‘ಸ್ಕ್ವಿಡ್ ಗೇಮ್ಸ್’ ರಿಯಾಲಿಟಿ ಶೋ: ಗೆದ್ದವರಿಗೆ 37 ಕೋಟಿ ಬಹುಮಾನ

|

Updated on: Sep 24, 2023 | 9:29 AM

Squid Games: ಕೊರಿಯನ್ ವೆಬ್ ಸರಣಿ ಸ್ಕ್ವಿಡ್ ಗೇಮ್ ಮಾದರಿಯಲ್ಲಿಯೇ ನಿಜವಾದ ರಿಯಾಲಿಟಿ ಶೋ ಅನ್ನು ನೆಟ್​​ಫ್ಲಿಕ್ಸ್ ಆಯೋಜಿಸಿದ್ದು, ಗೆದ್ದವರಿಗೆ ಬರೋಬ್ಬರಿ 37 ಕೋಟಿ ಬಹುಮಾನ ನೀಡಲಾಗುತ್ತಿದೆ. ಸ್ಕ್ವಿಡ್ ಗೇಮ್ಸ್​ನಲ್ಲಿ ಇದ್ದ ಆಟಗಳೇ ರಿಯಾಲಿಟಿ ಶೋನಲ್ಲಿಯೂ ಇರಲಿವೆ.

ಸ್ಕ್ವಿಡ್ ಗೇಮ್ಸ್ ರಿಯಾಲಿಟಿ ಶೋ: ಗೆದ್ದವರಿಗೆ 37 ಕೋಟಿ ಬಹುಮಾನ
ಸ್ಕ್ವಿಡ್ ಗೇಮ್
Follow us on

ಒಟಿಟಿ ಜಗತ್ತಿನಲ್ಲಿ ಹಲ್​ಚಲ್ ಎಬ್ಬಿಸಿತ್ತು ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿ (Web Series). 2021ರಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆದ ಈ ಕೊರಿಯನ್ ವೆಬ್ ಸರಣಿ ವೀಕ್ಷಣೆ ವಿಷಯದಲ್ಲಿ ಹಲವು ದಾಖಲೆಗಳನ್ನು ಬರೆಯಿತು. ನೆಟ್​ಫ್ಲಿಕ್ಸ್​ ಪಾಲಿಗೆ ಆ ವರ್ಷದ ಚಿನ್ನದ ಕೋಳಿಯಾಗಿತ್ತು. ಹಲವು ದಾಖಲೆಗಳನ್ನು ಬರೆದ ಈ ವೆಬ್ ಸರಣಿ ಆಧಾರವಾಗಿದ್ದಿದ್ದು ಮಕ್ಕಳು ಆಡುವ ಆಟಗಳ ಬಗ್ಗೆ. ಮಕ್ಕಳು ಆಡುವ ಆಟಗಳನ್ನೇ ದೊಡ್ಡವರಿಗೆ ಆಡಿಸಿ, ಸೋತವರನ್ನು ನಿರ್ದಯವಾಗಿ ಕೊಂದು ಬಿಡುವುದು ಈ ಆಟದ ‘ವಿಶೇಷತೆ’. ಅಂತಿಮವಾಗಿ ಉಳಿದವರಿಗೆ ಭಾರಿ ದೊಡ್ಡ ಮೊತ್ತದ ಬಹುಮಾನ.

ಈ ವೆಬ್ ಸರಣಿ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ವೆಬ್ ಸರಣಿಯ ಎರಡನೇ ಭಾಗ ನಿರ್ಮಾಣ ಮಾಡುವ ಬಗ್ಗೆ ಘೋಷಣೆ ಆಗಿದ್ದು ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದೆ. ಇದರ ನಡುವೆ, ನೆಟ್​ಫ್ಲಿಕ್ಸ್ ‘ಸ್ವಿಡ್ ಗೇಮ್ಸ್’ ಹೆಸರಿನಲ್ಲಿ ವೆಬ್ ಸರಣಿ ಮಾದರಿಯಲ್ಲಿಯೇ ನಿಜವಾದ ರಿಯಾಲಿಟಿ ಶೋ ಪ್ರಾರಂಭ ಮಾಡಿದೆ.

ಹೌದು, ‘ಸ್ಕ್ವಿಡ್ ಗೇಮ್ಸ್’ ನ ಮಾದರಿಯಲ್ಲಿಯೇ ಆಟಗಳನ್ನು ಆಡಿಸುವ ನಿಜವಾದ ರಿಯಾಲಿಟಿ ಶೋ ಅನ್ನು ನೆಟ್​ಫ್ಲಿಕ್ಸ್ ಪ್ರಾರಂಭ ಮಾಡಿದೆ. ‘ಸ್ಕ್ವಿಡ್ ಗೇಮ್ಸ್’ ವೆಬ್ ಸರಣಿಯಲ್ಲಿ ಆಡಿಸಲಾಗಿದ್ದ ಆಟಗಳನ್ನೇ ಈ ರಿಯಾಲಿಟಿ ಶೋನಲ್ಲಿಯೂ ಆಡಿಸಲಾಗಿದೆ. ವೆಬ್ ಸರಣಿಯಲ್ಲಿ ಇದ್ದ ಮಾದರಿಯಲ್ಲಿಯೇ ಆಟಗಾರರಿಗೆ ಸಮವಸ್ತ್ರ, ಅಲ್ಲಿನ ಕಾವಲುಗಾರರಿಗೆ ಸಮವಸ್ತ್ರ ತೊಡಿಸಲಾಗಿದೆ. ವೆಬ್ ಸರಣಿಯಲ್ಲಿದ್ದಂತೆ ಛಾವಣಿಗೆ ನೇತುಹಾಕಲಾದ ದೊಡ್ಡ ಗಾಜಿನ ಗೋಳದಲ್ಲಿ 37 ಕೋಟಿ ರೂಪಾಯಿ ನಗದು ಹಣವನ್ನು ಇರಿಸಲಾಗಿದೆ. ರಿಯಾಲಿಟಿ ಶೋನಲ್ಲಿ ಯಾರು ಗೆಲ್ಲುತ್ತಾರೊ ಅವರಿಗೆ ಆ 37 ಕೋಟಿ ರೂಪಾಯಿ ಸೇರುತ್ತದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಕುರಿತು ವೆಬ್ ಸರಣಿ: ಮನವಿ ಮಾಡಿದ ಪವನ್​ ಮಾಜಿ ಪತ್ನಿ

ರಿಯಾಲಿಟಿ ಶೋಗೆ ‘ಸ್ಕ್ವಿಡ್ ಗೇಮ್ಸ್: ದಿ ಚಾಲೆಂಜ್’ ಎಂದು ಹೆಸರಿಡಲಾಗಿದ್ದು, ರಿಯಾಲಿಟಿ ಶೋನ ಚಿತ್ರೀಕರಣ ಬಹುತೇಕ ಮುಗಿದಿದೆ. ಶೋನ ಸ್ಟ್ರೀಮಿಂಗ್ ನವೆಂಬರ್ 22ರಿಂದ ಆರಂಭವಾಗಲಿದೆ. ವೆಬ್ ಸರಣಿಯಲ್ಲಿ ಕೊರಿಯನ್ ಪ್ರಜೆಗಳು ಆಟಗಳಲ್ಲಿ ಭಾಗವಹಿಸಿದ್ದರು, ಆದರೆ ನೆಟ್​ಫ್ಲಿಕ್ಸ್​ನ ರಿಯಾಲಿಟಿ ಶೋನಲ್ಲಿ ಬಹುತೇಕ ಅಮೆರಿಕ ಮಂದಿಯೇ ಆಟಗಾರರಾಗಿ ಭಾಗವಹಿಸಿದ್ದಾರೆ. ವೆಬ್ ಸರಣಿಯಲ್ಲಿ ಆಟದಲ್ಲಿ ಸೋಲುವವರನ್ನು ಕೊಲ್ಲಲಾಗುತ್ತದೆ. ಆದರೆ ರಿಯಾಲಿಟಿ ಶೋನಲ್ಲಿ ಆ ರೀತಿ ಇರುವುದಿಲ್ಲ. ಬದಲಿಗೆ ಸೋತವರು ಆಟದಿಂದ ಹೊರಗೆ ಹೋಗಬೇಕಾಗುತ್ತದೆಯಷ್ಟೆ.

‘ಸ್ಕ್ವಿಡ್ ಗೇಮ್ಸ್’ 2 ಅನ್ನು 2022ರಲ್ಲಿಯೇ ಘೋಷಣೆ ಮಾಡಲಾಗಿದೆ. ‘ಸ್ಕ್ವಿಡ್ ಗೇಮ್ಸ್ 2’ ವೆಬ್ ಸರಣಿಯ ಮೊದಲ ಟೇಬಲ್ ರೀಡಿಂಗ್ ಇದೇ ವರ್ಷದ ಜೂನ್ ತಿಂಗಳಲ್ಲಿ ನಡೆದಿದ್ದು, ಇತ್ತೀಚೆಗಷ್ಟೆ ವೆಬ್ ಸರಣಿಯ ಚಿತ್ರೀಕರಣ ಆರಂಭವಾಗಿದೆ. ‘ಸ್ಕ್ವಿಡ್ ಗೇಮ್ಸ್ 2’ ವೆಬ್ ಸರಣಿ 2024ರ ಅಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:30 am, Sun, 24 September 23