ಈ ವರ್ಷ ತೆರೆಕಂಡ ಸಿನಿಮಾಗಳ ಪೈಕಿ ಅತಿ ಹೆಚ್ಚು ಚರ್ಚೆ ಹುಟ್ಟುಹಾಕಿದ ಚಿತ್ರ ಎಂದರೆ ಅದು ‘ದಿ ಕೇರಳ ಸ್ಟೋರಿ’. ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಆ್ಯಕ್ಷನ್-ಕಟ್ ಹೇಳಿದ ಈ ಸಿನಿಮಾದಲ್ಲಿ ಒಂದಷ್ಟು ವಿವಾದಾತ್ಮಕ ಅಂಶವನ್ನು ತೋರಿಸಲಾಗಿದೆ. ನಟಿ ಅದಾ ಶರ್ಮಾ ಅವರಿಗೆ ಈ ಚಿತ್ರದಿಂದ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ. ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಅವರು ಭಾರಿ ಲಾಭ ಮಾಡಿಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ 242 ಕೋಟಿ ರೂಪಾಯಿ ಕಮಾಯಿ ಮಾಡಿ ಬೀಗಿದೆ. ಸಣ್ಣ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಈ ಪರಿ ಕಲೆಕ್ಷನ್ ಮಾಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಈಗ ಒಂದು ಶಾಕಿಂಗ್ ನ್ಯೂಸ್ ಕೇಳಿಬಂದಿದೆ. ಇಷ್ಟೆಲ್ಲ ಸದ್ದು ಮಾಡಿದ ಸಿನಿಮಾವನ್ನು ಕೊಂಡುಕೊಳ್ಳಲು ಯಾವುದೇ ಒಟಿಟಿ (OTT) ಸಂಸ್ಥೆ ಕೂಡ ಮುಂದೆ ಬರುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ‘ಬಾಲಿವುಡ್ ಹಂಗಾಮಾ’ ವರದಿ ಮಾಡಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾಗೆ ಯಾವುದೇ ಒಟಿಟಿ ಸಂಸ್ಥೆಯಿಂದ ಬೇಡಿಕೆ ಬಂದಿಲ್ಲ ಎಂಬ ಸುದ್ದಿ ಕೇಳಿ ಸಿನಿಪ್ರಿಯರಿಗೆ ಅಚ್ಚರಿ ಆಗಿದೆ. ಈ ರೀತಿ ಆಗಿದ್ದಕ್ಕೆ ಮೂವೀ ಮಾಫಿಯಾ ಕಾರಣ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಯಶಸ್ಸನ್ನು ಸಹಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗಿಲ್ಲ. ಅಂಥವರೆಲ್ಲ ಒಟ್ಟಾಗಿ ಒಟಿಟಿ ಸಂಸ್ಥೆಗಳಿಗೆ ಚಾಡಿ ಹೇಳಿದ್ದಾರೆ. ಹಾಗಾಗಿ ಯಾರೂ ಕೂಡ ಈ ಸಿನಿಮಾವನ್ನು ಖರೀದಿಸಲು ಸಿದ್ಧರಿಲ್ಲ. ಈ ಬಗ್ಗೆ ಚಿತ್ರತಂಡದವರು ವಿಚಾರಿಸಿದಾಗ, ‘ರಾಜಕೀಯವಾಗಿ ಕಾಂಟ್ರವರ್ಸಿ ಹೊಂದಿರುವ ಚಿತ್ರ ನಮಗೆ ಬೇಡ’ ಎಂಬ ಉತ್ತರ ಒಟಿಟಿ ಸಂಸ್ಥೆಗಳ ಕಡೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Vipul Shah: ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡೋದು ನಿಲ್ಲಿಸಿದ್ದೇಕೆ ‘ದಿ ಕೇರಳ ಸ್ಟೋರಿ’ ನಿರ್ಮಾಪಕ? ಬಯಲಾಯ್ತು ಸತ್ಯ
ಒಟಿಟಿಗಳಿಂದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಸಖತ್ ಡಿಮ್ಯಾಂಡ್ ಬಂದಿದೆಯಂತೆ, ಪ್ರಸಾರ ಹಕ್ಕುಗಳು ಅಷ್ಟಕ್ಕೆ ಸೇಲ್ ಆಯ್ತಂತೆ, ಈ ದಿನಾಂಕದಿಂದ ಸ್ಟ್ರೀಮಿಂಗ್ ಆರಂಭ ಆಗಲಿದೆಂತೆ, ಅದಂತೆ, ಇದಂತೆ ಅಂತ ಹಲವಾರು ಸುದ್ದಿಗಳು ಹರಿದಾಡಿವೆ. ಆದರೆ ಅದೆಲ್ಲವೂ ಶುದ್ಧ ಸುಳ್ಳು ಎಂದು ಸ್ವತಃ ನಿರ್ದೇಶಕ ಸುದೀಪ್ತೋ ಸೇನ್ ಅವರೇ ‘ಬಾಲಿವುಡ್ ಹಂಗಾಮಾ’ಗೆ ತಿಳಿಸಿದ್ದಾರೆ. ಒಟಿಟಿ ಸಂಸ್ಥೆಗಳು ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ತಿರಸ್ಕರಿಸಿದ್ದಕ್ಕೆ ಬಾಲಿವುಡ್ನ ಕೆಲವರ ಷಡ್ಯಂತ್ರ ಕಾರಣ ಎಂದು ಸುದೀಪ್ತೋ ಸೇನ್ ಭಾವಿಸಿದ್ದಾರೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ ಅಂಥ ಸಿನಿಮಾಗಳನ್ನು ಜನರು ನೋಡಬೇಕು’; ಅಚ್ಚರಿಯ ಹೇಳಿಕೆ ನೀಡಿದ ಕಮಲ್ ಹಾಸನ್
ಕೇರಳದಲ್ಲಿ ನಡೆದಿತ್ತು ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಪ್ರಕರಣಗಳನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಲು ಸಾಧ್ಯವಾಗದೇ ಇರುವವರು ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದಾರೆ. ಆದರೆ ಹಲವು ಕಾರಣಗಳಿಂದಾಗಿ ಇದರ ಒಟಿಟಿ ರಿಲೀಸ್ ತಡವಾಗುತ್ತಿದೆ. ‘ಯಾವ ಒಟಿಟಿ ಸಂಸ್ಥೆಗಳಿಂದಲೂ ನಮಗೆ ಒಳ್ಳೆಯ ಆಫರ್ ಬಂದಿಲ್ಲ’ ಎಂದು ಚಿತ್ರತಂಡದವರೇ ಹೇಳಿರುವುದರಿಂದ ಪ್ರೇಕ್ಷಕರಿಗೆ ನಿರಾಸೆ ಆಗಿದೆ. ಇನ್ನೂ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.