‘ಪುಷ್ಪ 2’ ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಪ್ರೇಮಿಗಳು, ಅಲ್ಲು ಅರ್ಜುನ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ‘ಪುಷ್ಪ 2’ ಸಿನಿಮಾ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ದಾಖಲೆ ಮುರಿದಿದೆ. ಅತಿ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗುವ ಮೂಲಕ ಆ ದಾಖಲೆಯನ್ನೂ ಮುರಿದಿದೆ. ಒಟಿಟಿಗೆ ಈಗಾಗಲೇ ಹಕ್ಕುಗಳ ಮಾರಾಟ ಮಾಡಲಾಗಿದ್ದು, ಅತಿ ಹೆಚ್ಚು ಬೆಲೆಗೆ ಮಾರಾಟ ಆಗುವ ಮೂಲಕ ಆ ದಾಖಲೆಯನ್ನೂ ಸಹ ‘ಪುಷ್ಪ 2’ ಮುರಿದಿದೆ ಎನ್ನಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿಯೇ ‘ಪುಷ್ಪ 2’ ಸಿನಿಮಾದ ನಿರ್ಮಾಪಕರು ಒಟಿಟಿ ಡೀಲ್ ಅಂತ್ಯಗೊಳಿಸಿದ್ದಾರೆ. ಮೂಲಗಳ ಪ್ರಕಾರ ಸಿನಿಮಾವನ್ನು ಎರಡು ಒಟಿಟಿಗಳಿಗೆ ಮಾರಾಟ ಮಾಡಲಾಗಿದೆಯಂತೆ. ವಿಶ್ವದಾದ್ಯಂತ ಭಾರಿ ಸಂಖ್ಯೆಯ ಚಂದಾದಾರರಿರುವ ನೆಟ್ಫ್ಲಿಕ್ಸ್ ಗೆ ಭಾರಿ ಮೊತ್ತಕ್ಕೆ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ.
ತೆಲುಗು ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕನಿಷ್ಟ ಒಂದು ತಿಂಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆ ಆಗಬೇಕು ಎಂಬ ನಿಯಮ ಇದೆ. ಆದರೆ ‘ಪುಷ್ಪ 2’ ಸಿನಿಮಾ ಸುಮಾರು 50 ದಿನಗಳ ಬಳಿಕ ಒಟಿಟಿಯಲ್ಲಿ ಬಿಡುಗಡೆ ಆಗಲಿದೆಯಂತೆ. ನೆಟ್ಫ್ಲಿಕ್ಸ್ನಲ್ಲಿ ತೆಲುಗು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕೆಲ ವರದಿಗಳ ಪ್ರಕಾರ, ‘ಪುಷ್ಪ 2’ ಸಿನಿಮಾದ ಬಿಡುಗಡೆ ಹಕ್ಕನ್ನು ಬರೋಬ್ಬರಿ 250 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆಯಂತೆ ನೆಟ್ಫ್ಲಿಕ್ಸ್. ನೆಟ್ಫ್ಲಿಕ್ಸ್ ಇದೇ ವರ್ಷದ ಜನವರಿ ತಿಂಗಳಿನಲ್ಲಿಯೇ ‘ಪುಷ್ಪ 2’ ಸಿನಿಮಾದ ಪೋಸ್ಟರ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸಿನಿಮಾದ ಡಿಜಿಟಲ್ ಹಕ್ಕು ಖರೀದಿ ಮಾಡಿರುವುದನ್ನು ಖಾತ್ರಿ ಪಡಿಸಿದ್ದರು.
ಇದನ್ನೂ ಓದಿ:‘ಪುಷ್ಪ 2’ ಸಿನಿಮಾ ಮುರಿಯಲಿದೆಯೇ ‘ಬಾಹುಬಲಿ’, ‘RRR’ ಸಿನಿಮಾ ದಾಖಲೆ
ನೆಟ್ಫ್ಲಿಕ್ಸ್ ಮಾತ್ರವೇ ಅಲ್ಲದೆ ಮತ್ತೊಂದು ಒಟಿಟಿಗೆ ಸಹ ‘ಪುಷ್ಪ 2’ ಸಿನಿಮಾದ ಹಕ್ಕುಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲ ವರದಿಗಳ ಪ್ರಕಾರ ಜೀ5 ಅಥವಾ ಅಮೆಜಾನ್ ಪ್ರೈಂಗೆ ‘ಪುಷ್ಪ 2’ ಡಿಜಿಟಲ್ ಹಕ್ಕುಗಳು ಮಾರಾಟ ಆಗಲಿವೆ. ಆದರೆ ಮೊದಲಿಗೆ ನೆಟ್ಫ್ಲಿಕ್ಸ್ನಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಆ ನಂತರವಷ್ಟೆ ಅಮೆಜಾನ್ ಪ್ರೈಂ ಅಥವಾ ಜೀ5 ನಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆಯಂತೆ. ಈ ಹಿಂದೆ ರಾಜಮೌಳಿಯ ‘RRR’ ಸಿನಿಮಾವನ್ನು ನೆಟ್ಫ್ಲಿಕ್ಸ್ ಮತ್ತು ಜೀ5 ಎರಡರಲ್ಲೂ ಬಿಡುಗಡೆ ಮಾಡಲಾಗಿತ್ತು. ಆ ನಂತರ ಹಾಟ್ಸ್ಟಾರ್ನಲ್ಲಿಯೂ ಬಿಡುಗಡೆ ಮಾಡಲಾಯ್ತು. ಇದೇ ಮಾದರಿಯನ್ನು ‘ಪುಷ್ಪ 2’ ತಂಡ ಸಹ ಅನುಸರಿಸಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ