ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ತಯಾರಿ ಹೇಗಿದೆ? ಎಷ್ಟು ಜನರಿಗೆ ಅಡುಗೆ? ಮುಂದಾಳತ್ವ ಯಾರದ್ದು?
Rishab Shetty: ನಟ ರಿಷಬ್ ಶೆಟ್ಟಿ ನಾಳೆ (ಜುಲೈ 7) ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದು, ಇದಕ್ಕಾಗಿ ಬೆಂಗಳೂರಿನ ನಂದಿನಿ ಲಿಂಗ್ ಗಾರ್ಡನ್ನಲ್ಲಿ ಅದ್ಧೂರಿ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕಾಂತಾರ (Kantara) ಸಿನಿಮಾ ಮೂಲಕ ಒಮ್ಮೆಲೆ ಪ್ಯಾನ್ ಇಂಡಿಯಾ (Pan Inda) ಸ್ಟಾರ್ ಆದ ರಿಷಬ್ ಶೆಟ್ಟಿಗೆ (Rishab Shetty) ಈಗ ಅಭಿಮಾನಿಗಳ ಸಂಖ್ಯೆಯೂ ದೊಡ್ಡದಾಗಿದೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಪರ ರಾಜ್ಯಗಳಲ್ಲಿಯೂ ರಿಷಬ್ ಶೆಟ್ಟರಿಗೆ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ನಾಳೆ (ಜುಲೈ 7) ರಿಷಬ್ ಶೆಟ್ಟಿ ಹುಟ್ಟುಹಬ್ಬವಾಗಿದ್ದು ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ದೊಡ್ಡ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಇದಕ್ಕಾಗಿ ಭರ್ಜರಿ ತಯಾರಿಯನ್ನು ಸಹ ಆರಂಭಿಸಲಾಗಿದೆ.
ಬೆಂಗಳೂರಿನ ನಂದಿಲಿ ಲಿಂಕ್ ಮೈದಾನದಲ್ಲಿ ರಿಷಬ್ ಶೆಟ್ಟಿ ತಮ್ಮ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಕಲ ತಯಾರಿಗಳು ಕಳೆದೆರಡು ದಿನಗಳಿಂದ ನಡೆಯುತ್ತಿವೆ. ಕಾರ್ಯಕ್ರಮ ಆಯೋಜನೆಯ ಮುಂದಾಳತ್ವವವನ್ನು ರಿಷಬ್ ಶೆಟ್ಟಿಯ ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿ ವಹಿಸಿಕೊಂಡಿದ್ದು, ರಿಷಬ್ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಗಳ ಜೊತೆಗೆ ಬಂದವರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಿಸಲಾಗಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭರ್ಜರಿ ಪ್ಲ್ಯಾನ್: ಅಭಿಮಾನಿಗಳಿಗೆ ಕೊಟ್ಟಿದ್ದಾರೆ ಸಿಹಿ ಸುದ್ದಿ
ರಿಷಬ್ ಹುಟ್ಟುಹಬ್ಬ ಕಾರ್ಯಕ್ರಮದ ವ್ಯವಸ್ಥೆ ಕುರಿತಾಗಿ ಟಿವಿ9 ಜೊತೆ ಮಾತನಾಡಿರುವ ಪ್ರಮೋದ್ ಶೆಟ್ಟಿ, ”ರಿಷಬ್ ಶೆಟ್ಟಿಗೆ ಸರಳವಾಗಿರುವುದು ಇಷ್ಟ. ಕಳೆದ ಕೆಲವು ದಿನಗಳಲ್ಲಿ ಹಲವು ಬಾರಿ ಈ ಕುರಿತು ರಿಷಬ್ ನನ್ನೊಟ್ಟಿಗೆ ಮಾತನಾಡಿದ್ದಾರೆ. ಸರಳವಾಗಿ ಒಂದು ಸ್ಟೇಜ್ ಹಾಕಿ ಕೊಡಿ ಸಾಕು ನಾನು ಅಭಿಮಾನಿಗಳನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ. ಹಾಗೆಂದು ನಾವು ತೀರ ಸರಳವಾಗಿ ಅಲ್ಲದೆ ಹಾಗೆಂದು ದುಂದು ವೆಚ್ಚ ಮಾಡಿ ಅನವಶ್ಯಕ ಐಶಾರಾಮಿ ಮಾಡದೆ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇವೆ” ಎಂದಿದ್ದಾರೆ.
”ನಾವು ಯಾವುದೇ ಕೇಕ್ ವ್ಯವಸ್ಥೆ ಇನ್ನಿತರೆಗಳನ್ನು ಮಾಡಿಲ್ಲ ಆದರೆ ಅಭಿಮಾನಿಗಳು ತಂದ ಕೇಕ್ಗಳನ್ನು ರಿಷಬ್ ಕತ್ತರಿಸಿ ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಲಿದ್ದಾರೆ. ಇನ್ನು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಆಂಧ್ರ-ತಮಿಳುನಾಡುಗಳಿಂದಲೂ ಅಭಿಮಾನಿಗಳು ಬರಲಿದ್ದಾರೆ ಅವರಿಗೆಲ್ಲ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಹುಟ್ಟುಹಬ್ಬದ ಜೊತೆಗೆ ಕಾರ್ಯಕ್ರಮಗಳೂ ಸಹ ನಡೆಯಲಿವೆ. ಅವುಗಳ ಪಾಡಿಗೆ ಅವು ನಡೆಯಲಿವೆ, ಹುಟ್ಟುಹಬ್ಬದ ಪಾಡಿಗೆ ಹುಟ್ಟುಹಬ್ಬ ನಡೆಯಲಿದೆ” ಎಂದಿದ್ದಾರೆ.
”ಕೆಲವು ಅಭಿಮಾನಿಗಳು ನಮ್ಮನ್ನು ಸಂಪರ್ಕಿಸಿ ವಿಶೇಷ ಮನವಿಗಳನ್ನು ಮಾಡಿದ್ದಾರೆ ಅದಕ್ಕೂ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಸ್ವತಃ ರಿಷಬ್ ಶೆಟ್ಟಿಗೆ ಗೊತ್ತಾಗದಂತೆ ಕೆಲವು ಸರ್ಪ್ರೈಸ್ಗಳನ್ನು ಸಹ ಪ್ಲ್ಯಾನ್ ಮಾಡಿದ್ದೇವೆ ಅದೆಲ್ಲ ನಾಳೆಯೇ (ಜುಲೈ 7) ಗೊತ್ತಾಗಲಿದೆ. ರಿಷಬ್ ಶೆಟ್ಟಿ ಹೀಗೆಯೇ ನೂರಾರು ವರುಷ ಕನ್ನಡಿಗರು ಹೆಮ್ಮೆ ಪಡುವಂಥಹಾ ಸಾಧನೆಗಳನ್ನು ಮಾಡಬೇಕು ಎಂಬುದು ಗೆಳೆಯನಾಗಿ ನನ್ನ ಹಾರೈಕೆ” ಎಂದರು ಪ್ರಮೋದ್ ಶೆಟ್ಟಿ.
ಸಾವಿರಾರು ಮಂದಿ ರಿಷಬ್ ಶೆಟ್ಟಿ ಹುಟ್ಟುಹಬ್ಬದಲ್ಲಿ ಭಾಗಿಯಾಗುವ ಸಾಧ್ಯತೆ ಇದ್ದು ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ನಂದಿನಿ ಲಿಂಕ್ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ