
ಪವನ್ ಕಲ್ಯಾಣ್ (Pawan Kalyan) ಅವರಲ್ಲಿ ಈಗ ತಪ್ಪಿಸ್ಥ ಭಾವನೆ ಕಾಡುತ್ತಿದೆ ಎಂದರೂ ತಪ್ಪಾಗಲಾರದು. ಏಕೆಂದರೆ ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದು, ಅವರ ಸಿನಿಮಾಗಳು ಮೂಲೆಗುಂಪಾಗಿವೆ. ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತು ಹೋಗಿವೆ. ಈ ಎಲ್ಲ ಕಾರಣದಿಂದ ಪವನ್ ಕಲ್ಯಾಣ್ ಅವರಿಗೆ ತಪ್ಪು ಮಾಡಿದ್ದೇನೆ ಎನ್ನುವ ಭಾವನೆ ಕಾಡುತ್ತಿದೆಯಂತೆ. ಈಗ ಪವನ್ ಕಲ್ಯಾಣ್ ಅವರು ಒಂದು ದೊಡ್ಡ ನಿರ್ಧಾರ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಪವನ್ ಕಲ್ಯಾಣ್ ಕೈಯಲ್ಲಿ ಈಗ ಮುಖ್ಯವಾಗಿ ಮೂರು ಸಿನಿಮಾಗಳು ಇವೆ. ‘ಹರಿ ಹರ ವೀರ ಮಲ್ಲು’, ‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’. ಉಪಮುಖ್ಯಮಂತ್ರಿ ಆಗುವುದಕ್ಕೂ ಮೊದಲು ಅವರು ಒಪ್ಪಿಕೊಂಡ ಸಿನಿಮಾಗಳು ಇದಾಗಿವೆ. ಆದರೆ, ಉಪಮುಖ್ಯಮಂತ್ರಿ ಆದ ಬಳಿಕ ಪವನ್ ಕಲ್ಯಾಣ್ ಅವರು ಯಾರ ಕೈಗೂ ಸಿಗದಂತೆ ಆದರು. ರಾಜಕೀಯದಲ್ಲಿ ಇರೋ ಒತ್ತಡದ ಕಾರಣಕ್ಕೆ ಸಿನಿಮಾ ಮಾಡುವುದು ಅಸಾಧ್ಯ ಆಯಿತು ಎಂದೇ ಹೇಳಬಹುದು.
ಈಗಾಗಲೇ ‘ಹರಿಹರ ವೀರ ಮಲ್ಲು’ ಹಾಗೂ ‘ಒಜಿ’ ಸಿನಿಮಾಗಳು ಒಟಿಟಿಗೆ ಮಾರಾಟ ಆಗಿವೆ. ಒಟಿಟಿಯವರು ಪವನ್ ಕಲ್ಯಾಣ್ ಮಾರುಕಟ್ಟೆಯನ್ನು ಗಮನಿಸಿ ಈ ಸಿನಿಮಾ ಖರೀದಿಸಿದ್ದರು ಎಂದೇ ಹೇಳಬಹುದು. ಆದರೆ, ಸಿನಿಮಾ ಕೆಲಸಗಳು ನಡೆಯುತ್ತಿಲ್ಲ ಎಂದು ಒಟಿಟಿಯವರು ತಲೆಬಿಸಿ ಮಾಡಿಕೊಂಡಿದ್ದಾರೆ. ತಂಡದ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ, ಸಿನಿಮಾ ತಂಡದವರು ಮಾತ್ರ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ. ಇನ್ನು, ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಹಳ ಹಿಂದಿನಿಂದ ಹೋಲ್ಡ್ನಲ್ಲಿ ಇದೆ.
ಇದನ್ನೂ ಓದಿ:ಚಿತ್ರರಂಗದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪವನ್ ಕಲ್ಯಾಣ್; ಇನ್ನಾದರೂ ಬದಲಾಗ್ತಾರಾ?
ಇತ್ತೀಚೆಗೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಡಿವಿವಿ ದಾನಯ್ಯ ಜೊತೆ ಪವನ್ ಕಲ್ಯಾಣ್ ಅವರು ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಸಿನಿಮಾನ ಯಾವ ಹಂತದಲ್ಲಿ ಶೂಟ್ ಮಾಡಬೇಕು ಎನ್ನುವ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ‘ಒಜಿ’ ಚಿತ್ರವನ್ನು ಪವನ್ ಕಲ್ಯಾಣ್ ಶೂಟ್ ಮಾಡಲಿದ್ದಾರೆ. ಈ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಕೆಲವೇ ದಿನಗಳ ಅವಶ್ಯಕತೆ ಇದ್ದು, ಶೂಟ್ ಮುಗಿಸಿ ಅವರು ‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್ ಶೂಟ್ ಮಾಡಲಿದ್ದಾರೆ. ಆ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳುವ ಬಗ್ಗೆ ಅವರು ಯೋಚಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ