‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ

Kamal Haasan Thug Life movie: ಕಮಲ್ ಹಾಸನ್ ನಟಿಸಿರುವ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಮುಂಚಿನಿಂದಲೂ ವಿವಾದದಲ್ಲೇ ಇದೆ. ಒಂದಲ್ಲ ಒಂದು ಸಂಕಷ್ಟಗಳನ್ನು ಸಿನಿಮಾ ಎದುರಿಸುತ್ತಲೇ ಇದೆ. ಬಾಕ್ಸ್ ಆಫೀಸ್​​ನಲ್ಲಿ ಧಾರುಣವಾಗಿ ಸೋತ ಬಳಿಕ ಬಿಡುಗಡೆ ಆದ ನಾಲ್ಕೇ ವಾರಕ್ಕೆ ಒಟಿಟಿಗೆ ಬರಲು ಸಜ್ಜಾಗಿದೆ. ಆದರೆ ಇದೀಗ ಸಿನಿಮಾಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, 25 ಲಕ್ಷ ರೂಪಾಯಿ ದಂಡ ಕಟ್ಟಬೇಕಾದ ಸ್ಥಿತಿ ಬಂದಿದೆ.

‘ಥಗ್ ಲೈಫ್’ ಸಿನಿಮಾಕ್ಕೆ ಮತ್ತೊಂದು ಬರೆ, ಕಟ್ಟಬೇಕು 25 ಲಕ್ಷ ದಂಡ
Kamal Haasan

Updated on: Jun 26, 2025 | 6:44 PM

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾಕ್ಕೆ ಬಿಡುಗಡೆ ಮುಂಚೆ ಪ್ರಾರಂಭವಾಗಿರುವ ಸಂಕಷ್ಟಗಳ ಸರಮಾಲೆ ಬಿಡುಗಡೆ ಆಗಿ ವಾರಗಳಾದರೂ ಮುಗಿಯುತ್ತಿಲ್ಲ. ಕಮಲ್ ಹಾಸನ್ ನೀಡಿದ ಹೇಳಿಕೆಯ ಕಾರಣಕ್ಕೆ ಕರ್ನಾಟಕದಲ್ಲಿ ಬಿಡುಗಡೆಯಿಂದ ವಂಚಿತಗೊಂಡು ಚಿತ್ರತಂಡದ ಲೆಕ್ಕದ ಪ್ರಕಾರ ಸುಮಾರು 30 ಕೋಟಿ ನಷ್ಟ ಅನುಭವಿಸಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿಯೂ ಸಹ ತೀರಾ ಧಾರುಣವಾಗಿ ಸೋಲು ಕಂಡಿದೆ. ಇದೀಗ ಸಿನಿಮಾದ ವಿರುದ್ಧ 25 ಲಕ್ಷ ರೂಪಾಯಿ ದಂಡ ಹೇರಲಾಗಿದೆ.

‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯ ಪ್ರದರ್ಶನ ಕಂಡಿದೆ. ಇದೇ ಕಾರಣಕ್ಕೆ ಒಟಿಟಿಗೆ ಬೇಗ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿದೆ. ಒಟಿಟಿ ಬಿಡುಗಡೆ ತಡವಾದರೆ ಅಲ್ಲಿಯೂ ಸಹ ಲಕ್ಷಾಂತರ ರೂಪಾಯಿ ಹಣ ನಷ್ಟವಾಗುವ ಭೀತಿ ಚಿತ್ರತಂಡಕ್ಕೆ ಎದುರಾಗಿತ್ತು. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಆದ ನಾಲ್ಕೇ ವಾರಕ್ಕೆ ಸಿನಿಮಾ ಅನ್ನು ಒಟಿಟಿಗೆ ಬಿಡುಗಡೆ ಮಾಡಲು ಚಿತ್ರತಂಡ ಒಪ್ಪಿತ್ತು. ಆದರೆ ಇದು ಮಲ್ಟಿಪ್ಲೆಕ್ಸ್​ಗಳನ್ನು ಕೆರಳಿಸಿದೆ.

ಮಲ್ಟಿಪ್ಲೆಕ್ಸ್​ಗಳ ಜೊತೆಗೆ ಮಾಡಿಕೊಂಡಿರುವ ಒಪ್ಪಂದದಂತೆ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾವನ್ನು ಬಿಡುಗಡೆ ಆದ ಎಂಟ ವಾರಕ್ಕೆ ಮುಂಚೆ ಒಟಿಟಿಯಲ್ಲಿ ಬಿಡುಗಡೆ ಮಾಡುವಂತಿರಲಿಲ್ಲ. ಆದರೆ ಈಗ ನಷ್ಟವನ್ನು ಕಡಿಮೆ ಮಾಡಿಕೊಳ್ಳುವ ಕಾರಣಕ್ಕೆ ಸಿನಿಮಾದ ನಿರ್ಮಾಪಕರಾಗಿರುವ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರುಗಳು ಕೇವಲ ನಾಲ್ಕೇ ವಾರಕ್ಕೆ ಸಿನಿಮಾ ಅನ್ನು ಒಟಿಟಿಗೆ ತರಲು ಮುಂದಾಗಿದ್ದಾರೆ. ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಥಗ್ ಲೈಫ್ ಚಿತ್ರ: ಕರ್ನಾಟಕದಿಂದ ಕಮಲ್ ಹಾಸನ್​​ಗೆ ಆದ ನಷ್ಟ ಇಷ್ಟೊಂದಾ?

ಒಟಿಟಿಯಲ್ಲಿ ಸಿನಿಮಾ ಅನ್ನು ಬೇಗನೆ ಬಿಡುಗಡೆ ಮಾಡಬೇಕಾದ ಕಾರಣಕ್ಕೆ ಮಲ್ಟಿಪ್ಲೆಕ್ಸ್​ ಚೈನ್​ಗಳ ಜೊತೆಗೆ ಮಾಡಿಕೊಂಡಿರುವ ಒಪ್ಪಂದವನ್ನು ಚಿತ್ರತಂಡ ಮುರಿಯುತ್ತಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​​ನವರು ‘ಥಗ್ ಲೈಫ್’ ಸಿನಿಮಾದ ಮೇಲೆ 25 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಒಪ್ಪಂದದಂತೆ ಎಂಟು ವಾರಗಳ ಬಳಿಕ ಒಟಿಟಿಗೆ ಬಿಡುಗಡೆ ಮಾಡಿ ಇಲ್ಲವಾದರೆ 25 ಲಕ್ಷ ರೂಪಾಯಿ ದಂಡ ಕಟ್ಟಿ ಎಂದು ಸಿನಿಮಾದ ನಿರ್ಮಾಪಕರುಗಳಿಗೆ ನೊಟೀಸ್ ನೀಡಲಾಗಿದೆ.

ಸಿನಿಮಾದ ಡಿಜಿಟಲ್​ ಹಕ್ಕುಗಳನ್ನು ಬರೋಬ್ಬರಿ 130 ಕೋಟಿ ರೂಪಾಯಿ ನೀಡಿ ನೆಟ್​ಫ್ಲಿಕ್ಸ್ ಖರೀದಿ ಮಾಡಿದೆ. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಕಾರಣ, ಸಿನಿಮಾವನ್ನು ತಡವಾಗಿ ಬಿಡುಗಡೆ ಮಾಡಿದರೆ ಮೊತ್ತದಲ್ಲಿ ಕಡಿತ ಮಾಡುವುದಾಗಿ ನೆಟ್​ಫ್ಲಿಕ್ಸ್ ಹೇಳಿತ್ತು. ಹಾಗಾಗಿ ಸಿನಿಮಾವನ್ನು ನಾಲ್ಕೇ ವಾರಕ್ಕೆ ಒಟಿಟಿಗೆ ತರಲು ಚಿತ್ರತಂಡ ಮುಂದಾಗಿದೆ. ಕಮಲ್ ಹಾಸನ್, ಸಿಂಭು, ತ್ರಿಷಾ , ಅಭಿರಾಮಿ ನಟಿಸಿದ್ದ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಧಾರುಣ ಸೋಲು ಕಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ