
ನಟ ಮನೋಜ್ ಬಾಜ್ಪಾಯಿ (Manoj Bajpayee) ಅವರು ತಮ್ಮದೇ ಆದಂತಹ ಅಭಿಮಾನಿ ಬಳಗ ಹೊಂದಿದ್ದಾರೆ. ಸಿನಿಮಾ ಮತ್ತು ಒಟಿಟಿ ಕ್ಷೇತ್ರದಲ್ಲಿ ಅವರು ಛಾಪು ಮೂಡಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ಮತ್ತು ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್ನಿಂದ ಅವರಿಗೆ ಸಿಕ್ಕ ಜನಪ್ರಿಯತೆ ಅಪಾರ. ಈಗ ಅವರ ಹೊಸ ಸಿನಿಮಾ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ (Sirf Ek Bandaa Kaafi Hai) ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ. ಜೀ5 ಮೂಲಕ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ಮೇ 23ರಂದು ಸ್ಟ್ರೀಮಿಂಗ್ ಆರಂಭಿಸಿದ ಈ ಚಿತ್ರಕ್ಕೆ ಎಲ್ಲರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ದಾಖಲೆ ಪ್ರಮಾಣದಲ್ಲಿ ವೀಕ್ಷಣೆ ಕಾಣುತ್ತಿದೆ. ಈ ಬಗ್ಗೆ ಸ್ವತಃ ಮನೋಜ್ ಬಾಜ್ಪಾಯಿ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. 200 ಮಿಲಿಯನ್ ನಿಮಿಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಾಣುವ ಮೂಲಕ ಈ ಸಿನಿಮಾ ದಾಖಲೆ ಬರೆದಿದೆ. ಇದು ಮನೋಜ್ ಬಾಜ್ಪಾಯಿ ಅವರಿಗೆ ಖುಷಿ ನೀಡಿದೆ. ಈ ಸಿನಿಮಾದಲ್ಲಿ ಅವರು ಲಾಯರ್ ಪಾತ್ರ ಮಾಡಿದ್ದಾರೆ. ಕೋರ್ಟ್ ರೂಮ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದಿರುವ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರವು ಈಗ ಜೀ5ನ (Zee5) ಟ್ರೆಂಡಿಂಗ್ನಲ್ಲಿದೆ.
ಅಪೂರ್ವ್ ಸಿಂಗ್ ಕಾರ್ಕಿ ಅವರು ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿನೋದ್ ಭಾನುಶಾಲಿ ಅವರು ನಿರ್ಮಾಣ ಮಾಡಿದ್ದಾರೆ. ಅಂದ್ರಿಜಾ, ಸೂರ್ಯ ಮೋಹನ್, ನಿಖಿಲ್ ಪಾಂಡೆ, ಜೈಹಿಂದ್ ಕುಮಾರ್, ದುರ್ಗಾ ಶರ್ಮಾ ಮುಂತಾದವರು ಕೂಡ ಮನೋಜ್ ಬಾಜ್ಪಾಯಿ ಜೊತೆ ನಟಿಸಿದ್ದಾರೆ. ದೇವ ಮಾನವ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ಕಿರುಕುಳ ಆಗುತ್ತದೆ. ಆಕೆಗೆ ನ್ಯಾಯ ಕೊಡಿಸಲು ಹೋರಾಡುವ ವಕೀಲನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ಬಾಜ್ಪಾಯಿ ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಒಟಿಟಿಯಲ್ಲಿ ಮನೋಜ್ ಬಾಜ್ಪಾಯಿ ಅವರ ಹವಾ ಜೋರಿದೆ. ವೆಬ್ ಸಿರೀಸ್ಗಳಲ್ಲಿ ಅವರು ಜನಮನ ಗೆದ್ದಿದ್ದಾರೆ. ಈಗ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರದ ಮೂಲಕ ತಾವು ಒಟಿಟಿಯಲ್ಲಿ ಕಿಂಗ್ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಎಲ್ಲರ ಪರಿಶ್ರಮದಿಂದಾಗಿ ಈ ಗೆಲುವು ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. ಇದು ಒಟಿಟಿ ಜಮಾನಾ. ಪ್ರತಿ ದಿನ ಹೊಸ ಹೊಸ ಕಾಂಟೆಂಟ್ ಬಿಡುಗಡೆ ಆಗುತ್ತಲೇ ಇರುತ್ತವೆ. ಅವುಗಳ ಮಧ್ಯೆ ಜನರ ಮನಸ್ಸು ಗೆಲ್ಲುವಂತಹ ಸಿನಿಮಾ ಅಥವಾ ವೆಬ್ ಸಿರೀಸ್ ಬಂದರೆ ಉತ್ತಮವಾದ ಬಾಯಿ ಮಾತಿನ ಪ್ರಚಾರ ಸಿಗುತ್ತದೆ. ಮನೋಜ್ ಬಾಜ್ಪಾಯಿ ಅವರ ಅಭಿಮಾನಿಗಳ ವಲಯದಲ್ಲಿ ‘ಸಿರ್ಫ್ ಏಕ್ ಬಂದಾ ಕಾಫಿ ಹೈ’ ಚಿತ್ರದ ಬಗ್ಗೆಯೇ ಟಾಕ್ ಸೃಷ್ಟಿಯಾಗಿದೆ.
ಇದನ್ನೂ ಓದಿ: ‘ಸಾವಿರ ಕೋಟಿ ಕಲೆಕ್ಷನ್ ಬಗ್ಗೆ ಎಲ್ರೂ ಮಾತಾಡ್ತಾರೆ, ಆದ್ರೆ ಮುಖ್ಯ ವಿಚಾರ ಚರ್ಚೆ ಆಗ್ತಿಲ್ಲ’: ಮನೋಜ್ ಬಾಜ್ಪಾಯಿ
ಬಣ್ಣದ ಲೋಕದಲ್ಲಿ ಮನೋಜ್ ಬಾಜ್ಪಾಯಿ ಅವರಿಗೆ ಸಾಕಷ್ಟು ವರ್ಷಗಳ ಅನುಭವ ಇದೆ. 1994ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಬ್ಯಾಂಡಿಟ್ ಕ್ವೀನ್’, ‘ಸತ್ಯ’, ‘ಪ್ರೇಮ ಕಥಾ’, ‘ದಿಲ್ ಪೇ ಮತ್ ಲೇ ಯಾರ್’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಿರ್ಮಾಪಕನಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಸದ್ಯ ಅವರ ಕೈಯಲ್ಲಿ ಸಾಕಷ್ಟು ಆಫರ್ಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.