ಒಟಿಟಿ ಪ್ಲಾಟ್ಫಾರ್ಮ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುವಲ್ಲಿ ಅನೇಕ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಕನ್ನಡದ ಹಲವು ಸಿನಿಮಾಗಳು ಈಗ ಒಟಿಟಿಯಲ್ಲಿ ಲಭ್ಯವಾಗುತ್ತಿವೆ. ಅದರಲ್ಲೂ ‘ಜೀ5’ ಒಟಿಟಿ ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳ ಖರೀದಿಗೆ ಆಸಕ್ತಿ ತೋರಿಸುತ್ತಿದೆ. ಇತ್ತೀಚೆಗೆ ‘ಭಜರಂಗಿ 2’, ‘ಗರುಡ ಗಮನ ವೃಷಭ ವಾಹನ’ ಮುಂತಾದ ಸಿನಿಮಾಗಳನ್ನು ವೀಕ್ಷಕರಿಗೆ ನೀಡಿದ್ದ ಜೀ5 (ZEE5) ಈಗ ‘ಏಕ್ ಲವ್ ಯಾ’ ಸಿನಿಮಾದ ಪ್ರಸಾರಕ್ಕೆ ಸಜ್ಜಾಗಿದೆ. ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾದಲ್ಲಿ ಹೊಸ ಕಲಾವಿದರಾದ ರಾಣಾ ಮತ್ತು ರೀಷ್ಮಾ ನಾಣಯ್ಯ ಜೊತೆ ರಚಿತಾ ರಾಮ್ ಕೂಡ ನಟಿಸಿದ್ದಾರೆ. ಜೋಗಿ ಪ್ರೇಮ್ (Director Prem) ನಿರ್ದೇಶನದ ಈ ಸಿನಿಮಾವನ್ನು ಅವರ ಪತ್ನಿ ರಕ್ಷಿತಾ ಪ್ರೇಮ್ ನಿರ್ಮಿಸಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರಮಂದಿರದಲ್ಲಿ ‘ಏಕ್ ಲವ್ ಯಾ’ (Ek Love Ya) ಚಿತ್ರವನ್ನು ಮಿಸ್ ಮಾಡಿಕೊಂಡವರು ಜೀ5 ಮೂಲಕ ಈಗ ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದು.
ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ಏಕ್ ಲವ್ ಯಾ’ ಸಿನಿಮಾದಲ್ಲೂ ಈ ಮಾತು ನಿಜವಾಗಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿದ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿವೆ. ‘ಮೀಟ್ ಮಾಡನಾ ಇಲ್ಲ.. ಡೇಟ್ ಮಾಡನಾ..’, ‘ಯಾರೆ ಯಾರೆ..’, ‘ಹೇಳು ಯಾಕೆ..’ ಮುಂತಾದ ಹಾಡುಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿತು. ಚಿತ್ರಮಂದಿರಗಳಲ್ಲಿ ಫೆ.24ರಂದು ‘ಏಕ್ ಲವ್ ಯಾ’ ಸಿನಿಮಾ ತೆರೆಕಂಡಿತ್ತು. ಈಗ ಒಟಿಟಿಗೆ ಎಂಟ್ರಿ ನೀಡುತ್ತಿದೆ. ಏ.8ರಿಂದ ಜೀ5 ಮೂಲಕ ಪ್ರಸಾರ ಆಗಲಿದೆ.
ಇದು ನಟ ರಾಣಾ ಅವರಿಗೆ ಮೊದಲ ಸಿನಿಮಾ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡು ಬಂದರು. ಅದರ ಪ್ರತಿಫಲ ಅವರಿಗೆ ಸಿಕ್ಕಿದೆ. ಅನೇಕ ಚಿತ್ರಮಂದಿರಗಳಲ್ಲಿ ‘ಏಕ್ ಲವ್ ಯಾ’ ಸಿನಿಮಾ ಉತ್ತಮ ಪ್ರದರ್ಶನ ಕಂಡಿತು. ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮ್ಯೂಸಿಕಲ್ ಹಿಟ್ ಎನಿಸಿಕೊಂಡ ಈ ಸಿನಿಮಾವನ್ನು ಕಾರಣಾಂತರಗಳಿಂದ ಚಿತ್ರಮಂದಿರದಲ್ಲಿ ನೋಡಲು ಕೆಲವರಿಗೆ ಸಾಧ್ಯವಾಗಿಲ್ಲ. ಅಂಥವರೆಲ್ಲ ಈಗ ಜೀ5 ಮೂಲಕ ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
‘ಏಕ್ ಲವ್ ಯಾ’ ಸಿನಿಮಾದಲ್ಲಿ ರಾಣಾ, ರೀಷ್ಮಾ ನಾಣಯ್ಯ, ರಚಿತಾ ರಾಮ್ ಜೊತೆ ಚರಣ್ ರಾಜ್, ಶಶಿಕುಮಾರ್, ಸೂರಜ್, ‘ಶಿಷ್ಯ’ ದೀಪಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ರಕ್ಷಿತಾ ಪ್ರೇಮ್ ಅವರು ತಮ್ಮ ಹೋಮ್ ಬ್ಯಾನರ್ ‘ರಕ್ಷಿತಾ ಫಿಲ್ಮ್ ಫ್ಯಾಕ್ಟರಿ’ ಮೂಲಕ ಇದನ್ನು ನಿರ್ಮಾಣ ಮಾಡಿದ್ದಾರೆ. ತುಂಬ ಕಲರ್ಫುಲ್ ಆಗಿ ಈ ಸಿನಿಮಾ ಮೂಡಿಬಂದಿದೆ. ತಾಂತ್ರಿಕ ಬಳಗದಲ್ಲಿ ಪ್ರತಿಭಾವಂತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದರೆ, ಮಹೇನ್ ಸಿಂಹ ಅವರು ಛಾಯಾಗ್ರಹಣ ಮಾಡಿದ್ದಾರೆ.
ಬೇಸರದ ಸಂಗತಿ ಎಂದರೆ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ‘ಏಕ್ ಲವ್ ಯಾ’ ಸಿನಿಮಾಗೆ ಪೈರಸಿ ಕಾಟ ಎದುರಾಗಿತ್ತು. ಅದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಪ್ರೇಮ್ ಮತ್ತು ಅವರ ತಂಡದವರು ಮಾಹಿತಿ ಹಂಚಿಕೊಂಡಿದ್ದರು.
ಕೊರೊನಾ ಬಂದ ಬಳಿಕ ಜನರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವ ಟ್ರೆಂಡ್ ಹೆಚ್ಚಿದೆ. ಅದಕ್ಕೆ ತಕ್ಕಂತೆಯೇ ಅನೇಕ ಕನ್ನಡ ಸಿನಿಮಾಗಳು ಈಗ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಾಗುತ್ತಿವೆ. ಆ ಸಾಲಿಗೆ ‘ಏಕ್ ಲವ್ ಯಾ’ ಚಿತ್ರ ಕೂಡ ಸೇರ್ಪಡೆ ಆಗುತ್ತಿದೆ.
ಇದನ್ನೂ ಓದಿ:
ಒಂದು ಲಿಂಕ್ ತೆಗೆದರೆ, 10 ಲಿಂಕ್ ಅಪ್ಲೋಡ್ ಆಗ್ತಾ ಇತ್ತು; ಪೈರಸಿ ಬಗ್ಗೆ ‘ಏಕ್ ಲವ್ ಯಾ’ ಟೀಂ ಮಾತು
ರಿಲೀಸ್ಗೂ ಮುನ್ನವೇ ‘ಏಕ್ ಲವ್ ಯಾ’ ನೋಡಿದ ಸಿದ್ದರಾಮಯ್ಯ; ಹೇಗಿತ್ತು ಪ್ರತಿಕ್ರಿಯೆ?