ಅಶ್ವಿನ್ ಕುಮಾರ್ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ (Hombale Films) ಪ್ರೆಸೆಂಟ್ ಮಾಡಿದ ಪೌರಾಣಿಕ ಕಥೆಯನ್ನು ಆಧರಿಸಿದ ಅನಿಮೇಟೆಡ್ ಚಿತ್ರ ‘ಮಹಾವತಾರ ನರಸಿಂಹ’ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಕಥೆ, ಛಾಯಾಗ್ರಹಣ ಮತ್ತು ಅನಿಮೇಷನ್ ಎಲ್ಲರ ಹೃದಯ ಗೆದ್ದಿತ್ತು. ಈಗ, 56 ದಿನಗಳ ದೀರ್ಘ ಕಾಯುವಿಕೆಯ ನಂತರ, ಚಿತ್ರವು ಒಟಿಟಿಯಲ್ಲಿ ಬಿಡುಗಡೆ ಆಗಿದೆ.
‘ಮಹಾವತಾರ ನರಸಿಂಹ’ ಸಿನಿಮಾ ಪ್ರೇಕ್ಷಕರನ್ನು ತುಂಬಾನೇ ರಂಜಿಸಿತ್ತು. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ, ಎಲ್ಲಾ ವಯಸ್ಸಿನ ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಚಿತ್ರಮಂದಿರಗಳಿಗೆ ಹೋಗಲು ಪ್ರಾರಂಭಿಸಿದ್ದರು. ಈಗ, ಪ್ರೇಕ್ಷಕರು ಈ ಚಿತ್ರವನ್ನು ಮನೆಯಿಂದಲೇ ನೋಡಬಹುದಾಗಿದೆ. ‘ಮಹಾವತಾರ ನರಸಿಂಹ’ ಚಿತ್ರದ OTT ಬಿಡುಗಡೆಗಾಗಿ ಕಾಯುವಿಕೆ ಈಗ ಮುಗಿದಿದೆ.
ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದಿದ್ದರೆ, ಈಗ ನೀವು ನಿಮ್ಮ ಮನೆಯಿಂದಲೇ ವೀಕ್ಷಿಸಬಹುದು. ಒಟಿಟಿ ವೇದಿಕೆಯಾದ ನೆಟ್‌ಫ್ಲಿಕ್ಸ್ ಗುರುವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12.30 ರಿಂದ ದೇಶಾದ್ಯಂತ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.
ಇದನ್ನೂ ಓದಿ:ಒಟಿಟಿಗೆ ಬಂದರೂ ಥಿಯೇಟರ್ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’; ಸಿಕ್ಕ ಶೋಗಳೆಷ್ಟು?
ಈ ಚಿತ್ರ ಭಕ್ತ ಪ್ರಹ್ಲಾದನ ಕಥೆಯನ್ನು ಹೇಳುತ್ತದೆ. ಅವನ ಭಕ್ತಿಯನ್ನು ನೋಡಿದ ವಿಷ್ಣು ಕ್ರೂರ ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಕೊಲ್ಲಲು ನರಸಿಂಹನ ಅವತಾರವನ್ನು ತೆಗೆದುಕೊಂಡನು. ಅದನ್ನೇ ಸಿನಿಮಾ ಮಾಡಲಾಗಿದೆ. ಈ ಚಿತ್ರವು ವಿಶ್ವಾದ್ಯಂತ 325.65 ಕೋಟಿ ರೂ.ಗಳನ್ನು ಸಂಗ್ರಹಿಸಿತು. ಈ ಚಿತ್ರವು ಭಾರತದಲ್ಲಿ 250.2 ಕೋಟಿ ರೂ.ಗಳನ್ನು ಗಳಿಸಿತು.
ಈ ಚಿತ್ರಕ್ಕೆ ಸಿಕ್ಕ ಅಗಾಧ ಪ್ರತಿಕ್ರಿಯೆಯ ಬಗ್ಗೆ ನಿರ್ದೇಶಕ ಅಶ್ವಿನ್ ಕುಮಾರ್ ಮಾತನಾಡಿದ್ದರು. ‘ಒಂದು ಚಿತ್ರವು ಮೊದಲ ವಾರದಲ್ಲೇ 100 ಕೋಟಿ ರೂ.ಗಳನ್ನು ದಾಟಿದಾಗ, ಅದು ನಿಜಕ್ಕೂ ಬೇರೆ ರೀತಿಯ ಸಂತೋಷ. ನಾವು ಇಷ್ಟೊಂದು ಆದಾಯವನ್ನು ನಿರೀಕ್ಷಿಸಿರಲಿಲ್ಲ. ನಮ್ಮ ದೇಶದಲ್ಲಿ ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳ ಜನರು ಒಟ್ಟಿಗೆ ವಾಸಿಸುತ್ತಾರೆ. ಬಹುಶಃ ಈ ವೈವಿಧ್ಯತೆಯಿಂದಾಗಿಯೇ ಈ ಚಿತ್ರ ಪ್ರೇಕ್ಷಕರ ಹೃದಯಗಳನ್ನು ಮುಟ್ಟಿದೆ. ನಾವು ಪ್ರೇಕ್ಷಕರಿಗೆ ವಿಭಿನ್ನ ಮತ್ತು ಭವ್ಯವಾದ ಅನಿಮೇಷನ್ ಅನುಭವವನ್ನು ನೀಡಿದ್ದೇವೆ. ಇದು ಭಾರತೀಯ ಚಲನಚಿತ್ರೋದ್ಯಮದಲ್ಲಿ ಬಹಳ ಅಪರೂಪ. ಭಾರತದಲ್ಲಿ ಅನೇಕ ಜನರು ಅನಿಮೇಷನ್ ಚಲನಚಿತ್ರಗಳು ಮಕ್ಕಳಿಗಾಗಿ ಮಾತ್ರ ಎಂದು ಭಾವಿಸುತ್ತಿದ್ದರು. ಆದರೆ ನಮ್ಮ ಚಿತ್ರವು ಈ ಚಿಂತನೆಯನ್ನು ಬದಲಾಯಿಸಿದೆ’ ಎಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ