Vipul Shah: ಅಕ್ಷಯ್ ಕುಮಾರ್ ಜತೆ ಸಿನಿಮಾ ಮಾಡೋದು ನಿಲ್ಲಿಸಿದ್ದೇಕೆ ‘ದಿ ಕೇರಳ ಸ್ಟೋರಿ’ ನಿರ್ಮಾಪಕ? ಬಯಲಾಯ್ತು ಸತ್ಯ
Akshay Kumar: ಅಕ್ಷಯ್ ಕುಮಾರ್ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್ ಅಮೃತ್ಲಾಲ್ ಶಾ ಕೂಡ ಇದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ತುಂಬ ಬೇಡಿಕೆ ಇದೆ. ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಸತತ ಸೋಲು ಉಂಟಾಗುತ್ತಿದೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬುದು ನಿಜ. ಅವರು ಮಾಡಿದ ಎಲ್ಲ ಸಿನಿಮಾಗಳೂ ಹೀನಾಯವಾಗಿ ಸೋಲುತ್ತಿವೆ. ‘ಸೆಲ್ಫೀ’, ‘ರಕ್ಷಾ ಬಂಧನ್’, ‘ಸಾಮ್ರಾಜ್ ಪೃಥ್ವಿರಾಜ್’ ಸೇರಿದಂತೆ ಹಲವು ಸಿನಿಮಾಗಳು ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಾಗದೇ ನೆಲ ಕಚ್ಚಿದವು. ಈಗ ಅವರ ಜೊತೆ ಕೆಲಸ ಮಾಡಲು ಕೆಲವು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಅಂಥ ನಿರ್ಮಾಪಕರ ಸಾಲಿನಲ್ಲಿ ವಿಪುಲ್ ಅಮೃತ್ಲಾಲ್ ಶಾ (Vipul Amrutlal Shah) ಕೂಡ ಇದ್ದಾರೆ. ‘ದಿ ಕೇರಳ ಸ್ಟೋರಿ’ (The Kerala Story) ನಿರ್ಮಾಣ ಮಾಡಿ ದೊಡ್ಡ ಗೆಲುವು ಕಂಡಿರುವ ವಿಪುಲ್ ಶಾ ಅವರು ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದ್ದಾರೆ.
ನಿರ್ದೇಶಕನಾಗಿಯೂ ವಿಪುಲ್ ಶಾ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಮತ್ತು ವಿಪುಲ್ ಶಾ ಅವರ ಒಟ್ಟಾಗಿ ಹಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರಿಂದ ವಿಪುಲ್ ಶಾ ಅಂತರ ಕಾಯ್ದುಕೊಂಡರು. ಇಂಥ ಸಂದರ್ಭಗಳಲ್ಲಿ ಗಾಸಿಪ್ ಹಬ್ಬುವುದು ಸಹಜ. ಇವರಿಬ್ಬರ ನಡುವೆ ಏನೋ ವೈಮನಸ್ಸು ಉಂಟಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡರು. ತಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ವಿಪುಲ್ ಶಾ ಅವರು ಈಗ ವಿವರಿಸಿದ್ದಾರೆ. ಆ ಮೂಲಕ ಅವರು ಸತ್ಯ ಏನೆಂಬುದನ್ನು ತಿಳಿಸಿದ್ದಾರೆ.
ಇದನ್ನೂ ಓದಿ: Akshay Kumar: ಜಾಮಾ ಮಸೀದಿ ಬಳಿ ಕಾಣಿಸಿಕೊಂಡ ಅಕ್ಷಯ್ ಕುಮಾರ್; ಸುತ್ತುವರಿದ ಅಭಿಮಾನಿಗಳು
‘ಆ ಕಾಲದಲ್ಲಿ ನಾವು ಸತತವಾಗಿ ಒಟ್ಟಿಗೆ ಸಿನಿಮಾ ಮಾಡಿದ್ದೆವು. ಬೇರೆ ನಟರ ಜೊತೆಗೂ ನಾನು ಸಿನಿಮಾ ಮಾಡಬೇಕು ಅಂತ ನನಗೆ ಅನಿಸಿತು. ಅದು ನನಗೆ ಮಾತ್ರವಲ್ಲದೇ ಅಕ್ಷಯ್ ಕುಮಾರ್ ಅವರಿಗೂ ಸರಿ ಎನಿಸಿತು. ಆಗ ನಾನು ಬೇರೆಯವರ ಜೊತೆ ಸಿನಿಮಾ ಮಾಡಿದೆ. ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ. ನಾನು ಯಾರೊಂದಿಗೂ ಜಗಳ ಆಡುವುದಿಲ್ಲ. ನಾನು ಸ್ನೇಹಜೀವಿ. ಇಡೀ ವೃತ್ತಿಬದುಕಿನಲ್ಲಿ ಯಾರ ಜೊತೆಗೂ ಜಗಳ ಮಾಡಿಕೊಂಡಿಲ್ಲ’ ಎಂದು ವಿಪುಲ್ ಶಾ ಹೇಳಿದ್ದಾರೆ.
ಇದನ್ನೂ ಓದಿ: Oh My God 2: ಶಿವನ ವೇಷದಲ್ಲಿ ಢಮರುಗ ಹಿಡಿದು ಬಂದ ಅಕ್ಷಯ್ ಕುಮಾರ್; ಆಗಸ್ಟ್ 11ಕ್ಕೆ ‘ಓಹ್ ಮೈ ಗಾಡ್ 2’ ಬಿಡುಗಡೆ
ಈಗ ನಿರ್ದೇಶನಕ್ಕಿಂತಲೂ ನಿರ್ಮಾಪಕನಾಗಿ ವಿಪುಲ್ ಶಾ ಅವರು ಬ್ಯುಸಿ ಆಗಿದ್ದಾರೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಮಾಡಿದ ಸಾಧನೆ ದೊಡ್ಡದು. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಬರೋಬ್ಬರಿ 241 ಕೋಟಿ ರೂಪಾಯಿ ಗಳಿಸಿದ್ದು ಅಚ್ಚರಿಯೇ ಸರಿ. ಕೇರಳದಲ್ಲಿ ನಡೆದಿತ್ತು ಎನ್ನಲಾದ ಲವ್ ಜಿಹಾದ್ ಮತ್ತು ಮತಾಂತರದ ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ವಿಪುಲ್ ಅಮೃತ್ಲಾಲ್ ಶಾ ಕೆಲಸ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.