ಸಂಜಯ್ ಲೀಲಾ ಬನ್ಸಾಲಿ ಚಿತ್ರೀಕರಣ ವಿಧಾನದ ಬಗ್ಗೆ ನಟ ಟೀಕೆ

|

Updated on: May 24, 2024 | 5:42 PM

ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಸಂಜಯ್ ಲೀಲಾ ಬನ್ಸಾಲಿ ಅವರ ಕೆಲಸದ ವಿಧಾನವನ್ನು ನಟರೊಬ್ಬರು ಟೀಕಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಸಂಜಯ್ ಲೀಲಾ ಬನ್ಸಾಲಿಗೆ ಸ್ಪಷ್ಟತೆ ಇರುವುದಿಲ್ಲ ಎಂದು ಆ ನಟ ಹೇಳಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಚಿತ್ರೀಕರಣ ವಿಧಾನದ ಬಗ್ಗೆ ನಟ ಟೀಕೆ
Follow us on

ಭಾರತದ ಈಗಿನ ಅತ್ಯುತ್ತಮ ನಿರ್ದೇಶಕರಲ್ಲಿ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಹ ಒಬ್ಬರು. ‘ದೇವದಾಸ್’, ‘ಹಮ್ ದಿಲ್ ದೇಚುಕೆ ಸನಮ್’, ‘ಸಾವರಿಯಾ’, ‘ಪದ್ಮಾವತ್’, ‘ಬ್ಲ್ಯಾಕ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ಸಂಜಯ್ ಲೀಲಾ ಬನ್ಸಾಲಿ ನೀಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ತಮ್ಮ ಸಿನಿಮಾಗಳನ್ನು ಕರಕುಶಲಕರ್ಮಿಯ ರೀತಿ ಅವರು ಜಾಗರೂಕತೆಯಿಂದ ಕಟ್ಟುತ್ತಾರೆ. ಸಂಜಯ್​ರ ಪ್ರತಿಭೆಯನ್ನು ಪ್ರಶ್ನಿಸುವ ಪ್ರೇಕ್ಷಕರು ಬಹಳ ಕಡಿಮೆ. ಆದರೆ ಅವರೊಟ್ಟಿಗೆ ಕೆಲಸ ಮಾಡಿರುವ ವಿದೇಶಿ ನಟ ಒಬ್ಬರು, ಸಂಜಯ್ ಲೀಲಾ ಬನ್ಸಾಲಿಯ ವಿಧಾನಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಬನ್ಸಾಲಿಯವರ ಸೆಟ್​ನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆಗಳನ್ನು ತಾವು ಎದುರಿಸಿದ್ದಾಗಿಯೂ ಅವರು ಹೇಳಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಇತ್ತೀಚೆಗಷ್ಟೆ ‘ಹೀರಾಮಂಡಿ’ ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡಿದ್ದಾರೆ. ‘ಹೀರಾಮಂಡಿ’ ಗೆ ಭರಪೂರ ಪ್ರಶಂಸೆಗಳು ವ್ಯಕ್ತವಾಗಿವೆ. ‘ಹೀರಾಮಂಡಿ’ಯ ಕತೆ ಬ್ರಿಟೀಷರ ಕಾಲದಲ್ಲಿ ಲಾಹೋರ್​ನಲ್ಲಿ ನಡೆಯುವ ಕತೆಯಾಗಿದೆ. ವೆಬ್ ಸರಣಿಯಲ್ಲಿ ಹಲವು ಬ್ರಿಟೀಷ್ ಪಾತ್ರಗಳಿದ್ದು, ಆ ಪಾತ್ರಗಳಲ್ಲಿ ವಿದೇಶಿ ನಟರು ನಟಿಸಿದ್ದಾರೆ. ಅವರಲ್ಲಿ ಒಬ್ಬರಾದ ಜೇಸನ್ ಶಾ, ‘ಹೀರಾಮಂಡಿ’ಯಲ್ಲಿ ಅಲ್ಸ್ಟೈರ್ ಕಾರ್ಟ್​ವೈಟ್ ಹೆಸರಿನ ಬ್ರಿಟೀಷ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ತಾವು ವೆಬ್ ಸರಣಿಯಲ್ಲಿ ನಟಿಸುವಾಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾಗಿ ಕಾರ್ಟ್​ವೈಟ್ ಹೇಳಿದ್ದಾರೆ. ಅಲ್ಲದೆ, ಸೆಟ್​ನಲ್ಲಿ ಶಿಸ್ತು ಇರಲಿಲ್ಲ, ಸರಿಯಾದ ಯೋಜನೆ ಇರಲಿಲ್ಲ ಎಂದು ಸಹ ಹೇಳಿದ್ದಾರೆ.

‘ನನಗೆ ಮೂರು ದಿನ ಶೂಟಿಂಗ್ ಇದ್ದರೆ ಅದಾದ ಕೆಲವು ವಾರಗಳ ಕಾಲ ನನಗೆ ಶೂಟಿಂಗ್ ಇರುತ್ತಿರಲಿಲ್ಲ. ನಿರ್ದೇಶಕರ ದೃಷ್ಟಿಕೋನದಲ್ಲಿ ಸ್ಪಷ್ಟತೆ ಇರಲಿಲ್ಲ. ನನಗೆ ಸತತ ಚಿತ್ರೀಕರಣ ಇರಲಿಲ್ಲ, ಒಂದು ದಿನ ಶೂಟ್ ಮಾಡಿದ ಬಳಿಕ ವಾರಗಳಗಟ್ಟಲೆ ಶೂಟಿಂಗ್ ಇರುತ್ತಿರಲಿಲ್ಲ. ದೊಡ್ಡ ಬ್ರೇಕ್​ನ ಬಳಿಕ ಮತ್ತೆ ಸೆಟ್​ಗೆ ಬಂದು ನಟಿಸಬೇಕಿತ್ತು. ಇದರಿಂದ ನನಗೆ ನನ್ನ ಪಾತ್ರದ ಮೇಲಿನ ಹಿಡಿತ ತಪ್ಪಿತು, ನಾನು ಶೂಟಿಂಗ್​ಗೆ ಬಂದ ದಿನ ಮತ್ತೆ ಹೊಸದಾಗಿ ಪಾತ್ರವನ್ನು ಅಧ್ಯಯನ ಮಾಡಿ ನಟಿಸಬೇಕಾಗಿರುತ್ತಿತ್ತು. ಇದು ನನ್ನ ಪರ್ಫಾರ್ಮೆನ್ಸ್​ ಮೇಲೆ ಪರಿಣಾಮ ಬೀರಿತು’ ಎಂದಿದ್ದಾರೆ.

ಇದನ್ನೂ ಓದಿ:ಆಲಿಯಾ ಸಿನಿಮಾ ನಿರ್ದೇಶನ ಮಾಡಿದ್ದ ಸಂಜಯ್ ಲೀಲಾ ಬನ್ಸಾಲಿಗೆ ಓವರ್​ರೇಟೆಡ್ ಡೈರೆಕ್ಟರ್ ಎಂದಿದ್ದ ಮಹೇಶ್ ಭಟ್

‘ಅವರಿಗೆ ಯಾವ ಸೀನ್​ ಎಂಬುದು ಗೊತ್ತಿರುತ್ತಿತ್ತು, ಆದರೆ ನನಗೆ ಸೀನ್ ಬಿಟ್ಟರೆ ಯಾರೊಟ್ಟಿಗೆ ನಟಿಸಬೇಕು, ಎದುರಿಗೆ ಇರವ ಪಾತ್ರ ಯಾವುದು? ಏನೂ ಗೊತ್ತಿರುತ್ತಿರಲಿಲ್ಲ. ಒಂದು ದಿನವಂತೂ ಸೆಟ್​ನಲ್ಲಿ ಒಬ್ಬ ಯುವತಿ ಇದ್ದರು, ನಾನು ಆಕೆಯನ್ನು ಅಸಿಸ್ಟೆಂಟ್ ಡೈರೆಕ್ಟರ್ ಅಂದುಕೊಂಡಿದ್ದೆ. ಆದರೆ ಆ ಯುವತಿ ರೆಡಿಯಾಗಿ ಚಿತ್ರೀಕರಣಕ್ಕೆ ಬಂದರು. ನಾನು ಆಕೆಯ ಪರಿಚಯ ಸಹ ಇಲ್ಲದೆ ಆಕೆಯೊಂದಿಗೆ ನಟಿಸಿದೆ. ಯಾರೂ ಸಹ ನನಗೆ ನಟ-ನಟಿಯರೊಟ್ಟಿಗೆ ಪರಿಚಯ ಮಾಡಿಸಲಿಲ್ಲ. ಸೆಟ್​ನಲ್ಲಿ ಯಾರ್ಯಾರಿದ್ದಾರೆ ಎಂಬುದು ಸಹ ಗೊತ್ತಿರಲಿಲ್ಲ’ ಎಂದಿದ್ದಾರೆ ನಟ.

ಶೂಟಿಂಗ್ ಮುಗಿಯುವ ಸಮಯದಲ್ಲಿ ಎಲ್ಲ ನಟ-ನಟಿಯರ ಕ್ಲೋಸ್​ ಅಪ್ ಶಾಟ್​ಗಳನ್ನು ತೆಗೆದುಕೊಳ್ಳುತ್ತಿದ್ದರು. ಬೇರೆ ಎಲ್ಲ ನಟ-ನಟಿಯರ ಕ್ಲೋಸ್ ಅಪ್ ಮುಗಿಸಿದ ಬಳಿಕ ಕೊನೆಯದಾಗಿ ನನ್ನ ಕ್ಲೋಸ್ ಅಪ್ ತೆಗೆದುಕೊಳ್ಳಲಾಗುತ್ತಿತ್ತು. ಅದೂ ಸಹ ನನ್ನ ಕ್ಲೋಸ್ ಅಪ್ ತೆಗೆದುಕೊಳ್ಳುವ ಮುಂಚೆಯೇ ನನಗೆ ಸಮಯ ನಿಗದಿಪಡಿಸಲಾಗುತ್ತಿತ್ತು, ನಿನಗೆ 45 ನಿಮಿಷ ಇದೆ. ಅಷ್ಟರಲ್ಲೇ ಮುಗಿಸು ಎನ್ನುತ್ತಿದ್ದರು. ಹಾಗಾಗಿ ನಾನು ಒತ್ತಡದಲ್ಲಿಯೇ ನಟನೆ ಮಾಡಬೇಕಾಗಿ ಬರುತ್ತಿತ್ತು’ ಎಂದಿದ್ದಾರೆ ಜೇಸನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ