‘ಸಾವಿರ ಕೋಟಿ ಕಲೆಕ್ಷನ್ ಬಗ್ಗೆ ಎಲ್ರೂ ಮಾತಾಡ್ತಾರೆ, ಆದ್ರೆ ಮುಖ್ಯ ವಿಚಾರ ಚರ್ಚೆ ಆಗ್ತಿಲ್ಲ’: ಮನೋಜ್ ಬಾಜ್ಪಾಯಿ
Manoj Bajpayee: ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಕುರಿತಾಗಿ ನಡೆಯುತ್ತಿರುವ ಅತಿಯಾದ ಚರ್ಚೆ ಬಗ್ಗೆ ಮನೋಜ್ ಬಾಜ್ಪಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ವಿವರ ಇಲ್ಲಿದೆ..
ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ನಲ್ಲಿ ಯಾವ ರೀತಿ ಮೋಡಿ ಮಾಡುತ್ತಿವೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR) ಸಿನಿಮಾ ಹಿಂದಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತು. ಬಳಿಕ ತೆರೆಕಂಡ ‘ಕೆಜಿಎಫ್: ಚಾಪ್ಟರ್ 2’ (KGF 2) ಚಿತ್ರ ಕೂಡ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಈ ಬಿಗ್ ಸಕ್ಸಸ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ವಿಶ್ವಾದ್ಯಂತ ಈ ಎರಡೂ ಸಿನಿಮಾಗಳ ಕಲೆಕ್ಷನ್ 1000 ಕೋಟಿ ರೂಪಾಯಿ ಮೀರಿದೆ. ಹಾಗಾಗಿ ಎಲ್ಲ ಕಡೆಗಳಲ್ಲೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಚರ್ಚೆ ಆಗುತ್ತಿದೆ. ಈ ಬಗ್ಗೆ ಬಾಲಿವುಡ್ನ ಖ್ಯಾತ ನಟ ಮನೋಜ್ ಬಾಜ್ಪಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೇವಲ 1000 ಕೋಟಿ ರೂಪಾಯಿ ಕಲೆಕ್ಷನ್ ಬಗ್ಗೆ ಮಾತನಾಡುತ್ತಿರುವುದರಿಂದ ನಿಜವಾಗಿ ಚರ್ಚೆ ಆಗಬೇಕಾದ ವಿಚಾರ ಕಡೆಗಣಿಸಲ್ಪಟ್ಟಿದೆ ಎಂಬುದು ಮನೋಜ್ ಬಾಜ್ಪಾಯಿ (Manoj Bajpayee) ಅವರ ಅಭಿಪ್ರಾಯ. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಕೊಂಡಿರುವ ಅವರ ಈ ಮಾತುಗಳು ಸಿನಿಪ್ರಿಯರ ಗಮನ ಸೆಳೆಯುತ್ತಿವೆ.
ಸಿನಿಮಾ ಮತ್ತು ವೆಬ್ ಸಿರೀಸ್ಗಳಲ್ಲಿ ಮನೋಜ್ ಬಾಜ್ಪಾಯಿ ಬ್ಯುಸಿ ಆಗಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಮೂಲಕ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡರು. ‘ದಿ ಫ್ಯಾಮಿಲಿ ಮ್ಯಾನ್ 2’ ಕೂಡ ಸೂಪರ್ ಹಿಟ್ ಆಯಿತು. ಈಗ ‘ಕೆಜಿಎಫ್: ಚಾಪ್ಟರ್ 2’ ಹಾಗೂ ‘ಆರ್ಆರ್ಆರ್’ ಸಿನಿಮಾಗಳ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಕುರಿತಾಗಿ ನಡೆಯುತ್ತಿರುವ ಅತಿಯಾದ ಚರ್ಚೆ ಬಗ್ಗೆ ಮನೋಜ್ ಬಾಜ್ಪಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಸಿನಿಮಾ ಹೇಗಿದೆ ಎಂಬ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕಲಾವಿದರ ನಟನೆ ಹೇಗಿದೆ? ಇನ್ನುಳಿದ ವಿಭಾಗಗಳ ಕೊಡುಗೆ ಏನು? ಇದರ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. 1000 ಕೋಟಿ, 300 ಕೋಟಿ, 400 ಕೋಟಿ ರೂಪಾಯಿ ಬಗ್ಗೆ ಮಾತನಾಡುವುದರಲ್ಲೇ ನಾವು ಸಿಕ್ಕಿಕೊಂಡಿದ್ದೇವೆ. ಈ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸದ್ಯಕ್ಕಂತೂ ಮುಗಿಯುತ್ತದೆ ಅಂತ ನನಗೆ ಎನಿಸುತ್ತಿಲ್ಲ’ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಮನೋಜ್ ಬಾಜ್ಪಾಯಿ ಅವರು ದಕ್ಷಿಣ ಭಾರತದ ಚಿತ್ರರಂಗ ಹಾಗೂ ಬಾಲಿವುಡ್ ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದರು. ‘ದಕ್ಷಿಣ ಭಾರತದ ಸಿನಿಮಾಗಳು ಯಾವ ಮಟ್ಟಕ್ಕೆ ಬ್ಲಾಕ್ ಬಸ್ಟರ್ ಆಗುತ್ತಿವೆ ಎಂದರೆ ನನ್ನ ವಿಷಯ ಬಿಡಿ, ಬಾಲಿವುಡ್ನ ಪ್ರಮುಖ ಫಿಲ್ಮ್ ಮೇಕರ್ಗಳಿಗೆ ಭಯ ಹುಟ್ಟಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ. ದಕ್ಷಿಣ ಭಾರತದವರು ತುಂಬ ಪ್ಯಾಷನೇಟ್ ಆಗಿ ಸಿನಿಮಾ ಮಾಡುತ್ತಾರೆ. ಯಾವುದರಲ್ಲೂ ರಾಜಿ ಆಗಲ್ಲ. ತಾವು ಜಗತ್ತಿನ ದಿ ಬೆಸ್ಟ್ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ ಎಂಬ ಭಾವನೆಯಲ್ಲೇ ಅವರು ಶೂಟಿಂಗ್ ಮಾಡುತ್ತಾರೆ. ತುಂಬ ಆಲೋಚನೆ ಮಾಡುತ್ತಾರೆ. ಪ್ರೇಕ್ಷಕರ ಬಗ್ಗೆ ಹಗುರವಾಗಿ ಒಮ್ಮೆ ಕೂಡ ಮಾತನಾಡುವುದಿಲ್ಲ’ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದರು.
‘ಇದು ಮಾಸ್ ಆಗಿದೆ, ಹಾಗಾಗಿ ನಡೆದು ಬಿಡುತ್ತೆ ಅಂತ ದಕ್ಷಿಣ ಭಾರತದವರು ಹೇಳಲ್ಲ. ಕೆಜಿಎಫ್ 2, ಪುಷ್ಪ, ಆರ್ಆರ್ಆರ್ ಸಿನಿಮಾಗಳ ಮೇಕಿಂಗ್ ಗಮನಿಸಿ. ಅವು ತುಂಬ ನೀಟ್ ಆಗಿವೆ. ಇದು ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ ಎಂಬ ರೀತಿಯಲ್ಲೇ ಅವರು ಪ್ರತಿ ದೃಶ್ಯದ ಚಿತ್ರೀಕರಣ ಮಾಡುತ್ತಾರೆ. ಆ ಗುಣದ ಕೊರತೆ ನಮ್ಮಲ್ಲಿ ಇದೆ. ನಾವು ಬರೀ ಹಣದ ದೃಷ್ಟಿಯಿಂದ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್ನವರು ಕಲಿಯಬೇಕು’ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.