‘ಕಾಂತಾರ 1’ ಬೇಗನೆ ಒಟಿಟಿಗೆ ಬರಲು ಕಾರಣವೇನು? ವಿವರಿಸಿದ ನಿರ್ಮಾಪಕ

Kantara Chapter 1 OTT release: ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳನ್ನು ಒಟಿಟಿಗೆ ಬಿಡುಗಡೆ ಮಾಡುವುದಿಲ್ಲ, ಒಟಿಟಿಗೆ ಬಂದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಮಾಡುವುದಿಲ್ಲ. ಆದರೆ ಇದೀಗ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಬಲು ಶೀಘ್ರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಕಾರಣವನ್ನು ನಿರ್ಮಾಪಕರೇ ವಿವರಿಸಿದ್ದಾರೆ.

‘ಕಾಂತಾರ 1’ ಬೇಗನೆ ಒಟಿಟಿಗೆ ಬರಲು ಕಾರಣವೇನು? ವಿವರಿಸಿದ ನಿರ್ಮಾಪಕ
Kantara Hombale

Updated on: Nov 02, 2025 | 8:31 PM

ಚಿತ್ರಮಂದಿರಗಳಲ್ಲಿ (Theater) ಚೆನ್ನಾಗಿ ಓಡುತ್ತಿರುವ ಸಿನಿಮಾಗಳನ್ನು ಒಟಿಟಿಗೆ ಬಿಡುಗಡೆ ಮಾಡುವುದಿಲ್ಲ. ಸಿನಿಮಾ ಬೇಗ ಒಟಿಟಿ ಬಂದರೆ ಚಿತ್ರಮಂದಿರಗಳಿಂದ ನಿರ್ಮಾಪಕರಿಗೆ ಬರುವ ಲಾಭ ನಿಂತು ಹೋಗುತ್ತದೆ. ಇದೇ ಕಾರಣಕ್ಕೆ ಚೆನ್ನಾಗಿ ಓಡುವ ಸಿನಿಮಾಗಳನ್ನು ಉದ್ದೇಶಪೂರ್ವಕವಾಗಿ ತಡವಾಗಿ ಒಟಿಟಿಗೆ ತರಲಾಗುತ್ತದೆ. ಆದರೆ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಪ್ರದರ್ಶನ ಕಾಣುತ್ತಿದ್ದರೂ ಸಹ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಬಿಡುಗಡೆಗೆ ಒಂದು ತಿಂಗಳಾಗುವ ಮುಂಚೆಯೇ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಹಲವರಿಗೆ ಆಶ್ಚರ್ಯ ತಂದಿದೆ. ಆದರೆ ಹೀಗೆ ಮಾಡಿದ್ದೇಕೆ ಎಂಬುದನ್ನು ಸ್ವತಃ ನಿರ್ಮಾಪಕರು ಉತ್ತರಿಸಿದ್ದಾರೆ.

ಹೊಂಬಾಳೆ ನಿರ್ಮಾಣ ಸಂಸ್ಥೆಯಲ್ಲಿ ಸಹ ನಿರ್ಮಾಪಕರಾಗಿರುವ ಚೆಲುವೇ ಗೌಡ ಅವರು ಈ ಬಗ್ಗೆ ಹಿಂದಿ ಮಾಧ್ಯಮದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ‘ಮೂರು ವರ್ಷಗಳ ಹಿಂದೆ ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಲೇ ನಮಗೂ ಹಾಗೂ ಅಮೆಜಾನ್ ಪ್ರೈಂಗೂ ಒಪ್ಪಂದ ಆಗಿತ್ತು, ನಾಲ್ಕು ವಾರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು, ಅದೇ ಕಾರಣಕ್ಕೆ ನಾವು ನಾಲ್ಕು ವಾರಗಳಲ್ಲಿಯೇ ಸಿನಿಮಾ ಅನ್ನು ಒಟಿಟಿಗೆ ಬಿಡುಗಡೆ ಮಾಡಿದೆವು’ ಎಂದಿದ್ದಾರೆ.

‘ಆದರೆ ಈಗ ಒಟಿಟಿಗೆ ಬಿಡುಗಡೆ ಮಾಡಿರುವುದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ವರ್ಷನ್​​ಗಳು ಮಾತ್ರ. ಹಿಂದಿ, ಇಂಗ್ಲೀಷ್ ಆವೃತ್ತಿಗಳ ಬಿಡುಗಡೆ ಮಾಡಲಾಗಿಲ್ಲ. ಅವುಗಳನ್ನು ಎಂಟು ವಾರದ ಬಳಿಕ ಬಿಡುಗಡೆ ಮಾಡಲಾಗುತ್ತದೆ. ನಾವು ಮುಂಚಿತವಾಗಿ ಒಪ್ಪಂದ ಮಾಡಿ ಕೊಂಡಿದ್ದವೆಂದು ಮುಂಚಿತವಾಗಿಯೇ ಬಿಡುಗಡೆ ಮಾಡಿದೆವು, ಒಪ್ಪಂದಕ್ಕೆ ನಾವು ಗೌರವ ನೀಡಿದೆವು’ ಎಂದಿದ್ದಾರೆ ಚೆಲುವೇ ಗೌಡ.

ಇದನ್ನೂ ಓದಿ:ನೂರಾರು ಕೋಟಿ ಖರ್ಚು, ಕನ್ನಡವೇ ಸರಿಯಿಲ್ಲ: ‘ಕಾಂತಾರ 1’ ಬಗ್ಗೆ ಅಸಮಾಧಾನ

ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ದೊಡ್ಡ ಸಿನಿಮಾಗಳು ಸಹ ಕೇವಲ ನಾಲ್ಕು ವಾರಕ್ಕೆ ಒಟಿಟಿಗೆ ಬರುತ್ತಿವೆ. ‘ಕೂಲಿ’ ಸಿನಿಮಾ ಸಹ ನಾಲ್ಕು ವಾರಕ್ಕೆ ಒಟಿಟಿಗೆ ಬಂತು. ಪ್ರತಿ ಸಿನಿಮಾದೊಂದಿಗೂ ಒಟಿಟಿಯ ಒಪ್ಪಂದ ಬೇರೆ ಬೇರೆ ರೀತಿಯಾಗಿರುತ್ತದೆ. ಕೆಲ ಸಿನಿಮಾಗಳು ನಾಲ್ಕು ವಾರಕ್ಕೆ ಕೆಲ ಸಿನಿಮಾಗಳು ಆರು ಕೆಲ ಸಿನಿಮಾಗಳ ಜೊತೆಗೆ ಎಂಟು ವಾರದ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ಚೆಲುವೇ ಗೌಡ ವಿವರಿಸಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳಲ್ಲಿಯೇ ಸುಮಾರು 1000 ಕೋಟಿ ಗಳಿಕೆ ಮಾಡುವ ಗಡಿಯಲ್ಲಿದೆ. ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟಿಟಿಗೆ ಬಂದಿದೆ. ಅಕ್ಟೋಬರ್ 31 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟಿಟಿಗೆ ಬಂದಿದೆ. ಇದು, ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ