ರಾಣಾ ದಗ್ಗುಬಾಟಿ (Rana Daggubati) ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ. ತೆಲುಗು ಮಾತ್ರವಲ್ಲ ಹಿಂದಿ ಸಿನಿಮಾ ವೀಕ್ಷಕರಿಗೂ ಬಲ್ಲಾಳದೇವನ ಪರಿಚಯ ಬಹಳ ಚೆನ್ನಾಗಿದೆ. ‘ಬಾಹುಬಲಿ’ ಸಿನಿಮಾನಲ್ಲಿ ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿ ಅದಾದ ಬಳಿಕ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದರು. ತೆಲುಗಿನಲ್ಲಿ ಸ್ಟಾರ್ ನಟರಾಗಿದ್ದರೂ ಸಹ ಒಟಿಟಿಗೆ ಬಂದು ವೆಬ್ ಸೀರೀಸ್ನಲ್ಲಿ ನಟಿಸಿ ಅಲ್ಲಿಯೂ ಸೈ ಎನಿಸಿಕೊಂಡರು. ಈ ಹಿಂದೆ ತೆಲುಗಿನ ಆಹಾ ಒಟಿಟಿಗಾಗಿ ತಮಾಷೆಯ ಟಾಕ್ ಶೋ ನಡೆಸಿಕೊಡುತ್ತಿದ್ದರು ರಾಣಾ. ಆದರೆ ಕಳೆದ ಕೆಲ ವರ್ಷಗಳಿಂದ ಆ ಟಾಕ್ ಶೋ ನಿಂತು ಹೋಗಿತ್ತು, ಇದೀಗ ಬೇರೊಂದು ಒಟಿಟಿ ಮೂಲಕ ಮತ್ತೆ ಟಾಕ್ ಶೋ ಹೊತ್ತು ತಂದಿದ್ದಾರೆ ಬಲ್ಲಾಳದೇವ.
ಅಮೆಜಾನ್ ಒಟಿಟಿಯಲ್ಲಿ ರಾಣಾ ದಗ್ಗುಬಾಟಿ ಟಾಕ್ ಶೋ ಒಂದನ್ನು ನಡೆಸಿಕೊಡಲಿದ್ದಾರೆ. ಅಮೆಜಾನ್ ಪ್ರೈಂನಲ್ಲಿ ಭಾರತದಲ್ಲಿ ಯಾವುದೇ ಟಾಕ್ ಶೋ ಬಂದಿರಲಿಲ್ಲ. ಇದೀಗ ರಾಣಾ ಮೂಲಕ ಅಮೆಜಾನ್, ಭಾರತದಲ್ಲಿ ಮೊದಲ ಟಾಕ್ ಶೋ ಆರಂಭ ಮಾಡಿದೆ. ತೆಲುಗು ಚಿತ್ರರಂಗ ಮಾತ್ರವೇ ಅಲ್ಲದೆ ಹಲವು ಚಿತ್ರರಂಗಗಳಲ್ಲಿ ಆತ್ಮೀಯ ಗೆಳೆಯರನ್ನು ಹೊಂದಿರುವ ರಾಣಾ ದಗ್ಗುಬಾಟಿ ತಮ್ಮ ಆತ್ಮೀಯ ಗೆಳೆಯರನ್ನೇ ಕರೆಸಿ ಟಾಕ್ ಶೋನಲ್ಲಿ ಮಾತು-ಕಥೆಯಾಡಲಿದ್ದಾರೆ. ಈ ಹಿಂದಿನ ಟಾಕ್ ಶೋಗಿಂತಲೂ ಭರಪೂರ ಮನೊರಂಜನೆ ಹೊಸ ಟಾಕ್ ಶೋನಲ್ಲಿ ಇರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರಜನಿಕಾಂತ್-ರಾಣಾ ದಗ್ಗುಬಾಟಿ ಒಟ್ಟಿಗೆ ನೋಡಲು ಹೋದ ಫ್ಯಾನ್ಸ್ಗೆ ನಿರಾಸೆ
ಆಹಾ ಒಟಿಟಿಗಾಗಿ ರಾಣಾ ದಗ್ಗುಬಾಟಿ ನಡೆಸಿಕೊಡುತ್ತಿದ್ದ ‘ನಂಬರ್ 1 ಯಾರಿ’ ಟಾಕ್ ಶೋ ಸಖತ್ ಜನಪ್ರಿಯತೆ ಗಳಿಸಿತ್ತು. ತಮ್ಮ ಚಿತ್ರರಂಗದ ಗೆಳೆಯರನ್ನೇ ಕರೆಸಿ ರಾಣಾ ಅವರೊಟ್ಟಿಗೆ ತಮಾಷೆಯಾಗಿ ಮಾತನಾಡುತ್ತಿದ್ದರು. ಕೆಲವು ಗೇಮ್ಗಳನ್ನು ಆಡುತ್ತಿದ್ದರು. ರಾಣಾರ ಚಿಕ್ಕಪ್ಪ ವೆಂಕಟೇಶ್, ಆತ್ಮೀಯ ಗೆಳೆಯ ನಾನಿ, ಸಹೋದರ ಸಂಬಂಧಿ ನಾಗ ಚೈತನ್ಯ, ನಂದಮೂರಿ ಬಾಲಕೃಷ್ಣ, ನಟಿ ಸಮಂತಾ, ರಕುಲ್ ಪ್ರೀತ್ ಸಿಂಗ್ ಇನ್ನೂ ಹಲವರನ್ನು ರಾಣಾ ದಗ್ಗುಬಾಟಿ ತಮ್ಮ ಶೋಗೆ ಕರೆಸಿದ್ದರು.
ಈಗ ಅಮೆಜಾನ್ಗಾಗಿ ಮಾಡುತ್ತಿರುವ ಟಾಕ್ ಶೋಗೆ ಪ್ರಭಾಸ್, ರಾಜಮೌಳಿ ಇನ್ನೂ ಕೆಲವು ಸ್ಟಾರ್ ನಟ-ನಟಿಯರನ್ನು ಅತಿಥಿಗಳನ್ನಾಗಿ ಕರೆಸುವ ಸಾಧ್ಯತೆ ಇದೆ. ಹಾಟ್ಸ್ಟಾರ್ನಲ್ಲಿ ಸ್ಟ್ರೀಂ ಆಗುತ್ತಿರುವ ಕಾಫಿ ವಿತ್ ಕರಣ್ ಶೋಗೆ ಬಹಳ ಒಳ್ಳೆಯ ವೀವರ್ಶಿಪ್ ಇದ್ದು, ರಾಣಾ ದಗ್ಗುಬಾಟಿಯ ಟಾಕ್ ಶೋ ಅದನ್ನು ಹಿಂದೆ ಹಾಕುತ್ತದೆಯೇ ಕಾದು ನೋಡಬೇಕಿದೆ. ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ತಮಿಳಿನ ‘ವೇಟ್ಟೈಯನ್’ ಸಿನಿಮಾದಲ್ಲಿ ರಾಣಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಕೆಲವು ಸಿನಿಮಾಗಳ ವಿತರಣೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ