ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ಧತೆ, ಕಾರ್ಯಕ್ರಮ ಪಟ್ಟಿ ಹೀಗಿದೆ
Shiva Rajkumar: ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಶಿವರಾಜ್ ಕುಮಾರ್ (Shiva Rajkumar) ಅವರ ಸಿನಿಮಾ ಒಂದು ಬಿಡುಗಡೆ ಆಗಿ ಆರು ತಿಂಗಳಾಗಿದೆ. ಈ ನಡುವೆ ಶಿವಣ್ಣನ ಹುಟ್ಟುಹಬ್ಬ (Birthday) ಬಂದಿರುವುದು ಅಭಿಮಾನಿಗಳಿಗೆ (Fan) ಸಂಭ್ರಮಾಚಾರಣೆ ಮಾಡಲು ಕಾರಣವೊಂದು ಸಿಕ್ಕಂತಾಗಿದೆ ಹಾಗಾಗಿ ತಮ್ಮ ಮೆಚ್ಚಿನ ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಜುಲೈ 12 ರಂದು ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ರಾಜ್ಯದಾದ್ಯಂತ ಶಿವಣ್ಣನ ಅಭಿಮಾನಿಗಳು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ರೆಡಿಯಾಗಿದ್ದಾರೆ. ಹುಟ್ಟುಹಬ್ಬಕ್ಕೆ ಇನ್ನೂ ಆರುದಿನಗಳಿರುವಂತೆಯೇ ಅಭಿಮಾನಿಗಳು ಕಾರ್ಯಕ್ರಮದ ಪಟ್ಟಿ ತಯಾರಿಸಿದ್ದು, ಹುಟ್ಟುಹಬ್ಬದ ಆಚರಣೆಯ ರೂಪುರೇಷೆ ನೀಡಿದ್ದಾರೆ.
ಜುಲೈ 11 ನೇ ತಾರೀಖು ಮಧ್ಯರಾತ್ರಿಯಂದು ಶಿವಣ್ಣನವರ ನಾಗವಾರದ ಸ್ವಗೃಹದ ಬಳಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಲಿರುವ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. ಈ ಸಂಭ್ರಮದಲ್ಲಿ ಶಿವಣ್ಣನೂ ಭಾಗಿಯಾಗಲಿದ್ದಾರೆ. ಅಲ್ಲಿಯೇ ಭರ್ಜರಿಯಾಗಿ ಪಟಾಕಿಗಳನ್ನೂ ಸಹ ಹೊಡೆಯಲಿದ್ದಾರೆ ಅಭಿಮಾನಿಗಳು.
ಅದಾದ ಬಳಿಕ ಮತ್ತೆ ಜುಲೈ 12 ರಂದು ಬೆಳಿಗ್ಗೆ 8ರಿಂದ 10 ಗಂಟೆ ವರೆಗೆ ಶಿವಣ್ಣನ ಮನೆಯ ಬಳಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಶಿವಣ್ಣನೊಡನೆ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎನ್ನಲಾಗುತ್ತಿದೆ. ಅದಾದ ಬಳಿಕ ಶಿವರಾಜ್ ಕುಮಾರ್ ಅವರು ಹಾಗೂ ಅಭಿಮಾನಿಗಳು ಡಾ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ತೆರಳಿ ದರ್ಶನ ಮಾಡಲಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ಸಿನಿಮಾಕ್ಕೆ ಬಾಲಿವುಡ್ನಿಂದ ಬಂದ ನಟ: ಯಾರು ಈ ರಾಹುಲ್ ಭೋಸ್?
ಅದರ ಬಳಿಕ ಅಭಿಮಾನಿಗಳು ಸಂತೋಷ್ ಚಿತ್ರಮಂದಿರಕ್ಕೆ ತೆರಳಿ ಶಿವಣ್ಣನ ಹೊಸ ಸಿನಿಮಾ ಘೋಸ್ಟ್ನ ಟೀಸರ್ನ ವಿಶೇಷ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ. ಘೋಸ್ಟ್ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಭಾಗಿವಹಿಸಲಿದೆ. ಮತ್ತೆ ಅಲ್ಲೊಮ್ಮೆ ಘೋಸ್ಟ್ ಚಿತ್ರತಂಡದ ಜೊತೆ ಶಿವರಾಜ್ ಕುಮಾರ್ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಶಿವರಾಜ್ ಕುಮಾರ್ ಅವರ ಸ್ವಗೃಹದ ಬಳಿ ಅಭಿಮಾನಿಗಳಿಗೆ ಬಿರಿಯಾನಿ ವಿತರಣೆ ಸಹ ಇರಲಿದೆ. ಇದೆಲ್ಲದರ ಜೊತೆಗೆ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಕೆಲವೆಡೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಮುಂಚೆ ರಾಜ್ಯದ ನಾನಾ ಕಡೆ ಶಿವಣ್ಣನ ಹುಟ್ಟುಹಬ್ಬಕ್ಕೆ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಂತೆಯೇ ಈ ಬಾರಿಯೂ ನಾಡಿನ ವಿವಿದೆಡೆ ರಕ್ತದಾನ ಶಿಬಿರಗಳು ನಡೆಯುವ ಸಾಧ್ಯತೆ ಇದೆ.
ಶಿವರಾಜ್ ಕುಮಾರ್ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ತಮಿಳು ಸಿನಿಮಾಗಳಾದ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ಎರಡೂ ಬಿಡುಗಡೆಗೆ ರೆಡಿಯಾಗಿವೆ. ಕನ್ನಡ ಸಿನಿಮಾಗಳಾದ ನೀ ಸಿಗೋವರೆಗೂ ಸಹ ಬಿಡುಗಡೆಗೆ ರೆಡಿಯಾಗಿದೆ ಇದರ ಜೊತೆಗೆ ಘೋಸ್ಟ್, 45, ಯೋಗರಾಜ್ ಭಟ್ಟರ ಕರಟಕ ಧಮನಕ, ಭೈರತಿ ರಣಗಲ್, ಸತ್ಯಮಂಗಲ, ಅಶ್ವತ್ಥಾಮ ಸಿನಿಮಾಗಳಲ್ಲಿಯೂ ಶಿವಣ್ಣ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ