ಒಟಿಟಿಯಲ್ಲಿ ಹೆಚ್ಚಿದೆ ಅಶ್ಲೀಲತೆ, ಕ್ರೌರ್ಯ: ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಿಂದ ಶುರುವಾದ ವಿವಾದವು ಒಟಿಟಿ ಹಾಗೂ ಇತರೆ ಆನ್​ಲೈನ್​ ಕಂಟೆಂಟ್​ಗಳ ಕುರಿತಂತೆ ಹೊಸ ಚರ್ಚೆ ಹುಟ್ಟುಹಾಕಿದೆ. ಪ್ರೇಕ್ಷಕರ ವಯೋಮಿತಿಗೆ ಅನುಗುಣವಾಗಿ ಒಟಿಟಿ ಕಾರ್ಯಕ್ರಮಗಳ ವರ್ಗೀಕರಣವನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಒಟಿಟಿಯಲ್ಲಿ ಹೆಚ್ಚಿದೆ ಅಶ್ಲೀಲತೆ, ಕ್ರೌರ್ಯ: ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
India's Got Latent

Updated on: Feb 20, 2025 | 4:20 PM

ಕೆಲವೇ ದಿನಗಳ ಹಿಂದೆ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕಾರ್ಯಕ್ರಮ ಸಾಕಷ್ಟು ವಿವಾದಕ್ಕೆ ಕಾರಣ ಆಯಿತು. ಯೂಟ್ಯೂಬ್​ನಲ್ಲಿ ಪ್ರಸಾರ ಆಗುತ್ತಿದ್ದ ಈ ಕಾರ್ಯಕ್ರಮವನ್ನು ಸ್ಟ್ಯಾಂಡಪ್​ ಕಾಮಿಡಿಯನ್ ಸಮಯ್ ರೈನಾ ನಡೆಸಿಕೊಡುತ್ತಿದ್ದರು. ಶೋಗೆ ಅತಿಥಿಯಾಗಿ ಬಂದಿದ್ದ ರಣವೀರ್ ಅಲಹಾಬಾದಿಯಾ ಅವರು ಆಡಿದ ಅಸಭ್ಯ ಮಾತುಗಳಿಂದಾಗಿ ಈ ಶೋ ಕ್ಯಾನ್ಸಲ್ ಆಗುವಂತಾಯಿತು. ಅಲ್ಲದೇ ಇಂಥ ಕಾರ್ಯಕ್ರಮಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.

ಚಿತ್ರಮಂದಿರ ಮತ್ತು ಟಿವಿಯಲ್ಲಿ ಪ್ರಸಾರ ಆಗುವ ಸಿನಿಮಾ ಹಾಗೂ ಇತರೆ ಕಾರ್ಯಕ್ರಮಗಳಿಗೆ ಹೋಲಿಸಿದರೆ ಒಟಿಟಿಯಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಅಸಭ್ಯ ಭಾಷೆ, ಕ್ರೌರ್ಯ, ಅಶ್ಲೀಲ ದೃಶ್ಯಗಳು ಹೆಚ್ಚಾಗಿವೆ. ಈ ಬಗ್ಗೆ ಮೊದಲಿನಿಂದಲೂ ತಕರಾರು ವ್ಯಕ್ತವಾಗುತ್ತಲೇ ಇದೆ. ಯೂಟ್ಯೂಬ್​ನಲ್ಲಿ ವಿವಾದ ಎಬ್ಬಿಸಿದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಕೂಡ ಹೊಸ ಚರ್ಚೆ ಶುರುವಾಗಲು ಕಾರಣ ಆಗಿದೆ.

ಇದನ್ನೂ ಓದಿ: ಅಶ್ಲೀಲ ಹೇಳಿಕೆ, ಬಂಧನ ಭೀತಿಯಿಂದ ಬಚಾವಾದ ರಣ್ವೀರ್

ಒಟಿಟಿಯಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳನ್ನು ಪ್ರೇಕ್ಷಕರ ವಯೋಮಿತಿಗೆ ಅನುಗುಣವಾಗಿ ವರ್ಗೀಕರಣ ಮಾಡಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೀಡಲಾಗಿದೆ. ಮಕ್ಕಳು ನೋಡಲು ಯೋಗ್ಯವಲ್ಲದ ಕಾರ್ಯಕ್ರಮಗಳ ಬಗ್ಗೆ ಎಚ್ಚರಿಕೆ ಸಂದೇಶ ನೀಡಬೇಕು. ಅಂಥ ಕಾರ್ಯಕ್ರಮಗಳು ಮಕ್ಕಳಿಗೆ ಲಭ್ಯವಾಗದಂತೆ ಜಾಗ್ರತೆ ವಹಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಎಲ್ಲಾ ಎಪಿಸೋಡ್​ ಡಿಲೀಟ್; ಸಮಯ್ ರೈನಾ ದೊಡ್ಡ ನಿರ್ಧಾರ

ಈಗಾಗಲೇ ಜಾರಿಯಲ್ಲಿ ಇರುವ ನಿಯಮಗಳನ್ನು ಕೂಡ ಒಟಿಟಿ ಪ್ಲಾಟ್​ಫಾರ್ಮ್​ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಐಟಿ ಕಾಯ್ದೆ, ಭಾರತೀಯ ನ್ಯಾಯ ಸಂಹಿತೆ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳನ್ನು ಒಟಿಟಿ ಪ್ಲಾಟ್​ಫಾರ್ಮ್​ಗಳು ಪಾಲಿಸಬೇಕಿದೆ. ಒಟಿಟಿ ಕಾರ್ಯಕ್ರಮಗಳಿಗೆ ನೇರ ಸೆನ್ಸಾರ್​ಶಿಪ್ ಇಲ್ಲದ ಕಾರಣ ಕೆಲವರು ತುಂಬ ಅಸಭ್ಯ ಮತ್ತು ಅಶ್ಲೀಲವಾದ ಶೋಗಳನ್ನು ನಿರ್ಮಿಸಿದ್ದಾರೆ. ಅಂಥ ಕಂಟೆಂಟ್​ಗಳ ಬಗ್ಗೆ ಮೊದಲಿನಿಂದಲೂ ತಕರಾರು ವ್ಯಕ್ತವಾಗುತ್ತಲೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.