ನೂರಾರು ಕೋಟಿ ಖರ್ಚು, ಕನ್ನಡವೇ ಸರಿಯಿಲ್ಲ: ‘ಕಾಂತಾರ 1’ ಬಗ್ಗೆ ಅಸಮಾಧಾನ
Kantara Chapter 1 movie: ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ನಿರ್ಮಾಣ ಸಂಸ್ಥೆ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ರಿಷಬ್ ಅವರೇ ಹೇಳಿರುವಂತೆ ಸೆಟ್ಗಳು, ವಿಎಫ್ಎಕ್ಸ್ ಇನ್ನೂ ಹಲವು ವಿಷಯಗಳ ಬಗ್ಗೆ ವೀಶೇಷ ಗಮನ ವಹಿಸಲಾಗಿದೆ. ಆದರೆ ಇದೀಗ ಸಿನಿಮಾ ಬಿಡುಗಡೆ ಆದಮೇಲೆ ನೆಟ್ಟಿಗರು ಸಿನಿಮಾದ ಬಗ್ಗೆ ಒಂದು ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಿಷಬ್ ಶೆಟ್ಟಿ (Rishab Shetty) ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾ ಜನಪ್ರೀತಿ ಗಳಿಸಿಕೊಂಡಿದೆ. ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬಂದಿದೆ. ಅಕ್ಟೋಬರ್ 31 ರಿಂದ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಒಟಿಟಿ ಪ್ರದರ್ಶನ ಶುರುವಾಗಿದೆ. ಸಿನಿಮಾ ಅನ್ನು ಒಟಿಟಿಯಲ್ಲಿ ನೋಡಿದವರು ಸಿನಿಮಾ ಅನ್ನು ಮೆಚ್ಚಿಕೊಂಡಿದ್ದಾರಾದರೂ ಒಂದು ವಿಷಯದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಟಿಟಿಗೆ ಬಂದಿದ್ದು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಹಲವು ಭಾಷೆಗಳ ಆಯ್ಕೆ ಇರುವಂತೆಯೇ ಸಿನಿಮಾದ ಸಬ್ ಟೈಟಲ್ಗೂ ಸಹ ಇಂಗ್ಲೀಷ್ ಮತ್ತು ಕನ್ನಡ ಭಾಷೆಯ ಆಯ್ಕೆ ಇದೆ. ಆದರೆ ಸಿನಿಮಾನಲ್ಲಿ ಬಳಸಲಾಗಿರುವ ಕನ್ನಡ ಸಬ್ಟೈಟಲ್ನ ಗುಣಮಟ್ಟ ಬಹಳ ಕಳಪೆಯಾಗಿದೆ ಎಂದು ಸಿನಿಮಾ ಅನ್ನು ಒಟಿಟಿಯಲ್ಲಿ ವೀಕ್ಷಿಸಿರುವ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿನಿಮಾದ ಕನ್ನಡ ಟೈಟಲ್ಗಳನ್ನು ಇಂಗ್ಲೀಷ್ನಿಂದ ಯಥಾವತ್ತು ಶಬ್ದಸಹ ತರ್ಜುಮೆ ಮಾಡಿ ಬಳಸಲಾಗಿದೆ. ಹೀಗಾಗಿ ಹಲವು ಕಡೆ ಅರ್ಥ ವ್ಯತ್ಯಾಸಗಳು ಉಂಟಾಗಿವೆ. ಮಾತ್ರವಲ್ಲದೆ ಕೆಲವೆಡೆ ಬಹಳ ಸರಳವಾದ ಕನ್ನಡ ಪದಗಳ ವ್ಯಾಕರಣ, ಕಾಗುಣಿತಗಳು ತಪ್ಪಾಗಿದೆ. ಅರ್ಥ ವ್ಯತ್ಯಾಸವುಂಟಾಗಿರುವ ಹಲವು ವಾಕ್ಯಗಳನ್ನು ನೆಟ್ಟಿಗರು ಗುರುತಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಸಂತಾನೋತ್ಪತ್ತಿ ಸಂಗೀತ’, ʻಗಾಂಗ್ ಶಬ್ಧಗಳ ಎಚ್ಚರ’, ʻಸಿನಿಸ್ಟರ್ ಸಂಗೀತ ನುಡಿಸುತ್ತಿದೆ’, ʻಶಂಖದ ಹೊಡೆತಗಳು’, ʻಸುಡುವ ಲಾಗ್ ತುಣುಕುಗಳು’, ʻಬೆರ್ಮೆ ಸೈನ್ಯವು ಕೋಪದಿಂದ ರೊಚ್ಚಿಗೆ ಎದ್ದಿದ’, ʻರಾಜಶೇಖರ ಗುಜುಗುಜುಗಳು’, ʻಯುದ್ಧಭೂಮಿಯಲ್ಲಿ ಗುರುಗುಟ್ಟುವ ಶಬ್ಧಗಳು’ ಇಂಥಹಾ ತಪ್ಪುಗಳನ್ನು ಅನೇಕರು ಗುರುತಿಸಿದ್ದಾರೆ.
ಇದನ್ನೂ ಓದಿ:‘ಕಾಂತಾರ 1’ ಇನ್ನೂ ಹಲವು, ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು
‘ನೂರಾರು ಕೋಟಿ ಹಾಕಿ ಸಿನಿಮಾ ಮಾಡಿದ್ದೀರ ಆದರೆ ಕನ್ನಡ ಸಬ್ಟೈಟಲ್ನ ಬಗ್ಗೆ ಗಮನವನ್ನೇ ಹರಿಸಿಲ್ಲ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮಾತ್ರವಲ್ಲ ಹಲವು ಸಿನಿಮಾಗಳು ಹೀಗೆಯೇ ಕನ್ನಡ ಸಬ್ಟೈಟಲ್ ಬಗ್ಗೆ ಉಡಾಫೆ ನಿಲುವು ತಳೆದಿವೆ ಎಂದು ಕೆಲವರು ಆರೋಪಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ವಿಷಯದಲ್ಲಿ ಸಿನಿಮಾದಲ್ಲಿ ಪಾತ್ರಗಳು ಹೇಳುವ ಸಂಭಾಷಣೆಗಳು, ಸಬ್ ಟೈಟಲ್ನಲ್ಲಿ ಸರಿಯಾಗಿವೆ, ಅವುಗಳಲ್ಲಿ ಯಾವುದೇ ತಪ್ಪುಗಳು ಇಲ್ಲ. ಆದರೆ ಸಂಭಾಷಣೆಗಳು ಅಲ್ಲದೆ ದೃಶ್ಯಗಳ ವಿವರಣೆ ಸಮಯದಲ್ಲಿ ಮಾತ್ರವೇ ಇಂಥಹಾ ತಪ್ಪುಗಳು ಆಗಿವೆ. ದೃಶ್ಯಗಳ ಇಂಗ್ಲೀಷ್ ವಿವರಣೆಯನ್ನು ಯಥಾವತ್ತು ಕನ್ನಡಕ್ಕೆ ತರ್ಜುಮೆ ಮಾಡಿರುವುದರಿಂದಾಗಿ ಈ ಸಮಸ್ಯೆ ಉಂಟಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




