
ಯಶ್ (Yash) ನಟನೆಯ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿರುವುದಲ್ಲದೇ 50 ದಿನಗಳನ್ನು ಪೂರೈಸಿದೆ. ಜನರು ಈಗಲೂ ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಹೀಗಾಗಿಯೇ 390 ಚಿತ್ರಮಂದಿರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಬೇರೆ ದೇಶಗಳ ಸುಮಾರು 10ಕ್ಕೂ ಚಿತ್ರಮಂದಿರಗಳಲ್ಲಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರ ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದಿನಿಂದ ಅಂದರೆ ಜೂನ್ 3ರಿಂದ ಅಮೆಜಾನ್ ಪ್ರೈಮ್ (Amazon Prime) ಸದಸ್ಯರು ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ವೀಕ್ಷಿಸಬಹುದಾಗಿದೆ. ಈ ಹಿಂದೆ ರೆಂಟ್ ಮಾದರಿಯಲ್ಲಿ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿತ್ತು. ಚಿತ್ರ ವೀಕ್ಷಿಸಲು ಪ್ರೈಮ್ ಸದಸ್ಯರಾಗಿದ್ದರೂ ಕೂಡ ಹೆಚ್ಚುವರಿ ಹಣ ನೀಡಬೇಕಾಗಿತ್ತು. ಆದರೆ ಈಗ ಎಲ್ಲಾ ಪ್ರೈಮ್ ಸದಸ್ಯರು ತಾವು ಆಯ್ಕೆ ಮಾಡಿದ 5 ಭಾಷೆಗಳಲ್ಲಿ ಕೆಜಿಎಫ್ 2 ವೀಕ್ಷಿಸಬಹುದಾಗಿದೆ.
ಚಿತ್ರದ ಸಣ್ಣ ಟೀಸರ್ ಒಂದನ್ನು ಹಂಚಿಕೊಂಡಿರುವ ಅಮೆಜಾನ್ ಪ್ರೈಮ್, ಚಿತ್ರದ ಓಟಿಟಿ ಬಿಡುಗಡೆಯನ್ನು ಘೋಷಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಪ್ರೈಮ್ನಲ್ಲಿ ಪ್ರಸಾರವಾಗುತ್ತಿದೆ. ಮಧ್ಯರಾತ್ರಿ 12 ಗಂಟೆಯಿಂದ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.
ಅಮೆಜಾನ್ ಪ್ರೈಮ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:
‘ಕೆಜಿಎಫ್ ಚಾಪ್ಟರ್ 2’ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಬಾಕ್ಸಾಫೀಸ್ನಲ್ಲಿ ಹೊಸ ಮೈಲಿಗಲ್ಲಿನ ಸನಿಹವಿದೆ. ಪ್ರಸ್ತುತ ವಿಶ್ವಾದ್ಯಂತ ಬಾಕ್ಸಾಫೀಸ್ನಲ್ಲಿ ಸುಮಾರು 1240.9 ಕೋಟಿ ರೂ ಗಳಿಸಿರುವ ಚಿತ್ರವು 1,250 ಕೋಟಿ ರೂ ಮೈಲಿಗಲ್ಲಿಗೆ ಸಮೀಪದಲ್ಲಿದೆ. ಈ ವಾರಾಂತ್ಯದಲ್ಲಿ ಚಿತ್ರ ಎಷ್ಟು ಗಳಿಸಲಿದೆ ಎಂದು ಕಾದು ನೋಡಬೇಕಿದೆ. ‘ಕೆಜಿಎಫ್ 2’ ಹಿಂದಿ ಅವತರಣಿಕೆ ದಾಖಲೆ ಬರೆದಿದ್ದು, 430 ಕೋಟಿ ರೂಗೂ ಅಧಿಕ ಹಣವನ್ನು ಬಾಚಿಕೊಂಡಿದೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:27 am, Fri, 3 June 22