಿದ್ದು, ಸಿನಿಮಾದಲ್ಲಿ ಮಾನವ್ ಕೌಲ್ ಸಹ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಅಲೆಯಾ ಸೆನ್ ನಿರ್ದೇಸಿದ್ದು, ಸಿನಿಮಾದಲ್ಲಿ ಶಕ್ತಿ ಕಪೂರ್, ಶೀಬಾ ಚಡ್ಡಾ, ಗಜರಾಜ್ ರಾವ್ ಮತ್ತು ಝಿಡಾನೆ ಬ್ರೇಜ್ ಸಹ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕಾಲದ ಕುಟುಂಬವೊಂದರ ಸಂಬಂಧ ಮತ್ತು ಸಂಬಂಧದಲ್ಲಿನ ಸಂಕೀರ್ಣತೆಗಳ ಬಗೆಗಿನ ಕತೆಯನ್ನು ‘ಟ್ರಯಲ್ ಪೀರಿಯಡ್’ ಒಳಗೊಂಡಿದೆ.
ಇದನ್ನೂ ಓದಿ:Genelia Dsouza: ಕಿಚ್ಚ ಸುದೀಪ್ ಚಿತ್ರಕ್ಕೆ ಬೆಂಬಲ ನೀಡಲು ಗಂಡನ ಜೊತೆ ಬಂದ ಜೆನಿಲಿಯಾ ಡಿಸೋಜಾ
ಸಿಂಗಲ್ ಮದರ್ ಆನಾಳ ಪಾತ್ರದಲ್ಲೆ ಜೆನಿಲಿಯಾ ನಟಿಸಿದ್ದಾರೆ. ಅನಾಳ ಮಗ, ‘ಮೂವತ್ತು ದಿನಗಳ ಟ್ರಯಲ್ ಪೀರಿಯಡ್‌ಗೆ ನನಗೊಬ್ಬ ತಂದೆ ಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟಾಗ ಆನಾಳ ಬದುಕಿನಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಮಗನ ಬೇಡಿಕೆಯನ್ನು ಈಡೇರಿಸಲು ಮುಂದಾದಾಗ ಅವರ ಬದುಕಿನಲ್ಲಿ ಪಿಡಿ ಅಲಿಯಾಸ್ ಪ್ರಜಾಪತಿ ದ್ವಿವೇದಿಯ ಪ್ರವೇಶವಾಗುತ್ತದೆ. ಉಜ್ಜಯಿನಿಯ ಪಿಡಿ, ಆನಾ ಮತ್ತು ಅವಳ ಮಗ ಏನು ನಿರೀಕ್ಷೆ ಮಾಡಿದ್ದರೊ ಅದಕ್ಕೆ ಸಂಪೂರ್ಣ ವಿರುದ್ಧವಾದ ಸ್ವಭಾವದವನಾಗಿರುತ್ತಾನೆ. ಇಂಥದ್ದೊಂದು ಪರಸ್ಪರ ಭಿನ್ನ ಕುಟುಂಬದಲ್ಲಿ ಎದುರಾಗುವ ಸವಾಲುಗಳು, ವೈಯಕ್ತಿಕ ಸಂಘರ್ಷಗಳು, ಅನಿರಿಕ್ಷಿತವಾಗಿ ಹುಟ್ಟಿಕೊಳ್ಳುವ ಸಂಬಂಧಗಳು, ಪ್ರೇಮ ಮತ್ತು ಸ್ನೇಹದ ತಾಜಾತನ ಎಲ್ಲವೂ ‘ಟ್ರಯಲ್ ಪೀರಿಯಡ್’ ಸಿನಿಮಾದಲ್ಲಿ ಕಾಣಲು ಲಭ್ಯವಿದೆ.
ಈ ಸಿನಿಮಾವನ್ನು ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಜಿಯೊ ಸ್ಟೂಡಿಯೊಸ್ ಈ ಸಿನಿಮಾವನ್ನು ಪ್ರಸ್ತುತಪಡಿಸಿದೆ. ಈ ಸಿನಿಮಾದ ನಿರ್ಮಾಣದಲ್ಲಿ ಕ್ರೋಮ್ ಪಿಕ್ಚರ್ಸ್ ಪ್ರೊಡಕ್ಷನ್‌ನ ಹೇಮಂತ್ ಭಂಡಾರಿ, ಅಮಿತ್ ರವೀಂದ್ರನಾಥ ಶರ್ಮ ಮತ್ತು ಅಲೆಯ ಸೆನ್ ಅವರುಗಳು ಕೈಜೋಡಿಸಿದ್ದಾರೆ. ಸಿನಿಮಾವು ಜುಲೈ 21 ರಂದು ಜಿಯೋ ಸಿನಿಮಾಸ್ನಲ್ಲಿ ತೆರೆಗೆ ಬರಲಿದೆ.
ಸಿನಿಮಾದ ಬಗ್ಗೆ ಮಾತನಾಡಿರುವ ಜೆನೆಲಿಯಾ ದೇಶಮುಖ್, ”ಸಂಖ್ಯೆಗಿಂತ ಗುಣಮಟ್ಟವನ್ನೇ ನೆಚ್ಚಿಕೊಂಡು ಸಿನಿಮಾವನ್ನು ಆಯ್ದುಕೊಳ್ಳಬೇಕಾದ ಹಂತದಲ್ಲಿ ನಾನೀಗ ನಿಂತಿದ್ದೇನೆ. ನಿರ್ದೇಶಕ ಅಲೆಯಾ ಸೆನ್ ಮತ್ತು ಕ್ರೋಮ್, ‘ಟ್ರಯಲ್ ಪೀರಿಯಡ್’ನಲ್ಲಿ ನಟಿಸುವ ಅವಕಾಶ ತಂದಾಗ ಇದೊಂದು ತಾಯಿಯ ಕಥೆ. ಜೊತೆಗೆ, ಹೆಣ್ಣೊಬ್ಬಳು ತಾಯ್ತನದ ದಾರಿಯಲ್ಲಿ ಎದುರಿಸುವ ಹಲವು ಸಂಕಷ್ಟ, ಸುಖಗಳ ಕಥೆಯೂ ಹೌದು ಎನಿಸಿತು. ಇದು ಕಾಲೇಜು ಲವ್ ಸ್ಟೋರಿಯಲ್ಲ, ಬದಲಿಗೆ ತಾಯಿಯೊಬ್ಬಳ ಬದುಕಿನಲ್ಲಿ ನಡೆಯುವ ಪ್ರೇಮಕಥೆ. ನಾನೂ ಸಹ ಈ ರೀತಿಯದ್ದೇ ಭಿನ್ನಪಾತ್ರದ ನಿರೀಕ್ಷೆಯಲ್ಲಿದ್ದೆ ಅದೇ ಸಮಯಕ್ಕೆ ನನಗೆ ಅವಕಾಶ ಲಭಿಸಿದೆ. ಈಗ ‘ಟ್ರಯಲ್ ಪೀರಿಯಡ್’ ಸಿನಿಮಾ, ಬಹಳ ದೊಡ್ಡ ಸಂಖ್ಯೆಯಲ್ಲಿ ಮತ್ತು ಇಂಥ ಸಿನಿಮಾಗಳನ್ನು ಇಷ್ಟಪಡುವ ಬಹುದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಹೊಂದಿರುವ ‘ಜಿಯೊ ಸಿನಿಮಾ’ ದಲ್ಲಿ ಬಿಡುಗಡೆ ಆಗುತ್ತಿರುವುದು ಖುಷಿ ಎನಿಸಿದೆ. ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:25 pm, Fri, 7 July 23