‘ಚಿತ್ರಮಂದಿರ ಮಾಫಿಯಾ’ ವಿರುದ್ಧ ಪವನ್ ಕಲ್ಯಾಣ್ ಸಮರ

Pawan Kalyan: ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರಮಂದಿರಗಳ ಬಂದ್​ಗೆ ಕರೆ ನೀಡಿದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸಚಿವ ಕಂಡುಲ ದುರ್ಗೇಶ್​ಗೆ ಸಲಹೆ ನೀಡಿರುವ ಪವನ್ ಕಲ್ಯಾಣ್, ಈ ಪಿತೂರಿಯ ಭಾಗವಾಗಿರುವ ಕೆಲವು ಪ್ರಮುಖ ನಿರ್ಮಾಪಕರು ಹಾಗೂ ಪವನ್ ಅವರದ್ದೇ ಜನಸೇನಾ ಪಕ್ಷದ ಕೆಲವರನ್ನು ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

‘ಚಿತ್ರಮಂದಿರ ಮಾಫಿಯಾ’ ವಿರುದ್ಧ ಪವನ್ ಕಲ್ಯಾಣ್ ಸಮರ
Pawan Kalyan

Updated on: May 28, 2025 | 6:23 PM

ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಿಡುಗಡೆ ಕೆಲವೇ ದಿನಗಳಿವೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚಿತ್ರಮಂದಿರಗಳು ಬಂದ್​ಗೆ ಕರೆ ನೀಡಿದ್ದವು. ಈ ಬಂದ್ ಕರೆ ಹಿಂದೆ ರಾಜಕೀಯ ಪಿತೂರಿ ಇದೆ ಎನ್ನಲಾಗಿತ್ತು. ಇದೀಗ ಬಂದ್ ಹಿಂಪಡೆಯಲಾಗಿದೆಯಾದರೂ ಪವನ್ ಕಲ್ಯಾಣ್, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿನಿಮಾಟೊಗ್ರಫಿ ಸಚಿವ ಕಂಡುಲ ದುರ್ಗೇಶ್ ಅವರೊಟ್ಟಿಗೆ ಸಭೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದ್ದಾರೆ.

ಚಿತ್ರಮಂದಿರಗಳ ಬಂದ್​ಗೆ ಕರೆ ನೀಡಿದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸಚಿವ ಕಂಡುಲ ದುರ್ಗೇಶ್​ಗೆ ಸಲಹೆ ನೀಡಿರುವ ಪವನ್ ಕಲ್ಯಾಣ್, ಈ ಪಿತೂರಿಯ ಭಾಗವಾಗಿರುವ ಕೆಲವು ಪ್ರಮುಖ ನಿರ್ಮಾಪಕರು ಹಾಗೂ ಪವನ್ ಅವರದ್ದೇ ಜನಸೇನಾ ಪಕ್ಷದ ಕೆಲವರನ್ನು ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಯಾವುದೇ ನಿರ್ಮಾಪಕರು ತಮ್ಮ ಸಿನಿಮಾಗಳ ಟಿಕೆಟ್ ದರ ಹೆಚ್ಚಳಕ್ಕೆ ಮನವಿ ಸಲ್ಲಿಸುವುದಕ್ಕೆ ಕಡ್ಡಾಯವಾಗಿ ಫಿಲಂ ಚೇಂಬರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು, ವೈಯಕ್ತಿಕವಾಗಿ ಯಾವುದೇ ಸಚಿವರನ್ನು ಭೇಟಿ ಆಗಿ ಮನವಿ ಸಲ್ಲಿಸುವಂತಿಲ್ಲ ಎಂದಿದ್ದಾರೆ.

ಇದರ ಜೊತೆಗೆ ಚಿತ್ರಮಂದಿರಗಳ ಗುಣಮಟ್ಟ ಹೆಚ್ಚಿಸುವ ಬಗ್ಗೆಯೂ ಕೆಲವಾರು ಸೂಚನೆಗಳನ್ನು ಪವನ್ ಕಲ್ಯಾಣ್ ನೀಡಿದ್ದಾರೆ. ವಿಶೇಷವಾಗಿ ಚಿತ್ರಮಂದಿರಗಳ ಟಿಕೆಟ್ ಬೆಲೆ, ಮಲ್ಟಿಪ್ಲೆಕ್ಸ್​ಗಳಲ್ಲಿ ಮಾರಾಟವಾಗುವ ದುಬಾರಿ ತಿನಿಸುಗಳ ಬೆಲೆಗಳ ಮೇಲೆ ನಿಯಂತ್ರಣ ಹೇರುವ ಬಗ್ಗೆ ಸಭೆಯಲ್ಲಿ ಪವನ್ ಕಲ್ಯಾಣ್ ಚರ್ಚಿಸಿದ್ದಾರೆ. ಟಿಕೆಟ್ ಬೆಲೆ, ತಿಂಡಿ ತಿನಿಸುಗಳ ಬೆಲೆ ಕಡಿಮೆ ಮಾಡಿದರೆ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತದೆ, ಇದರಿಂದ ಸರ್ಕಾರಕ್ಕೆ ಕಂದಾಯದ ಹರಿವು ಹೆಚ್ಚುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಪವನ್ ಕಲ್ಯಾಣ್​ರ ಮತ್ತೊಂದು ಸಿನಿಮಾ ಬಿಡುಗಡೆಗೂ ಮುಹೂರ್ತ ನಿಗದಿ

ಮಲ್ಟಿಪ್ಲೆಕ್ಸ್​ಗಳು ಮಾತ್ರವೇ ಅಲ್ಲದೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಶುಚಿಗೆ ಆದ್ಯತೆ ನೀಡುವುದು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾರಾಟವಾಗುವ ತಿಂಡಿ ತಿನಿಸುಗಳ ಗುಣಮಟ್ಟದ ಪರೀಕ್ಷೆ ಮಾಡುವುದು ಇನ್ನಿತರೆಗಳನ್ನು ಸಂಬಂಧಿತ ಇಲಾಖೆ ಅಧಿಕಾರಿಗಳು ಮಾಡುವಂತೆ ಪವನ್ ಕಲ್ಯಾಣ್ ಸಲಹೆ ನೀಡಿದ್ದಾರೆ.

ಪವನ್ ಕಲ್ಯಾಣ್ ಇತ್ತೀಚೆಗಷ್ಟೆ ಬಹಿರಂಗ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಕಳೆದ ಸರ್ಕಾರವು ಚಿತ್ರರಂಗಕ್ಕೆ ಭಾರಿ ಹಿಂಸೆ ನೀಡಿತ್ತು, ಅವುಗಳಿಂದ ಚಂದ್ರಬಾಬು ನಾಯ್ಡು ಚಿತ್ರರಂಗವನ್ನು ಕಾಪಾಡಿದರು. ಆದರೆ ಈ ವರೆಗೆ ಒಬ್ಬರೂ ಸಹ ಚಿತ್ರರಂಗದ ಕಡೆಯಿಂದ ಬಂದು ನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸಿಲ್ಲ ಎಂದು ದೂರಿದ್ದಾರೆ. ಮುಂದುವರೆದು, ತಮ್ಮ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಚಿತ್ರಮಂದಿರ ಬಂದ್ ಮಾಡುವ ಪಿತೂರಿ ಮಾಡಿದ್ದನ್ನು ಪರೋಕ್ಷವಾಗಿ ಟೀಕೆ ಮಾಡಿರುವ ಪವನ್, ಒಳ್ಳೆಯ ‘ರಿಟರ್ನ್ ಗಿಫ್ಟ್’ ಕೊಟ್ಟಿದ್ದೀರಿ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ