ಮಡೆನೂರು ಮನು ವಿರುದ್ಧ ಶಿವಣ್ಣ ಅಭಿಮಾನಿಗಳ ಆಕ್ರೋಶ, ಚೇಂಬರ್ಗೆ ದೂರು
Madenuru Manu: ಅತ್ಯಾಚಾರ ಆರೋಪಿ ಮಡೆನೂರು ಮನುಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಲೇ ಇವೆ. ಮಡೆನೂರು ಮನುವಿನದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಆಡಿಯೋನಲ್ಲಿ ಶಿವರಾಜ್ ಕುಮಾರ್ ಹಾಗೂ ಇತರೆ ನಟರ ಬಗ್ಗೆ ಮನು ತುಚ್ಛವಾಗಿ ಮಾತನಾಡಿದ್ದ. ಇದೀಗ ಶಿವರಾಜ್ ಕುಮಾರ್ ಅಭಿಮಾನಿಗಳು ಮನು ವಿರುದ್ಧ ದೂರು ನೀಡಿದ್ದಾರೆ.

ಮಡೆನೂರು ಮನು (Madenuru Manu) ಸಿನಿಮಾ ಹೀರೋ ಆಗಿ ಎಂಟ್ರಿ ಕೊಡುವ ಸಮಯದಲ್ಲಿಯೇ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣಗಳು ಮನು ವಿರುದ್ಧ ದಾಖಲಾಗಿದ್ದು, ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಮಡೆನೂರು ಮನುಗೆ ಒಂದರ ಮೇಲೊಂದು ಹೊಡೆತ ಬೀಳುತ್ತಿದ್ದು, ಇದೀಗ ಮಡೆನೂರು ಮನು ಅದ್ದು ಎನ್ನಲಾದ ಹಳೆಯ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಇನ್ನೂ ಕೆಲವು ಸ್ಟಾರ್ ನಟರನ್ನು ತುಚ್ಛವಾಗಿ ಬೈಯ್ದಿರುವುದು ದಾಖಲಾಗಿದೆ.
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಮನು ವಿರುದ್ಧ ಆಕ್ರೋಶ ಹೊರಹಾಕಿದ್ದು, ಇಂದು (ಮೇ 26) ಫಿಲಂ ಚೇಂಬರ್ಗೆ ಹೋಗಿ ಮಡೆನೂರು ಮನು ವಿರುದ್ಧ ದೂರು ಸಹ ದಾಖಲು ಮಾಡಿದ್ದಾರೆ. ಅತ್ಯಾಚಾರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಹೊತ್ತಿರುವ ಹಾಗೂ ಚಿತ್ರರಂಗದ ಹಿರಿಯ ನಟರ ಬಗ್ಗೆ ಗೌರವ ಇಲ್ಲದ, ನಟರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಮನು ಅನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂದು ಅಭಿಮಾನಿಗಳು ದೂರು ಸಲ್ಲಿಸಿದ್ದಾರೆ.
ಫಿಲಂ ಚೇಂಬರ್ಗೆ ಮಾತ್ರವೇ ಅಲ್ಲದೆ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಕ್ಕೂ ಸಹ ಮಡೆನೂರು ಮನು ವಿರುದ್ಧ ದೂರು ಸಲ್ಲಿಸಿದ್ದು, ಮೇ 28 ರಂದು ಎನ್ಆರ್ ರಮೇಶ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಡೆನೂರು ಮನು ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡುವುದಾಗಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಸಂತ್ರಸ್ತೆ ಜತೆ ಮಡೆನೂರು ಮನು ನಡೆಸಿದ 31 ತಿಂಗಳ ವಾಟ್ಸಪ್ ಚಾಟ್ ಲಭ್ಯ
ಮಡೆನೂರು ಮನು ಅವರದ್ದು ಎನ್ನಲಾದ ವೈರಲ್ ಆಡಿಯೋನಲ್ಲಿ, ಶಿವಣ್ಣ ಇನ್ನೊಂದು ಆರು ವರ್ಷ ಬದುಕುತ್ತಾನೆ, ದರ್ಶನ್ ಈಗಾಗಲೇ ಸತ್ತೇ ಹೋಗಿದ್ದಾನೆ. ಧ್ರುವ ಸರ್ಜಾ ಇನ್ನು ಎಂಟು ವರ್ಷ ಕ್ರೇಜ್ ಇದ್ದರೆ ಹೆಚ್ಚು, ಈ ಮೂವರ ನಡುವೆ ಕಾಂಪಿಟೇಶನ್ ಕೊಡೋಕೆ ನಿಂತಿರುವ ಗಂಡು ಗಲಿ ಕಣ್ರಿ ನಾನು’ ಎಂದು ದುರಹಂಕಾರದ ಮಾತುಗಳನ್ನು ಮಡೆನೂರು ಮನು ಆಡಿದ್ದಾನೆ. ಇದು ಶಿವರಾಜ್ ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಅಭಿಮಾನಿಗಳು ಬಹುವಾಗಿ ಕೆರಳಿಸಿದೆ.
‘ಮಡೆನೂರು ಮನು’ ನಟಿಸಿರುವ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಈಗ ಸ್ಟಾರ್ ನಟರ ಅಭಿಮಾನಿಗಳು ಮಡೆನೂರು ಮನು ವಿರುದ್ಧ ದೂರು ನೀಡಿದ್ದು, ಚಿತ್ರರಂಗದಿಂದಲೇ ಮನು ದೂರಾಗುವ ಸಾಧ್ಯತೆ ದಟ್ಟವಾಗಿದೆ. ಇಂದು (ಮೇ 26) ಮಡೆನೂರು ಮನುವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇಂದು ಜಾಮೀನು ಸಿಗಲಿದೆಯೇ ಅಥವಾ ನ್ಯಾಯಾಂಗ ಬಂಧನ ಮುಂದುವರೆಯಲಿದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




