Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್ ಕುಮಾರ್​ ಸಿನಿಮಾಕ್ಕೆ ಬಾಲಿವುಡ್​ನಿಂದ ಬಂದ ನಟ: ಯಾರು ಈ ರಾಹುಲ್ ಭೋಸ್?

Rahul Bose: ಶಿವರಾಜ್ ಕುಮಾರ್ ನಟಿಸಲಿರುವ ಭೈರತಿ ರಣಗಲ್ ಸಿನಿಮಾಕ್ಕೆ ಬಾಲಿವುಡ್​ನ ಪ್ರತಿಭಾವಂತ ನಟ ರಾಹುಲ್ ಭೋಸ್​ರನ್ನು ಕರೆತರಲಾಗಿದೆ. ಯಾರು ಈ ರಾಹುಲ್ ಭೋಸ್?

ಶಿವರಾಜ್ ಕುಮಾರ್​ ಸಿನಿಮಾಕ್ಕೆ ಬಾಲಿವುಡ್​ನಿಂದ ಬಂದ ನಟ: ಯಾರು ಈ ರಾಹುಲ್ ಭೋಸ್?
ರಾಹುಲ್ ಭೋಸ್
Follow us
ಮಂಜುನಾಥ ಸಿ.
|

Updated on: Jun 24, 2023 | 6:48 PM

ದಕ್ಷಿಣ ಭಾರತದ (South India) ಸಿನಿಮಾಗಳಲ್ಲಿ ಬಾಲಿವುಡ್ (Bollywood) ನಟರನ್ನು ಹಾಕಿಕೊಳ್ಳುವುದು ಇತ್ತೀಚೆಗೆ ತೀರ ಸಾಮಾನ್ಯ ಎನಿಸಿದೆ. ಅದರಲ್ಲಿಯೂ ಸೈಫ್ ಅಲಿ ಖಾನ್ (Saif Ali Khan), ಸಂಜಯ್ ದತ್ (Sanjay Dutt) ಅಂಥಹಾ ಸ್ಟಾರ್ ನಟರಿಗೆ ದಕ್ಷಿಣದ ಸಿನಿಮಾಗಳಲ್ಲಿ ವಿಲನ್ ಪಾತ್ರಗಳನ್ನು ನೀಡಲಾಗುತ್ತಿದೆ. ಈಗಾಗಲೇ ಹಲವು ಬಾಲಿವುಡ್ ಸ್ಟಾರ್ ನಟರು ದಕ್ಷಿಣದ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕನ್ನಡಕ್ಕೆ ಮತ್ತೊಬ್ಬ ಬಾಲಿವುಡ್ ನಟ ಕಾಲಿಟ್ಟಿದ್ದು, ಶಿವರಾಜ್ ಕುಮಾರ್ (Shiva Rajkumar) ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಶಿವರಾಜ್ ಕುಮಾರ್ ನಟಿಸಲಿರುವ ಭೈರತಿ ರಣಗಲ್ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿತ್ತು. ಶಿವರಾಜ್ ಕುಮಾರ್ ಸಖತ್ ಮಾಸ್ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾಕ್ಕಾಗಿ ಈಗ ಬಾಲಿವುಡ್​ನಿಂದ ಪ್ರತಿಭಾವಂತ ನಟ ರಾಹುಲ್ ಭೋಸ್ ಅವರನ್ನು ಕರೆತರಲಾಗಿದೆ. ರಾಹುಲ್ ಭೋಸ್, ಭೈರತಿ ರಣಗಲ್​ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ರಾಹುಲ್ ಭೋಸ್ ಅವರನ್ನು ನಟ ಶಿವರಾಜ್ ಕುಮಾರ್ ಸೇರಿದಂತೆ ಚಿತ್ರತಂಡದ ಇತರರು ಕನ್ನಡ ಚಿತ್ರರಂಗಕ್ಕೆ ಸ್ವಾಗತಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಹುಲ್ ಭೋಸ್, ಬಾಲಿವುಡ್​ನ ಪ್ರತಿಭಾವಂತ ನಟರಲ್ಲಿ ಒಬ್ಬರು. ಗಂಭೀರ, ಹಾಸ್ಯ ಪ್ರಧಾನ, ಕಮರ್ಷಿಯಲ್ ಎಲ್ಲ ಮಾದರಿಯ ಸಿನಿಮಾಗಳಲ್ಲಿಯೂ ರಾಹುಲ್ ಭೋಸ್ ನಟಿಸಿದ್ದಾರೆ. 1988ರಲ್ಲಿಯೇ ಮನೊರಂಜನಾ ಲೋಕಕ್ಕೆ ಕಾಲಿಟ್ಟು ಆರಂಭದಲ್ಲಿ ಇಂಗ್ಲೀಷ್ ಕಿರುಚಿತ್ರ, ಧಾರಾವಾಹಿಗಳಲ್ಲಿ ನಟಿಸಿದ ರಾಹುಲ್ ಆ ನಂತರ ಬಾಲಿವುಡ್ ಕಮರ್ಷಿಯಲ್ ಸಿನಿಮಾಗಳೆಡೆಗೆ ಹೊರಳಿದರು. ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಮಿಸ್ಟರ್ ಆಂಡ್ ಮಿಸಸನ್ ಐಯ್ಯರ್, ಕರೀನಾ ಕಪೂರ್​ರ ಚಮೇಲಿ, ಸಲ್ಮಾನ್ ರಶ್ದಿ ಅವರ ಮಿಡ್​ನೈಟ್ ಚಿಲ್ಡ್ರನ್ಸ್ ಕತೆ ಆಧರಿತ ಅದೇ ಹೆಸರಿನ ಸಿನಿಮಾ, , ಝೋಯಾ ಅಖ್ತರ್ ನಿರ್ದೇಶನದ ದಿಲ್ ಧಡಕ್ನೆ ದೊ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಭೈರತಿ ರಣಗಲ್ ಕಪ್ಪು ಶರ್ಟ್ ಧರಿಸೋದರ ಸಂಕೇತ ಏನು? ಶಿವಣ್ಣ ಕೊಟ್ರು ಉತ್ತರ

ದಕ್ಷಿಣ ಭಾರತದ ಸಿನಿಮಾಗಳು ರಾಹುಲ್ ಭೋಸ್​ಗೆ ಹೊಸದೇನೂ ಅಲ್ಲ. ಈ ಹಿಂದೆ ಕಮಲ್ ಹಾಸನ್ ನಟನೆಯ ವಿಶ್ವರೂಪಂ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ರಾಹುಲ್ ನಟಿಸಿದ್ದಾರೆ. ವಿಶ್ವರೂಪಂ 2 ನಲ್ಲಿಯೂ ರಾಹುಲ್ ಕಾಣಿಸಿಕೊಂಡಿದ್ದಾರೆ. ಭೈರತಿ ರಣಗಲ್ ಸಹ ರಾಹುಲ್ ಭೋಸ್​ಗೆ ಮೊದಲ ಕನ್ನಡ ಸಿನಿಮಾ ಏನಲ್ಲ. ಈ ಹಿಂದೆ ಅಪೂರ್ವ ಕಾಸರವಳ್ಳಿ ನಿರ್ದೇಶಿಸಿ ಭಾವನಾ, ಐಂದ್ರಿತಾ ರೇ, ಕಿರಣ್ ಶ್ರೀನಿವಾಸ್ ನಟಿಸಿದ್ದ ನಿರುತ್ತರ ಸಿನಿಮಾದಲ್ಲಿ ರಾಹುಲ್ ನಟಿಸಿದ್ದರು. ಭೈರತಿ ರಣಗಲ್ ರಾಹುಲ್​ರ ಎರಡನೇ ಕನ್ನಡ ಸಿನಿಮಾ.

ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ಮಫ್ತಿಯ ಭೈರತಿ ರಣಗಲ್ ಪಾತ್ರವನ್ನು ಆಧರಿಸಿ ಅದೇ ಹೆಸರಿನ ಸಿನಿಮಾ ಮಾಡಲಾಗುತ್ತಿದೆ. ಮಫ್ತಿ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೀತಾ ಶಿವರಾಜ್ ಕುಮಾರ್. ಮಫ್ತಿ ಸಿನಿಮಾದಲ್ಲಿದ್ದ ಕೆಲವು ಪಾತ್ರಗಳು ಭೈರತಿ ರಣಗಲ್ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ