ಜನಪ್ರಿಯ ರ‍್ಯಾಪ್ ಸಿಂಗರ್ ಹನಿ ಸಿಂಗ್ (Yo Yo Honey Singh) ಅವರ ಬದುಕಿನಲ್ಲಿ ಅನೇಕ ಏಳು-ಬೀಳುಗಳು ಸಂಭವಿಸಿವೆ. ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ವಿವಾದಗಳು ಆಗಿವೆ. ವೈಯಕ್ತಿಕ ಬದುಕಿನಲ್ಲೂ ರಂಪಾಟ ಆಗಿದೆ. ದಾಂಪತ್ಯ ಜೀವನದಲ್ಲಿ ಶುರುವಾದ ಗಲಾಟೆಗಳು ವಿಚ್ಛೇದನದಲ್ಲಿ ಕೊನೆಯಾದವು. ಒಂದಷ್ಟು ವರ್ಷಗಳ ಕಾಲ ಅವರು ತೆರೆಮರೆಗೆ ಸರಿದರು. ಹೀಗೆ ಹನಿ ಸಿಂಗ್ ಎದುರಿಸಿದ ತಾಪತ್ರಯಗಳು ಒಂದೆರಡಲ್ಲ. ಅದರಲ್ಲಿ ಸ್ವತಃ ಅವರ ತಪ್ಪುಗಳು ಕೂಡ ಸಾಕಷ್ಟು ಇವೆ. ಈ ಎಲ್ಲ ಕಹಿ ಸತ್ಯಗಳು ಈಗ ಪ್ರೇಕ್ಷಕರ ಎದುರು ಬಯಲಾಗಲಿವೆ. ಹೌದು, ಹನಿ ಸಿಂಗ್ ಅವರ ಜೀವನವನ್ನು ಆಧರಿಸಿ ಡಾಕ್ಯುಮೆಂಟರಿ (Honey Singh Documentary) ತಯಾರಾಗಲಿದೆ. ಯಾವ ವಿಚಾರವನ್ನೂ ಮುಚ್ಚಿಡದೇ ಎಲ್ಲ ವಿಷಯಗಳನ್ನು ತೋರಿಸಲು ಹನಿ ಸಿಂಗ್ ಒಪ್ಪಿಗೆ ನೀಡಿದ್ದಾರೆ. ನೆಟ್ಫ್ಲಿಕ್ಸ್ (Netflix) ಮೂಲಕ ಇದು ಪ್ರಸಾರ ಆಗಲಿದೆ.
ದೆಹಲಿಯ ಹುಡುಗ ಹನಿ ಸಿಂಗ್ ಅವರು 2003ರಲ್ಲಿ ಪಂಜಾಬಿ ರ‍್ಯಾಪ್ ಸಾಂಗ್ಗಳ ಮೂಲಕ ಬೆಳಕಿಗೆ ಬಂದರು. 2011ರ ಹೊತ್ತಿಗೆ ಅವರು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದರು. ದೇಶ-ವಿದೇಶದಲ್ಲಿ ಹನಿ ಸಿಂಗ್ ಹೆಸರು ಫೇಮಸ್ ಆಯಿತು. ಬಾಲಿವುಡ್ನಲ್ಲಿ ಬಹುಬೇಡಿಕೆಯ ರ‍್ಯಾಪ್ ಸಿಂಗರ್ ಆಗಿ ಅವರು ಬೆಳೆದು ನಿಂತರು. ಆದರ ಜೊತೆಗೆ ಸಾಕಷ್ಟು ವಿವಾದಗಳನ್ನು ಮಾಡಿಕೊಂಡು ವಿವಾದಿತ ಸಿಂಗರ್ ಎಂಬ ಹಣೆಪಟ್ಟಿ ಕಟ್ಟಿಕೊಂಡರು.
ಇದನ್ನೂ ಓದಿ: ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್
ಹನಿ ಸಿಂಗ್ ಜೀವನದ ಕುರಿತ ಡಾಕ್ಯುಮೆಂಟರಿ ಸಿದ್ಧವಾಗುತ್ತಿದೆ ಎಂಬುದನ್ನು ತಿಳಿಸಲು ನೆಟ್ಫ್ಲಿಕ್ಸ್ ಒಂದು ಟೀಸರ್ ರಿಲೀಸ್ ಮಾಡಿದೆ. ಅದರಲ್ಲಿ ಸ್ವತಃ ಹನಿ ಸಿಂಗ್ ಅವರು ಕಾಣಿಸಿಕೊಂಡಿದ್ದಾರೆ. ತಮ್ಮದೇ ರ‍್ಯಾಪ್ ಶೈಲಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಇದರ ಪ್ರಸಾರ ಆರಂಭ ಆಗಲಿದೆ.
ಇದನ್ನೂ ಓದಿ: ವಿಚಾರಣೆ ವೇಳೆ ಕೋರ್ಟ್ನಲ್ಲೇ ಅತ್ತ ಶಾಲಿನಿ ತಲ್ವಾರ್; ಹನಿ ಸಿಂಗ್ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್
‘ಈ ಮೊದಲೇ ನಾನು ನನ್ನ ಖಾಸಗಿ ಮತ್ತು ವೃತ್ತಿಜೀವನದ ಬಗ್ಗೆ ಮಾತನಾಡಿದ್ದೆ. ಆದರೆ ಎಲ್ಲವನ್ನೂ ತೆರೆದಿಡಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳಿಂದ ನಾನು ಸಾಕಷ್ಟು ಪ್ರೀತಿ ಸ್ವೀಕರಿಸಿದ್ದೇನೆ. ನನ್ನ ಬದುಕಿನ ಪೂರ್ತಿ ಕಥೆಯನ್ನು ತಿಳಿಯುವ ಹಕ್ಕು ಅಭಿಮಾನಿಗಳಿಗೆ ಇದೆ. ಈ ನೆಟ್ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ನನ್ನ ಜೀವನದ ವಿವರಗಳನ್ನು ಪ್ರಾಮಾಣಿಕವಾಗಿ ತೆರೆದಿಡಲಾಗುವುದು’ ಎಂದು ಹನಿ ಸಿಂಗ್ ಹೇಳಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವನ್ನು ಗುನೀತ್ ಮೊಂಗಾ ನಿರ್ಮಿಸಿದ್ದಾರೆ. ಅವರೇ ಈಗ ಹನಿ ಸಿಂಗ್ ಜೀವನಾಧಾರಿತ ಡಾಕ್ಯುಮೆಂಟರಿಗೆ ಬಂಡವಾಳ ಹೂಡುತ್ತಿದ್ದಾರೆ. ಮೊಜೇಜ್ ಸಿಂಗ್ ಅವರು ಇದಕ್ಕೆ ನಿರ್ದೇಶನ ಮಾಡಲಿದ್ದಾರೆ. ಆದಷ್ಟು ಬೇಗ ಈ ಡಾಕ್ಯುಮೆಂಟರಿ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.