ಹಾಲಿವುಡ್ನಲ್ಲಿ (Hollywood) ನೆಲೆಕಂಡು ಕೊಂಡಿರುವ ಭಾರತೀಯ ಚೆಲುವೆ ಪ್ರಿಯಾಂಕಾ ಚೋಪ್ರಾ (Priyanka Chopra) ನಟನೆಯ ಹೊಸ ಹಾಲಿವುಡ್ ವೆಬ್ ಸರಣಿ (Web Series) ಸಿಟಾಡೆಲ್ನ (Citadel) ಟ್ರೈಲರ್ ಇಂದು ಸಂಜೆ ಬಿಡುಗಡೆ ಆಗಿದೆ. ಕೆಲವು ದಿನಗಳ ಹಿಂದಷ್ಟೆ ಇದೇ ವೆಬ್ ಸರಣಿಯ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿತ್ತು, ಇದೀಗ ಟ್ರೈಲರ್ ಬಿಡುಗಡೆ ಆಗಿದ್ದು, ವೆಬ್ ಸರಣಿಯ ಕತೆಯ ಬಗ್ಗೆ ದೊಡ್ಡ ಕುತೂಹಲ ಹುಟ್ಟುಹಾಕಿದೆ. ಅದರಲ್ಲಿಯೂ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿರುವ ಆಕ್ಷನ್ ದೃಶ್ಯಗಳು ರೋಚಕವಾಗಿದ್ದು, ಟ್ರೈಲರ್ನಲ್ಲಿ ಅವುಗಳ ಕೆಲವು ಝಲಕ್ ತೋರಿಸಲಾಗಿದೆ.
ಎರಡು ನಿಮಿಷದ ಮೇಲೆ 14 ಸೆಕೆಂಡ್ಗಳುಳ್ಳ ಈ ಟ್ರೈಲರ್ ಅಮೆಜಾನ್ ಪ್ರೈಂ ವಿಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿದ್ದು, ಟ್ರೈಲರ್ ಪ್ರಾರಂಭವಾಗುವುದೇ ಪ್ರಿಯಾಂಕಾ ಚೋಪ್ರಾರ ಸೆಕ್ಸಿ ಬೆನ್ನಿನ ದರ್ಶನದ ಮೂಲಕ! ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಸಿಟಾಡಲ್ ಹೆಸರಿನ ಭದ್ರತಾ ಸಂಸ್ಥೆಯೊಂದರ ಗೂಢಚಾರಿಣಿ ವೆಬ್ ಸರಣಿಯ ನಾಯಕ ರಿಚರ್ಡ್ ಮ್ಯಾಡನ್ ಸಹ ಅದೇ ಸಂಸ್ಥೆಯ ಗೂಢಚಾರ. ಆದರೆ ಇಬ್ಬರಿಗೂ ಹಳೆಯ ನೆನಪುಗಳು ಮರೆತುಹೋಗಿ, ಈಗ ಬೇರೇನೋ ಆಗಿ ಬದುಕುತ್ತಿರುತ್ತಾರೆ. ಆದರೆ ಅವರಿಬ್ಬರಲ್ಲಿ ಒಬ್ಬರು ವಿದ್ರೋಹಿ ಕೃತ್ಯದಲ್ಲಿ ತೊಡಗಿದ್ದಾರೆಂಬುದು ಸಿಟಾಡೆಲ್ನ ಗುಮಾನಿ. ಅವರಿಬ್ಬರಿಗೂ ನೆನಪು ಅಳಿಸಿದ್ದು ಹೇಗೆ, ನೆನಪು ವಾಪಸ್ ಬರುವುದು ಹೇಗೆ? ನಿಜವಾದ ವಿಲನ್ ಯಾರು, ಅವನಿಂದ ಎದುರಾಗಲಿರುವ ಸಮಸ್ಯೆ ಎಂಥಹದು, ಅದನ್ನು ನಾಯಕ-ನಾಯಕಿ ಹೇಗೆ ನಿವಾರಿಸುತ್ತಾರೆ ಎಂಬುದು ಈ ವೆಬ್ ಸರಣಿಯ ಕತೆ.
ಇದೀಗ ಬಿಡುಗಡೆ ಆಗಿರುವ ಟ್ರೈಲರ್ನಲ್ಲಿ ತಿಳಿದು ಬರುತ್ತಿರುವ ಪ್ರಕಾರ, ಸತ್ಯ ಹಾಗೂ ಸುಳ್ಳು ಯಾವುದು ಎಂಬುದನ್ನು ತಿಳಿಯಲು ನಾಯಕ-ನಾಯಕಿ ಸೇರಿದಂತೆ ಇನ್ನೂ ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದ ನಡುವೆ ಹಲವು ಹೊಡೆದಾಟ, ಚೇಸ್ಗಳು, ಆಕ್ಷನ್ ಗಳು ನಡೆಯುತ್ತಿವೆ. ಎಲ್ಲರೂ ಗೂಢಚಾರಿಗಳೇ ಇರುವಾಗ ಯಾರದ್ದು ಸತ್ಯ, ಯಾರದ್ದು ಸುಳ್ಳು ಯಾರನ್ನು ನಂಬುವುದು ಯಾರನ್ನು ಅನುಮಾನಿಸುವುದು ಎಂಬುದು ಪಾತ್ರಗಳಿಗೆ ಸವಾಲಾಗಿದೆ. ಈ ಸತ್ಯ-ಸುಳ್ಳಿನ ಹುಡುಕಾಟವೇ ವೆಬ್ ಸರಣಿಯ ಕತೆ ಆಗಿರುವಂತಿದೆ.
ಟ್ರೈಲರ್ನಲ್ಲಿ ಪ್ರಿಯಾಂಕಾ ಚೋಪ್ರಾ ಕೆಲವು ಅದ್ಭುತ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೆಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಸಹ. ಎರಡನ್ನೂ ಬಿಂದಾಸ್ ಆಗಿ ನಿರ್ವಹಿಸಿದಂತಿದ್ದಾರೆ ಪ್ರಿಯಾಂಕಾ ಚೋಪ್ರಾ. ಇನ್ನು ನಾಯಕ ರಿಚರ್ಡ್ ಮ್ಯಾಡನ್ ಸಹ ಭರ್ಜರಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಕಾರ್ ಚೇಸ್, ಹಿಮದಲ್ಲಿ ಚೇಸಿಂಗ್ ದೃಶ್ಯಗಳು ಹಲವು ವೆಬ್ ಸರಣಿಯಲ್ಲಿ ಇರುವುದಾಗಿ ಟ್ರೈಲರ್ ಸುಳಿವು ನೀಡಿದೆ.
ಇದನ್ನೂ ಓದಿ: Citadel : ಆಕ್ಷನ್ ಭರಿತ ಸಿಟಾಡೆಲ್ ಟ್ರೈಲರ್ ಬಿಡುಗಡೆ, ಪ್ರಿಯಾಂಕಾ ಚೋಪ್ರಾಗೆ ಸಾಟಿ ಯಾರು?
ಈ ವೆಬ್ ಸರಣಿಯನ್ನು ಅವೇಂಜರ್ಸ್, ಕ್ಯಾಪ್ಟನ್ ಅಮೆರಿಕ ಖ್ಯಾತಿಯ ನಿರ್ದೇಶಕರಾದ ರುಸ್ಸೋ ಬ್ರದರ್ಸ್ ನಿರ್ಮಾಣ ಮಾಡಿದ್ದಾರೆ. ಜೋಶ್ ಅಫೆಲ್ಬ್ಯಾಮ್ ಹಾಗೂ ಬ್ರ್ಯಾನ್ ಓಹ್ ಈ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28 ರಂದು ಬಿಡುಗಡೆ ಆಗಲಿದೆ. ಇದೇ ಹೆಸರಿನ ವೆಬ್ ಸರಣಿ ಹಿಂದಿಯಲ್ಲಿಯೂ ಬರಲಿದ್ದು, ಇಂಗ್ಲೀಷ್ನಲ್ಲಿ ಪ್ರಿಯಾಂಕಾ ಚೋಪ್ರಾ, ರಿಚರ್ಡ್ ನಟಿಸಿದ್ದ ಪಾತ್ರಗಳಲ್ಲಿ ಸಮಂತಾ ಹಾಗೂ ವರುಣ್ ಧವನ್ ನಟಿಸುತ್ತಿದ್ದಾರೆ.