ಭಾಷೆ ವಿವಾದ: ನಟ ಕಮಲ್ ಹಾಸನ್ ವಿರುದ್ಧ ಕನಕಪುರ ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ
ಕನ್ನಡ ಭಾಷೆಯ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿ ಕಮಲ್ ಹಾಸನ್ ಸೃಷ್ಟಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಕಮಲ್ ವಿರುದ್ಧ ಕನಕಪುರದ 2ನೇ ಅಪರ ಸಿವಿಲ್, ಜೆಎಂಎಫ್ಸಿ ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ ಆಗಿದೆ.

ತಮಿಳಿನಿಂದಲೇ ಕನ್ನಡ (Kannada) ಹುಟ್ಟಿದ್ದು ಎಂದು ಹೇಳಿಕೆ ನೀಡುವ ಮೂಲಕ ಕಮಲ್ ಹಾಸನ್ (Kamal Haasan) ಅವರು ಕೆಲವು ದಿನಗಳ ಹಿಂದೆ ವಿವಾದ ಮಾಡಿಕೊಂಡರು. ಅದರಿಂದಾಗಿ ಅವರ ‘ಥಗ್ ಲೈಫ್’ ಸಿನಿಮಾಗೆ ತೊಂದರೆ ಆಯಿತು. ಇಷ್ಟೆಲ್ಲ ಆದರೂ ಕೂಡ ಕಮಲ್ ಹಾಸನ್ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿಲ್ಲ. ಕನ್ನಡಪರ ಹೋರಾಟಗಾರರು ಒತ್ತಡ ಹಾಕಿದರೂ ಕೂಡ ಕಮಲ್ ಹಾಸನ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿಲ್ಲ. ಕನ್ನಡ ಭಾಷೆ ಬಗ್ಗೆ ಅವರು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಕಮಲ್ ಹಾಸನ್ ವಿರುದ್ಧ ಕನಕಪುರದ 2ನೇ ಅಪರ ಸಿವಿಲ್, JMFC ಕೋರ್ಟ್‌ಗೆ ಪಿಸಿಆರ್ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರದ ನಾಗರ್ಜುನ ಎಂಬುವರಿಂದ ಪಿಸಿಆರ್ ಸಲ್ಲಿಕೆ ಮಾಡಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 223ರಡಿ ಪಿಸಿಆರ್ ಸಲ್ಲಿಕೆ ಮಾಡಿದ್ದಾರೆ.
‘ನಟ ಕಮಲ್ ಹಾಸನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ರಾಮನಗರ ಎಸ್‌ಪಿಗೆ ನಿರ್ದೇಶನ ನೀಡಬೇಕು. ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳದ ಕನಕಪುರ ಗ್ರಾಮಾಂತರ ಠಾಣಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆರೋಪಿಗೆ ಸಮನ್ಸ್ ಕಳುಹಿಸಿ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಜುಲೈ 5ಕ್ಕೆ ಕನಕಪುರದ JMFC ನ್ಯಾಯಾಲಯ ಮುಂದೂಡಿದೆ. ಭಾಷೆಗಳ ವಿಚಾರದಲ್ಲಿ ಹೇಳಿಕೆಗಳನ್ನು ನೀಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಆದರೆ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾದ ವಿಚಾರದಲ್ಲಿ ಕೊಂಚ ಎಡವಿದರು. ಕನ್ನಡದ ಬಗ್ಗೆ ಅವರು ನೀಡಿದ ಹೇಳಿಕೆಯಿಂದ ಇಷ್ಟೆಲ್ಲ ವಿವಾದ ಆಯಿತು.
ಇದನ್ನೂ ಓದಿ: ಸಿನಿಮಾ ಸೋಲು, ವಿವಾದದ ನಡುವೆಯೂ ಕಮಲ್ ಹಾಸನ್ಗೆ ಸಿಕ್ತು ಆಸ್ಕರ್ ಗೌರವ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಥಗ್ ಲೈಫ್’ ಸಿನಿಮಾ ಸಿದ್ಧವಾಗಿತ್ತು. ತಮಿಳು, ತೆಲುಗು, ಕನ್ನಡ ಸೇರಿ ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ತೆರೆಕಾಣಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದರಿಂದ ಚಿತ್ರದ ಬಿಡುಗಡೆಗೆ ಅಡ್ಡಿ ಆಯಿತು. ಇದರಿಂದಾಗಿ, ನಿರ್ಮಾಪಕರೂ ಆಗಿರುವ ಕಮಲ್ ಹಾಸನ್ ಅವರಿಗೆ ಬಹುಕೋಟಿ ರೂಪಾಯಿ ನಷ್ಟ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:09 pm, Mon, 30 June 25







