
ಸದ್ಯ ಬಯೋಪಿಕ್ (Biopic) ಟ್ರೆಂಡ್ ಜೋರಾಗಿದೆ. ಸಾಧನೆ ಮಾಡಿ ಇತಿಹಾಸ ಪುಟ ಸೇರಿದವರ ಕುರಿತು ಬಯೋಪಿಕ್ ಮಾಡಲಾಗುತ್ತಿದೆ. ಇದರಿಂದ ನಿರ್ಮಾಪಕರ ಜೇಬು ತುಂಬುತ್ತಿದೆ. ‘ಸಂಜು’ (Sanju Movie) ಸೇರಿದಂತೆ ಅನೇಕ ಬಯೋಪಿಕ್ಗಳು ಹಿಟ್ ಆಗಿವೆ. ಈಗ ನಿರ್ಮಾಣ ಸಂಸ್ಥೆಗಳಾದ ಟೀ-ಸಿರೀಸ್ ಫಿಲ್ಮ್ಸ್ ಹಾಗೂ ಆಲ್ಮ್ಲೈಟ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ಉದ್ಯಮಿ ರತನ್ ಟಾಟಾ ಹಾಗೂ ಅವರ ಕುಟುಂಬದವರ ಕಥೆ ಹೇಳಲು ಹೊರಟಿದೆ. ಈ ಬಗ್ಗೆ ಟೀ-ಸಿರೀಸ್ (T-Series) ಕಡೆಯಿಂದ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.
ಟಾಟಾ ಕುಟುಂಬ ಉದ್ಯಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ತುಂಬಾನೇ ದೊಡ್ಡದು. ದುಡಿದ ಹಣದಲ್ಲಿ ಸಾಕಷ್ಟು ಮೊತ್ತವನ್ನು ಈ ಕುಟುಂಬ ಸಾಮಾಜಿಕ ಕೆಲಸಕ್ಕೆ ಮೀಸಲಿಟ್ಟಿದೆ. ಈ ಮೂಲಕ ಅನೇಕರಿಗೆ ಮಾದರಿ ಆಗಿದೆ. ಪತ್ರಕರ್ತ ಗಿರೀಶ್ ಕುಬೇರ್ ಅವರು ‘ದಿ ಟಾಟಾಸ್: ಹವ್ ಎ ಫ್ಯಾಮಿಲಿ ಬಿಲ್ಟ್ ಎ ಬಿಸ್ನೆಸ್ ಆ್ಯಂಡ್ ನೇಷನ್’ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಆಧರಿಸಿ ಸಿನಿಮಾ ಮಾಡಲು ಟೀ-ಸಿರೀಸ್ ಫಿಲ್ಮ್ಸ್ ಹಾಗೂ ಆಲ್ಮ್ಲೈಟ್ ಮೋಷನ್ ಪಿಕ್ಚರ್ಸ್ ಹಕ್ಕುಗಳನ್ನು ಪಡೆದಿದೆ.
ಈ ಬಗ್ಗೆ ಟೀ-ಸಿರೀಸ್ ಘೋಷಣೆ ಮಾಡಿದೆ. ‘ಮೂರು ತಲೆಮಾರುಗಳ ಕಾಲ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಟಾಟಾ ಫ್ಯಾಮಿಲಿ ಸಹಕಾರಿಯಾಗಿದೆ. ಈ ಕುಟುಂಬದ ಸಿನಿಮಾ ಮಾಡುವ ಹಕ್ಕನ್ನು ನಾವು ಪಡೆದಿದ್ದೇವೆ’ ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ: ಒಟಿಟಿಯಲ್ಲೂ ದಾಖಲೆ ಬರೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಒಂದು ವಾರಕ್ಕೆ ಆದ ವೀಕ್ಷಣೆ ಎಷ್ಟು?
ಹರ್ಷದ್ ಮೆಹ್ತಾ ಸೇರಿ ಅನೇಕರ ಜೀವನ ಕಥೆ ವೆಬ್ ಸಿರೀಸ್ ರೀತಿಯಲ್ಲಿ ಮೂಡಿ ಬಂದಿದೆ. ಇದು ದೊಡ್ಡ ಮಟ್ಟದಲ್ಲಿ ಯಶಸ್ಸು ಕೂಡ ಪಡೆಯಿತು. ಈಗ ಟಾಟಾ ಫ್ಯಾಮಿಲಿಯ ಕಥೆಯನ್ನು ತುಂಬಾನೇ ವಿಸ್ತ್ರತವಾಗಿ ಹೇಳಬೇಕಾಗಿದ್ದರಿಂದ ವೆಬ್ ಸರಣಿ ರೂಪದಲ್ಲಿ ಇದು ಮೂಡಿ ಬರುವುದು ಬಹುತೇಕ ಖಚಿತವಾಗಿದೆ. ಕೆಲ ಒಟಿಟಿ ಪ್ಲಾಟ್ಫಾರ್ಮ್ಗಳು ಟಾಟಾ ಕುಟುಂಬದ ಬಗ್ಗೆ ಸಿನಿಮಾ ಮಾಡಲು ಆಸಕ್ತಿ ತೋರಿಸಿವೆ ಎಂದು ಈ ಮೊದಲು ವರದಿ ಆಗಿತ್ತು.
ಮೂರು ಸೀಸನ್ನಲ್ಲಿ ಟಾಟಾ ಫ್ಯಾಮಿಲಿ ಕಥೆ:
‘ನಮ್ಮ ಸಮುದಾಯದ ನಿರ್ಮಾಣಕ್ಕೆ ಟಾಟಾ ಕುಟುಂಬವು ಹೇಗೆ ಕೊಡುಗೆ ನೀಡಿದೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಇದಾಗಿದೆ. ಟಾಟಾ ಕುಟುಂಬ ವ್ಯಾಪಾರ ಕ್ಷೇತ್ರದಲ್ಲಿ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವಲ್ಲಿ ಮಾತ್ರ ಪ್ರಯತ್ನ ನಡೆಸಿಲ್ಲ. ರಾಷ್ಟ್ರ ನಿರ್ಮಾಣದಲ್ಲೂ ಅವರ ಕೊಡುಗೆ ಇದೆ. ಈ ಕುರಿತೂ ಬೆಳಕು ಚೆಲ್ಲಲಾಗುತ್ತದೆ. ರತನ್ ಟಾಟಾ ಕುರಿತು ಮಾತ್ರವಲ್ಲದೆ, ಇಡೀ ಕುಟುಂಬದ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ’ ಎಂದು ಆಲ್ಮ್ಲೈಟ್ ಮೋಷನ್ ಪಿಕ್ಚರ್ಸ್ಗೆ ಸಂಬಂಧಿಸಿದವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.