ಒಪ್ಪಂದ ಮುರಿದ ಕಮಲ್ ಹಾಸನ್, ಮುಂಚಿತವಾಗಿ ಒಟಿಟಿಗೆ ಬಂತು ‘ಥಗ್ ಲೈಫ್’

Thug Life movie on OTT: ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆಗ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಸೋಲನ್ನು ಸಿನಿಮಾ ಕಂಡಿತು. ಆ ಬಳಿಕ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಗೊಂದಲಗಳು ಉಂಟಾದವು. ಇದೀಗ ಒಪ್ಪಂದವನ್ನು ಮುರಿದು ನಿಗದಿತ ಅವಧಿಗೆ ಮುಂಚಿತವಾಗಿಯೇ ‘ಥಗ್ ಲೈಫ್’ ಸಿನಿಮಾ ಅನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.

ಒಪ್ಪಂದ ಮುರಿದ ಕಮಲ್ ಹಾಸನ್, ಮುಂಚಿತವಾಗಿ ಒಟಿಟಿಗೆ ಬಂತು ‘ಥಗ್ ಲೈಫ್’
Thug Life

Updated on: Jul 03, 2025 | 10:11 AM

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ (Thug Life) ಸಿನಿಮಾ ಜೂನ್ 5 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ವಿವಾದದಿಂದಲೇ ಹೆಚ್ಚು ಸುದ್ದಿಯಾಗಿತ್ತು. ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ವಿರೋಧ ವ್ಯಕ್ತಪಡಿಸಿ ಕರ್ನಾಟಕದಲ್ಲಿ ಸಿನಿಮಾ ಅನ್ನು ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯ ಸೋಲು ಕಂಡಿತು. ಈ ವರ್ಷದ ಈ ವರೆಗಿನ ಅತ್ಯಂತ ಹೀನಾಯವಾಗಿ ಸೋತ ಸ್ಟಾರ್ ಸಿನಿಮಾ ಎಂಬ ಕುಖ್ಯಾತಿಗೆ ‘ಥಗ್ ಲೈಫ್’ ಪಾತ್ರವಾಗಿದೆ. ಇದೀಗ ಈ ಸಿನಿಮಾ ತುಸುವೂ ಸದ್ದಿಲ್ಲದೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ.

‘ಥಗ್ ಲೈಫ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುನ್ನವೇ ಒಟಿಟಿಗೆ ಮಾರಾಟವಾಗಿತ್ತು. ನೆಟ್​ಫ್ಲಿಕ್ಸ್​, ಬರೋಬ್ಬರಿ 110 ಕೋಟಿ ರೂಪಾಯಿ ಹಣ ನೀಡಿ ‘ಥಗ್ ಲೈಫ್’ ಸಿನಿಮಾ ಖರೀದಿ ಮಾಡಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಧಾರುಣವಾಗಿ ಸೋತ ಕಾರಣ ನೆಟ್​ಫ್ಲಿಕ್ಸ್, ‘ಥಗ್ ಲೈಫ್’ ನಿರ್ಮಾಪಕರಾದ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರೊಟ್ಟಿಗೆ ಚರ್ಚೆಗೆ ಕೂತು, ಸಿನಿಮಾದ ಒಪ್ಪಂದದಲ್ಲಿ ಬದಲಾವಣೆಗೆ ಮುಂದಾಗಿತ್ತು.

ಮೂಲ ಒಪ್ಪಂದದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ಬಳಿಕವಷ್ಟೆ ಆ ಸಿನಿಮಾ ಒಟಿಟಿಗೆ ಬರಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಹೀನಾಯ ಸೋಲು ಕಂಡ ಕಾರಣ, ಸಿನಿಮಾವನ್ನು ಬೇಗನೆ ಒಟಿಟಿಗೆ ಬಿಡುಗಡೆ ಮಾಡಲು ನೆಟ್​ಫ್ಲಿಕ್ಸ್ ನಿರ್ಮಾಪಕರ ಮೇಲೆ ಒತ್ತಡ ಹೇರಿತು. ಇಲ್ಲವಾದರೆ ಒಪ್ಪಂದದಲ್ಲಿರುವಂತೆ 110 ಕೋಟಿ ಹಣದ ಬದಲಾಗಿ ಕಡಿಮೆ ಹಣ ನೀಡುವುದಾಗಿ ಹೇಳಿತ್ತು. ಇದೀಗ ಒಟಿಟಿಯ ಒತ್ತಡಕ್ಕೆ ಮಣಿದಿರುವ ‘ಥಗ್ ಲೈಫ್’ ನಿರ್ಮಾಪಕರು, ಎಂಟು ವಾರಕ್ಕೆ ಮುಂಚೆಯೇ ‘ಥಗ್ ಲೈಫ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದಾರೆ. ‘ಥಗ್ ಲೈಫ್’ ಸಿನಿಮಾವನ್ನು ಎಂಟು ವಾರಕ್ಕೆ ಮುಂಚಿತವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ, ನಷ್ಟ ತುಂಬಿಕೊಡಬೇಕು ಎಂದು ಮಲ್ಟಿಪ್ಲೆಕ್ಸ್​ಗಳು ನಿರ್ಮಾಪಕರಿಗೆ ನೊಟೀಸ್ ಕಳಿಸಿತ್ತು. ಆದರೆ ಅದನ್ನು ನಿರ್ಲಕ್ಷಿಸಿ ಇದೀಗ ಅವಧಿಗೆ ಮುಂಚಿತವಾಗಿ ಒಟಿಟಿಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಭಾಷೆ ವಿವಾದ: ನಟ ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ

‘ಥಗ್ ಲೈಫ್’ ಸಿನಿಮಾ ಇಂದಿನಿಂದ ಅಂದರೆ ಜುಲೈ 3 ರಿಂದ ನೆಟ್​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ನೆಟ್​ಫ್ಲಿಕ್ಸ್​​ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನೆಟ್​​ಫ್ಲಿಕ್ಸ್​​ನಲ್ಲಿ ನೋಡಬಹುದಾಗಿದೆ. ನೆಟ್​ಫ್ಲಿಕ್ಸ್​ ‘ಥಗ್ ಲೈಫ್’ ಒಟಿಟಿ ಬಿಡುಗಡೆಯನ್ನು ಯಾವುದೇ ಪ್ರಚಾರ ಇಲ್ಲದೆ ಬಹಳ ಸೈಲೆಂಟ್ ಆಗಿ ಮಾಡಿದೆ. ಕೇವಲ ಒಂದು ಟ್ವೀಟ್​ ಅನ್ನು ಅದೂ ನೆಟ್​ಫ್ಲಿಕ್ಸ್​ನ ದಕ್ಷಿಣ ಭಾರತದ ಖಾತೆಯಿಂದ ಮಾಡಿದೆ ಅಷ್ಟೆ. ದೊಡ್ಡ ನಟರ ಸಿನಿಮಾಗಳು ಒಟಿಟಿಗೆ ಬಿಡುಗಡೆ ಆಗುವಾದ ಅದಕ್ಕಾಗಿ ಪ್ರತ್ಯೇಕ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುವುದು ರೂಢಿ, ಆದರೆ ‘ಥಗ್ ಲೈಫ್’ ಸಿನಿಮಾಕ್ಕೆ ಅದ್ಯಾವುದೂ ಇಲ್ಲ.

‘ಥಗ್ ಲೈಫ್’ ಸಿನಿಮಾನಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ ಕೃಷ್ಣನ್, ಅಭಿರಾಮಿ, ಜೋಜು ಜಾರ್ಜ್, ನಾಸರ್, ಮಹೇಶ್ ಮಂಜ್ರೇಕರ್ ಇನ್ನೂ ಹಲವಾರು ಸ್ಟಾರ್ ನಟರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಭಾರತದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಮಣಿರತ್ನಂ, ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಇಷ್ಟೆಲ್ಲ ದೊಡ್ಡ ಹೆಸರುಗಳು ಒಟ್ಟಿಗೆ ಸೇರಿದ್ದರೂ ಸಹ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಧಾರುಣ ಸೋಲು ಕಂಡಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ