ದಿನದಿಂದ ದಿನಕ್ಕೆ ಶಾರುಖ್ ಖಾನ್ (Shah Rukh Khan) ಅವರ ಬೇಡಿಕೆ ಹೆಚ್ಚಾಗುತ್ತಿದೆ. ‘ಪಠಾಣ್’ ಸಿನಿಮಾ ಬಳಿಕ ಅವರ ಚಾರ್ಮ್ ಹೆಚ್ಚಿದೆ. ಶಾರುಖ್ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರು ಕಾಯುತ್ತಿದ್ದಾರೆ. ಆದರೆ ಸಿನಿಮಾ ಒಪ್ಪಿಕೊಳ್ಳುವಲ್ಲಿ ಶಾರುಖ್ ಅವಸರ ಮಾಡುತ್ತಿಲ್ಲ. ಈಗ ಅವರು ನಿರ್ದೇಶಕ ರಾಜ್ಕುಮಾರ್ ಹಿರಾನಿ (Rajkumar Hirani) ಜೊತೆ ‘ಡಂಕಿ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಒಟಿಟಿ ರೈಟ್ಸ್ ಮಾರಾಟದ ಬಗ್ಗೆ ಒಂದು ಗಾಸಿಪ್ ಹರಿದಾಡುತ್ತಿದೆ. ‘ಬಾಲಿವುಡ್ ಹಂಗಾಮಾ’ ವರದಿ ಮಾಡಿರುವ ಪ್ರಕಾರ ಶೂಟಿಂಗ್ ಮುಗಿಯುವುದಕ್ಕೂ ಮುನ್ನವೇ ‘ಡಂಕಿ’ (Dunki Movie) ಚಿತ್ರದ ಒಟಿಟಿ ಹಕ್ಕುಗಳು ಸೇಲ್ ಆಗಿವೆ. ಅದು ಕೂಡ ಬರೋಬ್ಬರಿ 155 ಕೋಟಿ ರೂಪಾಯಿಗೆ ಎಂದು ಹೇಳಲಾಗುತ್ತಿದೆ.
ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಹೆಚ್ಚಿದೆ. ಪ್ರೇಕ್ಷಕರಿಗೆ ಹೊಸ ಸಿನಿಮಾಗಳನ್ನು ನೀಡಲು ‘ಜಿಯೋ ಸಿನಿಮಾ’ ಸಂಸ್ಥೆ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಚಿತ್ರದ ಒಟಿಟಿ ಹಕ್ಕುಗಳು ಈ ಸಂಸ್ಥೆಯ ಪಾಲಾಗಿದೆ ಎಂಬ ಮಾತು ಕೇಳಿಬಂದಿದೆ. 155 ಕೋಟಿ ರೂಪಾಯಿ ನೀಡಿ ಒಟಿಟಿ ಪ್ರಸಾರ ಹಕ್ಕುಗಳನ್ನು ಖರೀದಿಸಲಾಗಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯಕ್ಕೆ ಇದು ಅಂತೆ-ಕಂತೆಗಳ ಹಂತದಲ್ಲೇ ಇದೆ.
ಇದನ್ನೂ ಓದಿ: ಅಪಘಾತದ ವದಂತಿ ಬೆನ್ನಲ್ಲೇ ಶಾರುಖ್ ಖಾನ್ ಬಗ್ಗೆ ಇನ್ನೊಂದು ಗಾಸಿಪ್; ಕೂಡಲೇ ಸ್ಪಷ್ಟನೆ ನೀಡಿದ ಕರಣ್ ಜೋಹರ್
ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕ್ಲಾಸ್ ಸಿನಿಮಾಗಳನ್ನು ಮಾಡಿ ಅವರು ಅಪಾರ ಖ್ಯಾತಿ ಗಳಿಸಿದ್ದಾರೆ. ‘ಮುನ್ನಾಭಾಯ್ ಎಂಬಿಬಿಎಸ್’, ‘3 ಈಡಿಯಟ್ಸ್’, ‘ಪಿಕೆ’, ‘ಸಂಜು’ ಚಿತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಮೊದಲ ಬಾರಿಗೆ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ರಾಜ್ಕುಮಾರ್ ಹಿರಾನಿ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.
ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ; ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು
ಈ ವರ್ಷ ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಒಟಿಟಿ ಡೀಲ್ ಈಗಲೇ ಮುಗಿದಿದೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಇನ್ನು, ನಿರ್ದೇಶಕ ಅಟ್ಲಿ ಜೊತೆ ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ‘ಜವಾನ್’ ಕೂಡ ಭರ್ಜರಿ ಕಮಾಯಿ ಮಾಡುವ ಸೂಚನೆ ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.