ಕೆಲವೇ ದಿನಗಳ ಹಿಂದೆ ‘ಗೇಮ್ ಚೇಂಜರ್’ (Game Changer) ಸಿನಿಮಾದ ಫೋಟೋ ಲೀಕ್ ಆಗಿತ್ತು. ಈಗ ಈ ಸಿನಿಮಾದ ಕಥೆ ಏನು ಎಂಬುದು ಬಹಿರಂಗ ಆಗಿದೆ. ಈ ಚಿತ್ರದಲ್ಲಿ ನಟ ರಾಮ್ ಚರಣ್ (Ram Charan) ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನ ಮಾಡುತ್ತಿರುವ ‘ಗೇಮ್ ಚೇಂಜರ್’ ಚಿತ್ರದಲ್ಲಿ ಎಲೆಕ್ಷನ್ ಕುರಿತಾದ ಕಥೆ ಇರಲಿದೆ ಎಂದು ಈ ಮೊದಲೇ ಸುಳಿವು ನೀಡಲಾಗಿತ್ತು. ಈಗ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿ ಹೊರಬಿದ್ದಿದೆ. ಅಲ್ಲದೇ, ಈ ಸಿನಿಮಾದ ಒಟಿಟಿ (Game Changer OTT) ಪ್ರಸಾರ ಹಕ್ಕು ಯಾವ ಸಂಸ್ಥೆಯ ಪಾಲಾಗಿದೆ ಎಂಬುದು ಕೂಡ ಗೊತ್ತಾಗಿದೆ.
‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿ ಸಂಸ್ಥೆ ಇಂದು (ಮಾರ್ಚ್ 19) ಹಲವು ಅಚ್ಚರಿಗಳನ್ನು ನೀಡಿದೆ. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮುಂಬರುವ ಅನೇಕ ಕಂಟೆಂಟ್ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಗೇಮ್ ಚೇಂಜರ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಬಳಿಕ ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಇದನ್ನು ತಿಳಿಸುವ ಸಲುವಾಗಿ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್; ಮೈಸೂರಿನಲ್ಲಿ ‘ಗೇಮ್ ಚೇಂಜರ್’ ಚಿತ್ರೀಕರಣ
ಸೋಶಿಯಲ್ ಮೀಡಿಯಾದಲ್ಲಿ ‘ಅಮೇಜಾನ್ ಪ್ರೈಂ ವಿಡಿಯೋ’ ಹಂಚಿಕೊಂಡಿರುವ ಹೊಸ ಪೋಸ್ಟರ್ಗೆ ನೀಡಿದ ಕ್ಯಾಪ್ಷನ್ನಲ್ಲಿ ‘ಗೇಮ್ ಚೇಂಜರ್’ ಸಿನಿಮಾದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ‘ಆಡಳಿತದ ಆಟ ಬದಲಾಯಿಸಲು ನ್ಯಾಯಯುತವಾಗಿ ಎಲೆಕ್ಷನ್ ನಡೆಸಿ, ರಾಜಕೀಯದ ಭ್ರಷ್ಟಾಚಾರದ ವಿರುದ್ಧ ಓರ್ವ ಪ್ರಾಮಾಣಿಕ ಐಎಎಸ್ ಆಫೀಸರ್ ಹೋರಾಡುತ್ತಾನೆ’ ಎಂದು ಕ್ಯಾಪ್ಷನ್ ನೀಡಲಾಗಿದೆ. ಅಂದರೆ, ಈ ಸಿನಿಮಾದಲ್ಲಿ ರಾಮ್ ಚರಣ್ ಅವರು ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ.
‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಅವರು ದ್ವಿಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ. ಹಾಗಾಗಿ ಕರ್ನಾಟಕದ ಸಿನಿಪ್ರಿಯರು ಕೂಡ ಈ ಸಿನಿಮಾ ನೋಡಲು ಕಾದಿದ್ದಾರೆ. ‘ಆರ್ಆರ್ಆರ್’ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಮಿಂಚಿದ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಚಿತ್ರದ ಮೂಲಕ ಗೆಲ್ಲಬೇಕಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಂಕರ್ ನಿರ್ದೇಶನದ ಸಿನಿಮಾ ಎಂಬ ಕಾರಣದಿಂದಲೂ ಹೈಪ್ ಜೋರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.