ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ‘ಆ ನಾಲ್ವರು’ ಯಾರು?
Pawan Kalyan: ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವಿರುದ್ಧ ಪಿತೂರಿ ನಡೆದಿದೆ. ಅವರನ್ನು ತುಳಿಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಬಹಿರಂಗ ಪತ್ರ ಬರೆದಿದ್ದಾರೆ. ಅಂದಹಾಗೆ ಪವನ್ ವಿರುದ್ಧ ಪಿತೂರಿ ಮಾಡಿರುವುದು ತೆಲುಗು ಚಿತ್ರರಂಗದ ‘ಆ ನಲುಗುರು’ ಅಂತೆ ಅಂದಹಾಗೆ ಆ ನಾಲ್ವರು ಯಾರು?

ಪವನ್ ಕಲ್ಯಾಣ್ (Pawan Kalyan), ತೆಲುಗು ಚಿತ್ರರಂಗಕ್ಕೆ ಬರೆದಿರುವ ಬಹಿರಂಗ ಪತ್ರ, ತೆಲುಗು ಚಿತ್ರರಂಗವನ್ನು ಅಲ್ಲಾಡಿಸಿಬಿಟ್ಟಿದೆ. ಪತ್ರದ ಮೂಲಕ ಒಂದು ರೀತಿಯ ಎಚ್ಚರಿಕೆಯನ್ನು ಪವನ್ ಕಲ್ಯಾಣ್ ನೀಡಿದ್ದಾರೆ. ಪವನ್ ಕಲ್ಯಾಣ್ ಅವರ ಪತ್ರ ವೈರಲ್ ಆಗುತ್ತಿದ್ದಂತೆ ನಿರ್ಮಾಪಕ ಅಲ್ಲು ಅರವಿಂದ್ ಪತ್ರಿಕಾಗೋಷ್ಠಿ ನಡೆಸಿ ‘ಆ ನಾಲುಗುರು’ (ಆ ನಾಲ್ವರು) ಗುಂಪಿನಲ್ಲಿ ನಾನಿಲ್ಲ, ನನ್ನದು ಏನೂ ತಪ್ಪಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಅಸಲಿಗೆ ಪವನ್ ಕಲ್ಯಾಣ್ ವಿರುದ್ಧ ಪಿತೂರಿ ಮಾಡಿದ ಆ ನಾಲ್ವರು (ಆ ನಲುಗುರು) ಯಾರು?
ತೆಲುಗು ಚಿತ್ರರಂಗದ ಬೆಳ್ಳಿ ತೆರೆ ಮೇಲೆ ಎರಡು ಕುಟುಂಬಗಳ ಹಿಡಿತ ಜೋರಾಗಿದೆ. ನಂದಮೂರಿ ಕುಟುಂಬ ಮತ್ತು ಮೆಗಾಸ್ಟಾರ್ ಕುಟುಂಬ. ಈಗ ಈ ಎರಡೂ ಕುಟುಂಬದವರು ಸೇರಿ ಆಂಧ್ರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ಬೆಳ್ಳಿ ತೆರೆ ಮೇಲೆ ಎರಡು ಕುಟುಂಬಗಳ ಹಿಡಿತ ಇದೆ ಎಂಬುದು ಸರಿ ಆದರೆ ಸಿನಿಮಾಗಳ ವಿತರಣೆ, ಪ್ರದರ್ಶನ ಇವುಗಳ ಮೇಲೆ ಹಿಡಿತ ಸಾಧಿಸಿರುವುದು ‘ಆ ನಲುಗುರು’ ಎಂದೇ ಕರೆಯಲಾಗುವ ನಾಲ್ವರು ಸಿನಿಮಾ ನಿರ್ಮಾಪಕರು.
ದಿಲ್ ರಾಜು, ಸುರೇಶ್ ಬಾಬು, ಅಲ್ಲು ಅರವಿಂದ್ ಮತ್ತು ಏಷಿಯನ್ ಸುನಿಲ್. ಈ ನಾಲ್ವರು ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸುಮಾರು 75% ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಲೀಸ್ಗೆ ತೆಗೆದುಕೊಂಡಿದ್ದು ಇಡೀ ಚಿತ್ರರಂಗವನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ತಮಗೆ ಬೇಕಾದ ಸಿನಿಮಾಗಳನ್ನು ತೆಗೆದುಕೊಳ್ಳುತ್ತಾರೆ, ಬೇಡವಾದ ಸಿನಿಮಾಗಳನ್ನು ತುಳಿಯುತ್ತಿದ್ದಾರೆ. ಈ ನಾಲ್ವರ ಮಾಫಿಯಾ ಕಳೆದ ಕೆಲ ವರ್ಷಗಳಿಂದಲೂ ಪರೋಕ್ಷ ಚರ್ಚೆಗಳು ಚಾಲ್ತಿಯಲ್ಲಿಯೇ ಇವೆ.
ಇದೀಗ ಈ ನಾಲ್ವರು ಒಟ್ಟು ಸೇರಿಯೇ ಪವನ್ ಕಲ್ಯಾಣ್ಗೆ ಬುದ್ಧಿ ಕಲಿಸಲೆಂದು, ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ವೇಳೆಗೆ ಸರಿಯಾಗಿ ಚಿತ್ರಮಂದಿರಗಳ ಬಂದ್ಗೆ ಮುಂದಾಗಿಸಿದ್ದರು ಎನ್ನಲಾಗುತ್ತಿದೆ. ಆದರೆ ಪವನ್ ಕಲ್ಯಾಣ್ ತಮ್ಮ ಪ್ರಭಾವ ಬಳಸಿ ತೆಲುಗು ಫಿಲಂ ಚೇಂಬರ್ ಮೂಲಕ ಒತ್ತಡ ಹಾಕಿಸಿ ಬಂದ್ ಅನ್ನು ಮುಂದಕ್ಕೆ ಹಾಕಿಸಿದ್ದಾರೆ. ಅದರ ಬೆನ್ನಲ್ಲೆ ಬಹಿರಂಗ ಪತ್ರ ಬರೆದು, ‘ನನಗೆ ಕೊಟ್ಟಿರುವ ರಿಟರ್ನ್ ಗಿಫ್ಟ್ಗೆ ಧನ್ಯವಾದ’ ಎಂದು ಸಹ ಪರೋಕ್ಷವಾಗಿ ವ್ಯಂಗ್ಯವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಎಚ್ಚರಿಕೆಗೆ ಬೆದರಿದ ಅಲ್ಲು ಅರವಿಂದ್, ತುರ್ತು ಸುದ್ದಿಗೋಷ್ಠಿ
ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಏಷಿಯನ್ ಸುನಿಲ್ ಅವರದ್ದು ಸುಮಾರು 400 ಚಿತ್ರಮಂದಿರಗಳು ಲೀಸ್ಗೆ ಇವೆಯಂತೆ. ದಿಲ್ ರಾಜು ಅವರ ಬಳಿ 200 ಚಿತ್ರಮಂದಿರಗಳು ಇದ್ದರೆ ಸುರೇಶ್ ಬಾಬು ಬಳಿ ಸುಮಾರು 700 ಚಿತ್ರಮಂದಿರಗಳು ಇವೆಯಂತೆ. ಅಲ್ಲು ಅರವಿಂದ್ ಬಳಿಯೂ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳು ಇವೆಯಂತೆ. ಚಿತ್ರಮಂದಿರಗಳ ಮೂಲಕ ಸಿನಿಮಾ ವಿತರಕರು, ಸಿನಿಮಾ ನಾಯಕರು, ನಿರ್ಮಾಪಕರು ಎಲ್ಲರನ್ನೂ ತಮ್ಮ ತಾಳಕ್ಕೆ ಕುಣಿಸುತ್ತಿದ್ದಾರಂತೆ ಈ ನಾಲ್ವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




