2020ರಲ್ಲಿ ‘ಪಾತಾಳ್ ಲೋಕ್’ ವೆಬ್ ಸರಣಿ ಬಿಡುಗಡೆ ಆಗಿತ್ತು. ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದ್ದ ಆ ವೆಬ್ ಸಿರೀಸ್ ನೋಡಿ ವೀಕ್ಷಕರು ಫಿದಾ ಆಗಿದ್ದರು. ಅನುಷ್ಕಾ ಶರ್ಮಾ ನಿರ್ಮಾಣ ಮಾಡಿದ್ದ ‘ಪಾತಾಳ್ ಲೋಕ್’ ವೆಬ್ ಸಿರೀಸ್ನಲ್ಲಿ ಜೈದೀಪ್ ಅಹಲಾವತ್ ಅವರು ಪ್ರಮುಖ ಪಾತ್ರ ಮಾಡಿದ್ದರು. ‘ಪಾತಾಳ್ ಲೋಕ್’ ಸೂಪರ್ ಹಿಟ್ ಆದ ಬಳಿಕ ಅದಕ್ಕೆ ಸೀಕ್ವೆಲ್ ಬರಲಿದೆ ಎಂದು ಕೂಡ ಹೇಳಲಾಗಿತ್ತು. ಅದಕ್ಕಾಗಿ ವೀಕ್ಷಕರು ಕಾದಿದ್ದರು. ಈಗ ಗುಡ್ ನ್ಯೂಸ್ ಸಿಕ್ಕಿದೆ. ‘ಪಾತಾಳ್ ಲೋಕ್ 2’ ವೆಬ್ ಸರಣಿಯ ಟೀಸರ್ ಬಿಡುಗಡೆ ಆಗಿದೆ.
ಇಂದು (ಜನವರಿ 3) ‘ಪಾತಾಳ್ ಲೋಕ್ 2’ ಟೀಸರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ. ಮೊದಲ ಸೀಸನ್ ಭಾರಿ ಸಕ್ಸಸ್ ಕಂಡಿದ್ದರಿಂದ 2ನೇ ಸೀಸನ್ ಮೇಲೆ ಈ ಪರಿ ಕ್ರೇಜ್ ಸೃಷ್ಟಿ ಆಗಿದೆ. ಈ ಬಾರಿ ಕೂಡ ನಟ ಜೈದೀಪ್ ಅಹಲಾವತ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಟೀಸರ್ನಲ್ಲಿ ಅವರು ಹೊಸ ಕಥೆಯ ಕಿರುಪರಿಚಯ ಮಾಡಿಕೊಟ್ಟಿದ್ದಾರೆ.
‘ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನಿಗೆ ಕೀಟಗಳನ್ನು ಕಂಡರೆ ಆಗುತ್ತಿರಲಿಲ್ಲ. ಒಂದು ದಿನ ಆತ ಒಂದು ಕೀಟವನ್ನು ಸಾಯಿಸಿದ. ರಾತ್ರೋರಾತ್ರಿ ಅವನು ಹೀರೋ ಆಗಿಬಿಟ್ಟ. ಮರುದಿನ ಆತನಿಗೆ ಊರಿನವರೆಲ್ಲ ಸನ್ಮಾನ ಮಾಡಿದರು. ಮುಂದಿನ ಹಲವು ರಾತ್ರಿಗಳು ಅವನು ಬಹಳ ನೆಮ್ಮದಿಯಿಂದ ನಗುನಗುತ್ತಾ ನಿದ್ರೆ ಮಾಡಿದ. ಆದರೆ ಒಂದು ರಾತ್ರಿ ಅವನ ಮಂಚದ ಕೆಳಗೆ ಏನೂ ಹರಿದಾಡಿದಂತೆ ಕಾಣಿಸಿತು. ಮೊದಲು ಒಂದು ಕೀಟ ಇತ್ತು. ಆಮೇಲೆ 10 ಆಯಿತು. ಬಳಿಕ ಸಾವಿರ, ಲಕ್ಷ, ಕೋಟಿ ಆಯಿತು. ಪಾಪ ಅವನು ಒಂದು ಕೀಟವನ್ನು ಸಾಯಿಸಿ ಸಮಸ್ಯೆ ಮುಗಿಯಿತು ಎಂದುಕೊಂಡಿದ್ದ. ಆದರೆ ಪಾತಾಳ್ ಲೋಕದಲ್ಲಿ ಆ ರೀತಿ ಆಗುವುದಿಲ್ಲ’ ಎಂದು ‘ಪಾತಾಳ್ ಲೋಕ್ 2’ ಕಥೆಯ ಬಗ್ಗೆ ಟೀಸರ್ನಲ್ಲಿ ಇಂಟ್ರಡಕ್ಷನ್ ನೀಡಲಾಗಿದೆ.
ಇದನ್ನೂ ಓದಿ: ಒಟಿಟಿಗೆ ಬಂತು ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ
ಜನವರಿ 17ರಿಂದ ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ‘ಪತಾಳ್ ಲೋಕ್ 2’ ವೆಬ್ ಸಿರೀಸ್ ಪ್ರಸಾರ ಆರಂಭ ಆಗಲಿದೆ. ಜೈದೀಪ್ ಅಹಲಾವತ್ ಅವರ ಪ್ರಭುದ್ಧ ನಟನೆಯನ್ನು ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ಟೀಸರ್ ನೋಡಿ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಗುಲ್ ಪನಾಕ್, ತಿಲೋತ್ತಮಾ ಶೋಮೆ ಮುಂತಾದವರು ಕೂಡ ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಟೀಸರ್ನಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.