ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್‌ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ

ಅಮೆಜಾನ್ ಪ್ರೈಮ್ ವೀಡಿಯೋ ಆಸ್ಟ್ರೇಲಿಯಾದಲ್ಲಿ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಂದಾದಾರಿಕೆ ಪಡೆದ ಬಳಕೆದಾರರಿಗೆ ಜಾಹೀರಾತುಗಳನ್ನು ಪ್ರದರ್ಶಿಸಿದ್ದಕ್ಕೆ ಸ್ಪರ್ಧಾತ್ಮಕ ನಿಯಂತ್ರಣ ಮಂಡಳಿ ಅಮೆಜಾನ್ ವಿರುದ್ಧ ಫೆಡರಲ್ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ. ಸೂಕ್ತ ಮಾಹಿತಿ ನೀಡದೆ ಸೇವೆಯಲ್ಲಿ ಬದಲಾವಣೆ ಮಾಡಿದೆ ಎಂದು ನಿಯಂತ್ರಣ ಮಂಡಳಿ ಆರೋಪಿಸಿದೆ. ಈ ಪ್ರಕರಣವು ಸ್ಟ್ರೀಮಿಂಗ್ ಸೇವೆಗಳ ಪಾರದರ್ಶಕತೆಗೆ ಮಹತ್ವದ ಪರೀಕ್ಷೆಯಾಗಿದೆ. ಭಾರತದಲ್ಲೂ ಇದೇ ಸಮಸ್ಯೆ ಇದೆ.

ಸಾಕಷ್ಟು ಹಣ ಕೊಟ್ಟ ಬಳಿಕವೂ ಜಾಹೀರಾತು; ಅಮೆಜಾನ್‌ ಪ್ರೈಮ್ ವಿಡಿಯೋಗೆ ಕಾನೂನು ಸಂಕಷ್ಟ
Prime Video
Image Credit source: Prime Video

Updated on: Jul 01, 2026 | 3:57 PM

ಮುಖ್ಯಾಂಶಗಳು

  • ದುಡ್ಡು ಕೊಟ್ಟರೂ ತಪ್ಪದ ಜಾಹೀರಾತು ಕಿರಿಕಿರಿ: ಅಮೆಜಾನ್ ಪ್ರೈಮ್ ವೀಡಿಯೋ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಿವಾದ
  • ಗ್ರಾಹಕರಿಗೆ ಮಾಹಿತಿ ನೀಡದೆ ವಂಚನೆ ಆರೋಪ: ಆಸ್ಟ್ರೇಲಿಯಾ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರದಿಂದ ಮೊಕದ್ದಮೆ
  • ಭಾರತದಲ್ಲೂ ಶುರುವಾಗಿದೆ ಒಟಿಟಿ ಚಂದಾದಾರರ ಆಕ್ರೋಶ: ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳ ಭವಿಷ್ಯಕ್ಕೆ ದೊಡ್ಡ ಪರೀಕ್ಷೆ

ಅಮೆಜಾನ್ ಪ್ರೈಮ್ ವಿಡಿಯೋ ಆಸ್ಟ್ರೇಲಿಯಾದಲ್ಲಿ ಹೊಸ ಕಾನೂನು ಸಂಕಷ್ಟವನ್ನು ಎದುರಿಸುತ್ತಿದೆ. ಪ್ರೈಮ್ ವಿಡಿಯೋ (Prime Video) ಸೇವೆಯಲ್ಲಿ ಮಾಡಲಾದ ಬದಲಾವಣೆಗಳ ವಿರುದ್ಧ ಅಲ್ಲಿನ ಸ್ಪರ್ಧಾತ್ಮಕ ನಿಯಂತ್ರಣ ಮಂಡಳಿಯು (Competition Watchdog) ಕಂಪನಿಯನ್ನು ಫೆಡರಲ್ ಕೋರ್ಟ್‌ಗೆ ಎಳೆದೊಯ್ದಿದೆ. ಚಂದಾದಾರಿಕೆ ಪಡೆದುಕೊಂಡ ಹೊರತಾಗಿಯೂ ಬಳಕೆದಾರರ ಖಾತೆಗಳಿಗೆ ಜಾಹೀರಾತುಗಳನ್ನು ಪರಿಚಯಿಸಿರುವುದು ಈ ಪ್ರಕರಣದ ಪ್ರಮುಖ ಕಾರಣವಾಗಿದೆ.

ಆರೋಪ ಏನು?

ನಿಯಂತ್ರಣ ಮಂಡಳಿಯ ಆರೋಪದ ಪ್ರಕಾರ, ಗ್ರಾಹಕರು ತಾವು ಮೊದಲೇ ಹಣ ಪಾವತಿಸಿ ಪಡೆದುಕೊಂಡಿದ್ದ ಸೇವೆಯಲ್ಲಿ ಬದಲಾವಣೆಯಾಗಲಿದೆ ಎಂಬ ಸೂಕ್ತ ಮಾಹಿತಿಯನ್ನು ನೀಡದೆಯೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಜಾಹೀರಾತು ರಹಿತ ಸೇವೆಯನ್ನು ಬಯಸುವ ಬಳಕೆದಾರರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದಿದೆ.

ನಿಯಂತ್ರಣ ಮಂಡಳಿಯ ಪ್ರಕಾರ, ಅನೇಕ ಚಂದಾದಾರರು ಹೆಚ್ಚುವರಿ ಹಣ ಪಾವತಿಸಲು ಒಪ್ಪದಿದ್ದರೆ ಜಾಹೀರಾತು ಪ್ರಸಾರ ಆಗುತ್ತದೆ. ಇದು ಗ್ರಾಹಕರು ತಾವು ಪಡೆದ ಚಂದಾದಾರಿಕೆಯ ಸ್ವರೂಪದ ಬಗ್ಗೆ ತಪ್ಪು ದಾರಿಗೆಳೆಯುವಂತೆ ಮಾಡಿದೆ ಎಂದು ಮಂಡಳಿ ವಾದಿಸಿದೆ.

ಆದರೆ, ಅಮೆಜಾನ್ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಹೊಸ ಯೋಜನೆ ಜಾರಿಗೆ ಬರುವ ಮುನ್ನವೇ ಇಮೇಲ್ ಮತ್ತು ಆ್ಯಪ್ ನೋಟಿಫಿಕೇಶನ್‌ಗಳ ಮೂಲಕ ಗ್ರಾಹಕರಿಗೆ ಈ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದೆ. ಕಂಪನಿಯು ಈ ಆರೋಪಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಸಜ್ಜಾಗಿದೆ.

ತೀರ್ಪಿನ ಮೇಲೆ ನಿರ್ಧಾರ

ಈ ಪ್ರಕರಣವು ಈಗ ಡಿಜಿಟಲ್ ಚಂದಾದಾರಿಕೆ ಸೇವೆಗಳಿಗೆ ಒಂದು ದೊಡ್ಡ ಪರೀಕ್ಷೆಯಾಗಿ ಪರಿಣಮಿಸಿದೆ. ಒಂದು ವೇಳೆ ನ್ಯಾಯಾಲಯವು ಅಮೆಜಾನ್ ವಿರುದ್ಧ ತೀರ್ಪು ನೀಡಿದರೆ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಪಾವತಿ ಯೋಜನೆಗಳನ್ನು ಬದಲಾಯಿಸುವಾಗ ಅಥವಾ ಹೊಸ ಶುಲ್ಕಗಳನ್ನು ಪರಿಚಯಿಸುವಾಗ ಹೆಚ್ಚಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದನ್ನು ಇದು ಕಡ್ಡಾಯಗೊಳಿಸಲಿದೆ.

ಇದನ್ನೂ ಓದಿ: ದೈವ ಅವಮಾನಿಸಿದ ರಣವೀರ್ ಸಿಂಗ್​ಗೆ ಕೌಂಟರ್ ಕೊಟ್ಟ ಅಮೇಜಾನ್ ಪ್ರೈಮ್ ವಿಡಿಯೋ

ಭಾರತದಲ್ಲೂ ಇದೇ ಸಮಸ್ಯೆ

ಭಾರತದಲ್ಲೂ ಇದೇ ಸಮಸ್ಯೆ ಎದುರಾಗಿದೆ. ಇದು ಸಿನಿರಸಿಕರು ಹಾಗೂ ಗ್ರಾಹಕರ ವಲಯದಲ್ಲಿ ತೀವ್ರ ಚರ್ಚೆಯಲ್ಲಿತ್ತು. ಒಟಿಟಿ ವೀಕ್ಷಣೆಗಾಗಿ ಈಗಾಗಲೇ ದೊಡ್ಡ ಮಟ್ಟದಲ್ಲಿ ದುಡ್ಡು ಕೊಟ್ಟ ಹೊರತಾಗಿಯೂ, ಮಧ್ಯದಲ್ಲಿ ಮತ್ತೆ ಜಾಹೀರಾತುಗಳನ್ನು ಹಾಕಲಾಗುತ್ತದೆ ಎಂದು ಅನೇಕ ಬಳಕೆದಾರರು ತೀವ್ರ ಅಪಸ್ವರ ಎತ್ತಿದ್ದರು. ಹಣ ಪಡೆದೂ ಜಾಹೀರಾತು ತೋರಿಸುವ ಒಟಿಟಿ ಸಂಸ್ಥೆಗಳ ಈ ಧೋರಣೆಗೆ ಭಾರತದಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಭಾರತದಲ್ಲಿಯೂ ಕೋರ್ಟ್​​ಗೆ ಹೋಗುವ ಅನಿವಾರ್ಯತೆ ಇದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:44 pm, Wed, 1 July 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us